Sandalwood News: ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಯಲಿ ಎಂದ ನಿರ್ಮಾಪಕ ಕುಮಾರ್; ನಟ ಸುದೀಪ್ ನಿರ್ಧಾರ ಏನು?
2 ದಿನಗಳ ಹಿಂದೆ ತಮ್ಮ ಆತ್ಮೀಯರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕುಳಿತಿದ್ದ ನಿರ್ಮಾಪಕ ಕುಮಾರ್ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ.
ಕಳೆದ 15 ದಿನಗಳಿಂದ ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕ ಕುಮಾರ್ ಹಾಗೂ ಕಿಚ್ಚ ಸುದೀಪ್ ನಡುವಿನ ಹಣದ ಸಮಸ್ಯೆ ತಾರಕಕ್ಕೆ ಏರಿದೆ. ಸುದೀಪ್ ನನಗೆ ಹಣ ನೀಡಬೇಕು, ಸಿನಿಮಾ ಮಾಡಿಕೊಡುತ್ತೇನೆ ಎಂದು ದುಡ್ಡು ಪಡೆದು ಈಗ ಹಣವನ್ನೂ ನೀಡದೆ, ಸಿನಿಮಾದಲ್ಲೂ ನಟಿಸದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಿರ್ಮಾಪಕ ಕುಮಾರ್, ರೆಹಮಾನ್ ಆರೋಪ
ಇದಾದ ಕೆಲವು ದಿನಗಳ ಬಳಿಕ ಹುಚ್ಚ, ಯಜಮಾನ ಸಿನಿಮಾಗಳ ನಿರ್ಮಾಪಕ ರೆಹಮಾನ್ ಕೂಡಾ ಮಾಧ್ಯಮಗಳ ಮುಂದೆ ಬಂದು ಸುದೀಪ್ ನನಗೂ ದುಡ್ಡು ನೀಡಬೇಕು. ಸಿನಿಮಾ ಮಾಡುತ್ತೇನೆ ಎಂದು 5 ಲಕ್ಷ ರೂಪಾಯಿ ದುಡ್ಡು ಪಡೆದಿದ್ದರು. ಆದರೆ ಅದರಲ್ಲಿ 1.5 ಲಕ್ಷ ರೂಪಾಯಿ ಮಾತ್ರ ವಾಪಸ್ ನೀಡಿದ್ದು ಉಳಿದ ಹಣವನ್ನು ನೀಡಿಲ್ಲ ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಮನನೊಂದ ಸುದೀಪ್, ಫಿಲ್ಮ್ ಚೇಂಬರ್ಗೆ ಪತ್ರ ಬರೆದಿದ್ದರು. ಸುದೀಪ್ ಆಪ್ತ ಜಾಕ್ ಮಂಜು ಕೂಡಾ ಈ ಇದನ್ನು ಕಾನೂನಿನ ಮೂಲಕ ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಕ್ಕಿದೆ.
ರಾಜಿ ಸಂಧಾನದ ಮೂಲಕ ಸಮಸ್ಯೆ ಪರಿಹಾರಕ್ಕೆ ಯತ್ನ
ನಿರ್ಮಾಪಕ ಕುಮಾರ್, ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ. 2 ದಿನಗಳ ಹಿಂದೆ ತಮ್ಮ ಆತ್ಮೀಯರೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಧರಣಿ ಕುಳಿತಿದ್ದ ನಿರ್ಮಾಪಕ ಕುಮಾರ್, ''ಸುದೀಪ್ ಅವರನ್ನು ಇಲ್ಲಿಗೆ ಕರೆಸಿ, ಚಿತ್ರರಂಗದಲ್ಲಿ ದೊಡ್ಡವರಿದ್ದಾರೆ, ಅವರೆಲ್ಲರ ಮುಂದೆ ಸಮಸ್ಯೆ ಬಗೆಹರಿಯಲಿ, ಸುದೀಪ್ ಅವರ ಬಗ್ಗೆ ನಾನು ಎಲ್ಲಿಯೂ ಯಾರ ಬಳಿಯೂ ಕೆಟ್ಟದಾಗಿ ಮಾತನಾಡಿಲ್ಲ, ಅವರು ನನ್ನ ಮನವಿಗೆ ಸ್ಪಂದಿಸುತ್ತಿಲ್ಲ ಎಂದಷ್ಟೇ ಹೇಳಿದ್ದೇನೆ. ನನಗೆ ಆದ ಸಮಸ್ಯೆ ಮುಂದೆ ಬೇರೆ ಯಾವ ನಿರ್ಮಾಪಕರಿಗೂ ಆಗಬಾರದು, ಅದಕ್ಕಾಗಿ ಫಿಲ್ಮ್ ಚೇಂಬರ್ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಬಗೆಹರಿಯುವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ'' ಎಂದು ಹೇಳಿದ್ದಾರೆ.
ಕಾನೂನಿನ ಮೊರೆ ಹೋದ ಕಿಚ್ಚ
ಸುದೀಪ್ ಮಾತ್ರ ಕಾನೂನಿನ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಓಡಾಡುತ್ತಿದ್ದಾರೆ. ನಿರ್ಮಾಪಕ ಕುಮಾರ್ ಮನವಿಯಂತೆ ಶಿವರಾಜ್ಕುಮಾರ್ ಹಾಗೂ ಚಿತ್ರರಂಗದ ಇನ್ನಿತರ ಹಿರಿಯರ ಮಧ್ಯಸ್ಥಿಕೆಯನ್ನು ಸಮಸ್ಯೆ ಪರಿಹಾರವಾಗಲಿದೆಯೋ, ಸುದೀಪ್ ಪಟ್ಟು ಬಿಡದೆ ನ್ಯಾಯಾಲಯದಲ್ಲೇ ಕಾನೂನು ಹೋರಾಟ ಮಾಡುತ್ತಾರೋ ಕಾದು ನೋಡಬೇಕು.