ಗೋವಾದಲ್ಲಿ ಕನ್ನಡ ನಿರ್ಮಾಪಕರ ಹೊಡೆದಾಟ; ಫಿಲ್ಮ್ ಚೇಂಬರ್ ಸಿನಿ ನೈಂಟಿ ಪಾರ್ಟಿಯಲ್ಲಿ ಮಾತಿಗೆ ಮಾತು ಬೆಳೆದು ಘರ್ಷಣೆ
ಕನ್ನಡ ಸಿನಿಮಾ ರಂಗಕ್ಕೆ 90 ವರ್ಷ ತುಂಬಿರುವ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮ ನಡೆಸುವ ಕುರಿತು ಚರ್ಚಿಸಲು ಗೋವಾಕ್ಕೆ ತೆರಳಿದ ಕನ್ನಡ ನಿರ್ಮಾಪಕರುಗಳು ಹೊಡೆದಾಟ ನಡೆಸಿರುವ ಕುರಿತು ವರದಿಯಾಗಿದೆ. ರಥಾವರ ಚಂದ್ರು, ಸತೀಶ್ ಆರ್ಯ, ಎನ್‌ಎಂ ಸುರೇಶ್ ಮುಂತಾದವರ ನಡುವೆ ಜಗಳವಾಗಿದೆ.
ಬೆಂಗಳೂರು: ಗೋವಾದಲ್ಲಿ ಕನ್ನಡ ಸಿನಿಮಾ ನಿರ್ಮಾಪಕರ ನಡುವೆ ಜಗಳವಾಗಿದ್ದು, ನಿರ್ಮಾಪಕ ಎ. ಗಣೇಶ್ ಹಣೆಗೆ ತೀವ್ರ ಗಾಯವಾಗಿದೆ. ನಿರ್ಮಾಪಕ ರಥಾವರ ಚಂದ್ರು ಮತ್ತು ಸತೀಶ್ ಆರ್ಯರ ನಡುವೆ ಆರಂಭವಾದ ಜಗಳವನ್ನು ಬಿಡಿಸಲು ಹೋದ ಗಣೇಶ್, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್‌ಗೂ ಗಾಯವಾಗಿದೆ. ವರದಿಗಳ ಪ್ರಕಾರ, ಸಿನಿ 90 ಕಾರ್ಯಕ್ರಮ ಹೇಗೆ ಮಾಡಬೇಕೆಂಬ ಚರ್ಚೆಯ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ. ಕೆಲವರು ಗೋವಾದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ 90 ವರ್ಷ ತುಂಬಿರುವ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮವನ್ನು ನಡೆಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿತ್ತು. ಈ ಕುರಿತು ಸಿದ್ಧತೆ ನಡೆಸುವ ಕುರಿತು ಚರ್ಚಿಸಲು ಫಿಲ್ಮ್ ಚೇಂಬರ್ ಸದಸ್ಯರು ಮತ್ತು ಅಧ್ಯಕ್ಷರು ಗೋವಾಕ್ಕೆ ತೆರಳಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ನಿರ್ಮಾಪಕರುಗಳ ನಡುವೆಯೂ ಹೊಡೆದಾಟವಾಗಿದೆ. ರಥಾವರ ಚಂದ್ರು ಮತ್ತು ಸತೀಶ್ ಆರ್ಯ ನಡುವೆ ಗಲಾಟೆ ಆರಂಭವಾಗಿದೆ. ಗಲಾಟೆ ತಪ್ಪಿಸಲು ಹೋದ ನಿರ್ಮಾಪಕ ಎ ಗಣೇಶ್ ಕೂಡ ಗಾಯಗೊಂಡಿದ್ದಾರೆ. ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಎನ್‌ಎಂ ಸುರೇಶ್‌ಗೂ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.
"ಸತೀಶ್ ಆರ್ಯ ಮತ್ತು ರಥಾವರ ನಡುವೆ ಗಲಾಟೆ ಆರಂಭವಾಯಿತು. ನಾನು ಬಿಡಿಸಲು ಹೋದೆ. ನನಗೆ ಸತೀಶ್ ಫೋರ್ಕ್ ಚಮಚದಲ್ಲಿ ಚುಚ್ಚಿದರು. ಎನ್‌ಎಂ ಸುರೇಶ್ ತುಟಿಗೂ ಗಾಯವಾಗಿದೆ. ಸಿನಿಮಾ ಶೈಲಿಯಲ್ಲಿ ಹೊಡೆದಾಟ ಮಾಡಿದ್ದಾರೆ. ನಾನು ಗೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಬಂದು ಇಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದೆ. ಈ ಹೊಡೆದಾಟದಲ್ಲಿ ರಥಾವರ ಮಂಜುನಾಥ್‌ಗೆ ಹೆಚ್ಚು ಗಾಯವಾಗಿದೆ" ಎಂದು ಗಣೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಫಿಲ್ಮ್ ಚೇಂಬರ್ ಸಭೆಯ ಸಂದರ್ಭ ನಿರ್ಮಾಪಕರು ಪಾರ್ಟಿ ಮಾಡಿದ್ದರು. "ನಾನು ಡ್ಯಾನ್ಸ್ ಮಾಡುತ್ತಿರುವಾಗ ರಥಾವರ ಮಂಜುನಾಥ್ ನನಗೆ ಬಯ್ದರು. ರಥಾವರ ಮತ್ತು ಎ ಗಣೇಶ್ ನನ್ನನ್ನು ರೇಗಿಸಿದ್ದರು. ಅವರು ಚೆನ್ನಾಗಿ ಕುಡಿದಿದ್ದರು. ನೂಕಾಟದಲ್ಲಿ ಅವರೇ ಕೆಳಗೆ ಬಿದ್ದರು. ನಾನು ಯಾರಿಗೂ ಹೊಡೆದಿಲ್ಲ. ಸಿಸಿ ಟಿವಿ ನೋಡಿದರೆ ಸತ್ಯ ಏನೆಂದು ಗೊತ್ತಾಗುತ್ತದೆ" ಎಂದು ಆಂತರ್ಯ ಸತೀಶ್ ಮಾಧ್ಯಮಗಳಿಗೆ ಹೇಳಿದ್ದಾರೆ. "ಹೊಡೆದಾಟ ನಡೆದಿದೆ ಎನ್ನುವುದು ಸುಳ್ಳು. ಮಾತಿಗೆ ಮಾತು ಬೆಳೆದು ನೂಕಾಟ ನಡೆದಿದೆ. ಹೊಡೆದಾಟ, ಜಗಳ ಅಲ್ಲ" ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.