ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ಯಾರು?
ಕನ್ನಡ ಸುದ್ದಿ  /  ಮನರಂಜನೆ  /  ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ಯಾರು?

ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳ ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ಯಾರು?

ಪ್ರತಿಯೊಬ್ಬರ ಜೀವನದಲ್ಲೂ ಅದೆಷ್ಟೇ ಜನ ಬಂದು ಹೋದರೂ, ಸಂಗಾತಿಗಳ ಸಂಖ್ಯೆ ಕಡಿಮೆಯೇ. ಕನ್ನಡದ ಜನಪ್ರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರ ಜೀವನದಲ್ಲೂ ಮೂವರು ಸಂಗಾತಿಗಳು ಇದ್ದಾರಂತೆ. (ವರದಿ: ಚೇತನ್‌ ನಾಡಿಗೇರ್‌)

ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳು ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ಯಾರು?
ನಾದಬ್ರಹ್ಮ ಹಂಸಲೇಖ ಜೀವನದ ಮೂವರು ಸಂಗಾತಿಗಳು ವಿವರ ಬಹಿರಂಗ, ಒಬ್ಬರು ಧರ್ಮಪತ್ನಿ ಲತಾ, ಇನ್ನಿಬ್ಬರು ಯಾರು?

ಮೂವರು ಸಂಗಾತಿಗಳು ಇದ್ದಾರಂತೆ. ಅವರು ಯಾರು ಎಂಬುದನ್ನು ಟಿವಿ 9ಗೆ ಕೆಲವು ತಿಂಗಳುಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಹಂಸಲೇಖ, ‘ಈ ಚಿಕ್ಕ ಜೀವನದಲ್ಲಿ ಮೂವರು ಪ್ರಮುಖ ವ್ಯಕ್ತಿಗಳು ಸಿಕ್ಕರು. ನನ್ನ ಸಂಗಾರಿ ಲತಾ. ಸಂಗೀತ ಸಂಗಾತಿ ಎಸ್‍.ಪಿ. ಬಾಲಸುಬ್ರಹ್ಮಣ್ಯಂ. ನನ್ನ ಸಿನಿಮಾ ಸಂಗಾತಿ ರವಿಚಂದ್ರನ್‍. ನನ್ನ ಜೀವನವನ್ನು ಈ ಮೂರು ಬೆಳಕುಗಳು ಕಟ್ಟಿಕೊಟ್ಟಿವೆ. ಹಾಗಾಗಿ, ತಿರುಗಿ ನೋಡಬೇಕು ಎಂದು ಹೇಳೋದು. ತಿರುಗಿ ನೋಡಿದರೆ ಮೂಲ ನೆನಪಿರುತ್ತದೆ’ ಎಂದು ಹೇಳಿದ್ದಾರೆ.

ಇನ್ನು, ಅವರ ಮನೆಯಲ್ಲಿ ರವಿಚಂದ್ರನ್‍ ಮತ್ತು ಅವರ ತಂದೆ ವೀರಾಸ್ವಾಮಿಯವರ ಜೊತೆಗಿರುವ ಫೋಟೋಗಳಿವೆ. ಈ ಫೋಟೋಗಳ ಮಹತ್ವವನ್ನು ವಿವರಿಸುವ ಅವರು, ‘ನಾನು ಶ್ರಮಿಕವರ್ಗದವನು. ಯಾವುದೋ ಪುಣ್ಯದಿಂದ ಓದಿನ ಸಂಸ್ಕಾರ, ಸಂಸ್ಕಾರ ಬಂದಿದೆ. ಅದು ವಿಶೇಷ ನನಗೆ. ಆದರೂ ನನ್ನ ಬದುಕಿನ ವಿನ್ಯಾಸ ಚಿಕ್ಕದು. ದುಡಿ, ತಿನ್ನು, ಮಲಗು ಇಷ್ಟೇ ಆಗುತ್ತದೆ. ಇಷ್ಟೇ ಚಿಕ್ಕ ವಿನ್ಯಾಸಕ್ಕೆ ಅಷ್ಟು ದೊಡ್ಡ ಕ್ಯಾನ್ವಾಸ್‍ ಹೇಗೆ ಸಿಕ್ಕಿತು? ಒಂದು ಪ್ರತಿಭೆ. ಅದಕ್ಕೆ ಅವಕಾಶ ಕೊಟ್ಟ ವ್ಯಕ್ತಿ ಬಹಳ ಮುಖ್ಯವಾಗುತ್ತಾರೆ. ಅದು ಸಾಮಾನ್ಯವಲ್ಲ. ಅವರು ಗೊತ್ತಿಲ್ಲದೆ ಮಾಡುತ್ತಾರೆ. ಅವರು ನನ್ನ ಕೈಹಿಡಿದು, ಬನ್ನಿ ರಾಜು ಎಂದು ಕರೆದುಕೊಂಸಡು ಬಂದರು. ನಾನು ಯಾವತ್ತೂ, ಯಾರನ್ನೂ ಕೆಲಸ ಕೇಳಲಿಲ್ಲ. ಬಾಗಿಲು ಕಾಯಲಿಲ್ಲ. ಅವಮಾನ ಅನುಭವಿಸಲಿಲ್ಲ. ಅವರು ನನ್ನ ಪ್ರತಿಭೆ ನೋಡಿ ಅವಕಾಶ ಕೊಟ್ಟರು. ಮೊದಲ ಅವಕಾಶ ಚಿಕ್ಕದು. ಎರಡನೆಯದು ಭಾರೀ ದೊಡ್ಡದು. ‘ಪ್ರೇಮ ಲೋಕ’ದಂತಹ ಸಿನಿಮಾ ಮಾಡಿ ಅಂತ ಸುಮ್ಮನೆ ಕೊಟ್ಟುಬಿಟ್ಟರು. ಎಷ್ಟು ಧೈರ್ಯ ಬೇಕು ಅದಕ್ಕೆ. ಆ ಅವಕಾಶ ಕೊಟ್ಟಿದ್ದಿಕ್ಕೆ ಹಂಸಲೇಖ ಇಲ್ಲಿದ್ದಾನೆ’ ಎಂದಿದ್ದಾರೆ.

