ಗರ್ಭಿಣಿ ಪತ್ನಿ ಬಿಟ್ಟು ಇನ್ನೊಬ್ಬಳ ಜತೆ ನಿಶ್ಚಿತಾರ್ಥ; ಸನ್ನಿ ಮಹಿಪಾಲ್ ಹಲ್ಲೆಯಿಂದ ಪತ್ನಿಗೆ ಗರ್ಭಪಾತ, ಕನ್ನಡ ನಟನ ಕ್ರೈಮ್ ಸ್ಟೋರಿ
Kannada Serial Actor Sunny Mahipal Case: ಕನ್ನಡ ಸೀರಿಯಲ್ ನಟ ಸನ್ನಿ ಮಹಿಪಾಲ್ ತನ್ನ ಪತ್ನಿಗೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಪಟ್ಟಂತೆ ಬೆಂಗಳೂರಿನ ಎಚ್ ಎ ಎಲ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು: ಕನ್ನಡ ನಟನಿಂದ ಪತ್ನಿಗೆ ಹಲ್ಲೆ ಎಂಬ ಸುದ್ದಿ ಕೇಳಿದ್ರೆ ದಶಕಕ್ಕೂ ಹಿಂದಿನ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿಗೆ ನಡೆಸಿದ ಹಲ್ಲೆ ಪ್ರಕರಣ ನೆನಪಿಗೆ ಬರಬಹುದು. ಇಂತಹದ್ದೇ ಇನ್ನೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕನ್ನಡ ಸೀರಿಯಲ್ ನಟನೊಬ್ಬ ತನ್ನ ಪತ್ನಿಗೆ ಹಲ್ಲೆ ನಡೆಸಿದ್ದು, ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದಾಗಿ ಈತನ ಹಿಂದಿನ ರಹಸ್ಯ ವಿವಾಹ, ಮುಂದಿನ ವಿವಾಹದ ಹುನ್ನಾರ ಇತ್ಯಾದಿಗಳು ಬೆಳಕಿಗೆ ಬಂದಿವೆ. ಸೀರಿಯಲ್ ನಟ ಸನ್ನಿ ಮಹಿಪಾಲ್ ತನ್ನ ಪತ್ನಿಗೆ ಹಲ್ಲೆ ಮಾಡಿರುವ ಪ್ರಕರಣದ ಕುರಿತು ಹಿಂದೂಸ್ತಾನ್ ಟೈಮ್ಸ್ ಈಗಾಗಲೇ ವರದಿ ಮಾಡಿದೆ. ಈ ಪ್ರಕರಣದ ಕುರಿತು ಇನ್ನಷ್ಟು ವಿವರ ಇದೀಗ ಲಭ್ಯವಾಗಿದೆ.
ಉದಯ ಟಿವಿಯ ನೇತ್ರಾವತಿ ಎಂಬ ಸೀರಿಯಲ್‌ನಲ್ಲಿ ಸನ್ನಿ ಮಹಿಪಾಲ್ ನಟಿಸುತ್ತಿದ್ದರು. ಈ ಸೀರಿಯಲ್ ನಟ ತನ್ನ ಗರ್ಭಿಣಿ ಪತ್ನಿಗೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಈಗಾಗಲೇ ಮದುವೆಯಾಗಿದ್ರೂ ಮತ್ತೊಬ್ಬ ಯುವತಿ ಜತೆ ನಿಶ್ಚಿತಾರ್ಥ ನಡೆಸಿಕೊಂಡಿರುವುದೇ ಈ ಘಟನೆಗೆ ಪ್ರಮುಖ ಕಾರಣ.
ಅಬಾರ್ಷನ್ ಮಾಡುವಂತೆ ಒತ್ತಾಯ ಹೇರಿದ್ದ
ಸನ್ನಿ ಮಹಿಪಾಲ್‌ನಿಂದ ಆದ ತೊಂದರೆಯ ಕುರಿತು ಆತನ ಪತ್ನಿ ಮಾಧ್ಯಮಗಳ ಮುಂದೆ ಇಂದು ಮಾಹಿತಿ ನೀಡಿದ್ದಾರೆ. "ನಾನು ಗರ್ಭಿಣಿ ಆದ ಮೇಲೆ ಅಬಾರ್ಷನ್ ಮಾಡಿಸಿಕೊಳ್ಳುವಂತೆ ತುಂಬಾ ಬಲವಂತ ಮಾಡಿದ್ದ. ನಾನು ಅದಕ್ಕೆ ಒಪ್ಪಲಿಲ್ಲ. ಆಮೇಲೆ ತುಂಬಾ ಟಾರ್ಚರ್ ನೀಡಿದ್ದ. ನಾವಿಬ್ಬರು ಆರಂಭದಲ್ಲಿ ಫ್ರೆಂಡ್ಸ್ ರೀತಿ ಇದ್ವಿ. ಆಮೇಲೆ ಮದುವೆಯಾಗುವೆ ಎಂದು ಪ್ರಾಮೀಸ್ ಮಾಡಿದ್ದ, ಇದಾದ ಬಳಿಕ ದೈಹಿಕ ಸಂಬಂಧವಾಯ್ತು. ಗರ್ಭಿಣಿಯಾದ ಬಳಿಕ ಈ ರೀತಿ ಮಾಡಿದ್ದಾನೆ" ಎಂದು ಸನ್ನಿ ಮಹಿಪಾಲ್ ಪತ್ನಿ ಸ್ವಪ್ನ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
ಘಟನೆಯ ವಿವರ
ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷ ಯುವತಿಯೊಬ್ಬಳನ್ನು ಸನ್ನಿ ಪರಿಚಯಿಸಿಕೊಂಡಿದ್ದಾನೆ. ಇಬ್ಬರ ಚಾಟಿಂಗ್ ಪ್ರೀತಿಗೆ ತಿರುಗಿದೆ. ಇಬ್ಬರ ನಡುವೆ ದೈಹಿಕ ಸಂಬಂಧವೂ ಬೆಳೆದಿದೆ. ಈತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿರುವುದರಿಂದ ಪ್ರೀತಿ ದೈಹಿಕ ಸಲುಗೆಯವರೆಗೆ ತಲುಪಿದೆ. ಈಕೆ ಗರ್ಭಿಣಿಯಾಗಿರುವ ಕಾರಣ ಅನಿವಾರ್ಯವಾಗಿ ಕಳೆದ ತಿಂಗಳು ಜೂನ್ 15ರಂದು ದೇವಾಲಯವೊಂದರಲ್ಲಿ ವಿವಾಹವಾಗಿದ್ದಾನೆ. ಮದುವೆಯಾದ ಬಳಿಕ ಇವರಿಬ್ಬರು ಜತೆಯಾಗಿರಲಿಲ್ಲ. ನಾವು ಸ್ನೇಹಿತರಂತೆ ಇರಬೇಕು ಎಂದು ಆತ ಷರತ್ತು ಹಾಕಿದ್ದ ಎನ್ನಲಾಗಿದೆ. ಪೋಷಕರನ್ನು ಒಪ್ಪಿಸಿ ಮನೆಗೆ ಕರೆದೊಯ್ಯುವೆ ಎಂದು ಹೇಳಿರುವ ಈತ ಸೈಲೆಂಟ್ ಆಗಿ ಬೇರೆ ಯೋಜನೆ ಹಾಕಿಕೊಂಡಿದ್ದ.
ಇದಾದ ಬಳಿಕ ಸನ್ನಿ ಮಹಿಪಾಲ್ ಬೇರೆ ಯುವತಿಯ ಜತೆ ಎಂಗೇಜ್‌ಮೆಂಟ್ ಆಗಿದ್ದಾನೆ. ಇದನ್ನು ತಿಳಿದ ಪತ್ನಿ ಕಂಗಲಾಗಿದ್ದಾಳೆ. ನೇರವಾಗಿ ವಿಜ್ಞಾನ ನಗರದಲ್ಲಿರುವ ಮಹಿಪಾಲ್ ಮನೆಗೆ ಹೋಗಿದ್ದರು. ಈ ವೇಳೆ ಸನ್ನಿ ಮಹಿಪಾಲ್ ತನ್ನ ಪತ್ನಿಗೆ ತೀವ್ರ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವೂ ಆಗಿದ್ದು, ಗರ್ಭಪಾತ ಆಗಿದೆ ಎಂದು ವರದಿಗಳು ತಿಳಿಸಿವೆ.
ಚಾಕುವಿನಿಂದ ಇರಿತ
ಘಟನೆ ನಡೆದ ಸಂದರ್ಭದಲ್ಲಿ ಸನ್ನಿ ಮಹಿಪಾಲ್ ಈಕೆಯ ತೋಳಿಗೆ ಚಾಕುವಿನಿಂದ ಇರಿದಿದ್ದಾರೆ ಎಂಬ ಆರೋಪ ಮಾಡಲಾಗಿದೆ. ತಕ್ಷಣ ಪೊಲೀಸರಿಗೆ 112 ಸಂಖ್ಯೆಗೆ ಕರೆ ಮಾಡಿದ್ದಾರೆ. ಆಗ ಅಲ್ಲಿಗೆ ಹೋಯ್ಸಳ ಸಿಬ್ಬಂದಿ ಬೇಟಿ ನೀಡಿದ್ದು, ತಮ್ಮ ಬಳಿಕ ಮಹಿಳಾ ಸಿಬ್ಬಂದಿ ಇಲ್ಲವೆಂದು ಹೇಳಿದ್ದಾರೆ. ಸ್ವತಃ ಆ ಮಹಿಳೆಯೇ ಕಾರು ಚಲಾಯಿಸಿಕೊಂಡು ಆಸ್ಪತ್ರೆ ಸೇರಿದ್ದಾರೆ. ಇದಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ಘಟನೆಯಿಂದ ತನಗೆ ಗರ್ಭಪಾತ ಆಗಿದೆ ಎಂದು ಪತ್ನಿ ಹೇಳಿಕೆ ನೀಡಿದ್ದಾರೆ.
ವಿಭಾಗ