ಈ ವಿಷಯವನ್ನು ಮುಂದುರೆಸಿರುವ ಅವರು, ‘ವೀರಾಸ್ವಾಮಿ ಕೈ ಇಟ್ಟರೆ ಅದು ಚಿನ್ನ. ಅದು ಸಿನಿಮಾ ಆಗಲೀ, ಬೇರೆ ಕೆಲಸ ಆಗಲಿ. ಅವರು ಮುಟ್ಟಿದರೆ ಚಿನ್ನ. ವೀರಾಸ್ವಾಮಿಗಳು ನನ್ನಗೊಂದು ಮಾತು ಹೇಳಿದ್ದರು. ‘ನನ್ನ ಮಗ ಎಲ್ಲೋ ಇದ್ದ ಒಂದು ರತ್ನವನ್ನು ಈಚೆ ತಂದಿದ್ದಾನೆ. ನನಗೆ ನಿಮ್ಮನ್ನು ಕಂಡರೆ ಇಷ್ಟ. ನನ್ನ ಮಗನ ಜೊತೆಗೆ ಕೆಲಸ ಮಾಡಿ’ ಎಂದು ಒಂದು ಫೋಟೋ ಕೊಟ್ಟರು. ‘ಪ್ರೇಮ ಲೋಕ’ ಸಂದರ್ಭದಲ್ಲಿ ಅವರು ಒಂದು ಪ್ರಶಸ್ತಿ ಕೊಟ್ಟಿದ್ದರು. ಆ ಸಂದರ್ಭದ ಫೋಟೋ ಅದು. ಅದನ್ನು ನೋಡಿದಾಗಲೆಲ್ಲಾ, ‘ಅವರು ವೀರಾಸ್ವಾಮಿಯಲ್ಲ. ನಮಗೆ ಅನ್ನಕಟ್ಟ ಸ್ವಾಮಿ’ ಅಂತ ಅನಿಸೋದು. ವೀರಾಸ್ವಾಮಿ ಮತ್ತು ರವಿಚಂದ್ರನ್‍ ಇಬ್ಬರೂ ಅನ್ನ ಕೊಟ್ಟ ಸ್ವಾಮಿಗಳು. ಹಾಗಾಗಿ, ಅವರಿಬ್ಬರ ಫೋಟೋಗಳನ್ನು ಹಾಕಿಕೊಂಡಿದ್ದೇನೆ. ಮಧ್ಯದಲ್ಲಿ ನನ್ನ ಫೋಟೋ ಇದೆ’ ಎಂದಿದ್ದಾರೆ.

ತಮ್ಮ ಸಂಗಾತಿ ರವಿಚಂದ್ರನ್‍ ಅವರ ಜೊತೆಗೆ ಹಂಸಲೇಖ ಸಿನಿಮಾ ಮಾಡೋದು ಯಾವಾಗ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ನಾವಿಬ್ಬರೂ ಬಹಳ ಕ್ಲೋಸ್‍ ಆಗಿದ್ದೇವೆ. ಆದರೆ, ಅವರ ಆಲೋಚನೆಗಳು ಬೇರೆಯಾಗಿವೆ. ನಾನು ಬೇರೆ ಕಡೆ ಬಂದಿದ್ದೇನೆ. ನನ್ನ ಮನಸ್ಸು ಅವರಿಗೆ ಗೊತ್ತಿದೆ. ಅವರು ನನ್ನ ಮಾತು ಕೇಳುವುದಿಲ್ಲ ಎಂದು ನನಗೂ ಚೆನ್ನಾಗಿ ಗೊತ್ತಿದೆ. ಆದ್ದರಿಂದ ನಾವು ಸ್ನೇಹಿತರಾಗಿರೋದು ಸರಿ. ನಾವು ಹಿಂದೆ ಮಾಡಿರುವ ಕೆಲಸಗಳನ್ನು ಎಲ್ಲರೂ ಹೊಗಳುತ್ತಿದ್ದಾರೆ. ಅಷ್ಟು ಸಾಕು. ಒಟ್ಟಿಗೆ ಸೇರಿ ಮಾಡಬೇಕಾದ ಕೆಲಸ ಇದ್ದರೆ, ಮಾಡಿಯೇ ಮಾಡುತ್ತೇವೆ. ಅದಕ್ಕೆ ಅವರದ್ದೂ ಅಭ್ಯಂತರವಿಲ್ಲ. ನನ್ನದೂ ಅಭ್ಯಂತರವಿಲ್ಲ. ಸದ್ಯಕ್ಕೆ ಅವರು ದೊಡ್ಡ ಯೋಜನೆಯೊಂದಕ್ಕೆ ಅವರು ಕೈ ಹಾಕಿದ್ದಾರೆ. ಅದರಲ್ಲಿ ಅವರು ಗೆಲ್ಲಲಿ’ ಎಂದು ಹಾರೈಸಿದ್ದಾರೆ. (ವರದಿ: ಚೇತನ್‌ ನಾಡಿಗೇರ್‌)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in