ಕನ್ನಡ ಸುದ್ದಿ  /  Entertainment  /  Sandalwood News Kannada Veteran Actor Sundar Raj Praised Vinod Raj Because His Caring About His Mother Leelavathi Rsm

Sundar Raj: ಮೆರಿ ಪಾಸ್‌ ಮಾ ಹೈ, ದೀವಾರ್‌ ಹಿಂದಿ ಸಿನಿಮಾ ಡೈಲಾಗ್‌ ಹೇಳುವ ಮೂಲಕ ವಿನೋದ್‌ ರಾಜ್‌ನನ್ನು ಹೊಗಳಿದ ಹಿರಿಯ ನಟ ಸುಂದರ್‌ ರಾಜ್‌

ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಳಜಿ ಮಾಡುತ್ತಿದ್ದಾರೆ. ಅವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ. ಲೀಲಾವತಿ ಹಾಗೂ ಅವರ ಮಗ ವಿನೋದ್‌ ರಾಜ್‌ ಈ ಸ್ಥಳದಲ್ಲಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಊಟ ನೀಡುತ್ತಿದ್ದಾರೆ.

ವಿನೋದ್‌ ರಾಜ್‌ ಹೊಗಳಿದ ಹಿರಿಯ ನಟ ಸುಂದರ್‌ ರಾಜ್
ವಿನೋದ್‌ ರಾಜ್‌ ಹೊಗಳಿದ ಹಿರಿಯ ನಟ ಸುಂದರ್‌ ರಾಜ್

ಸ್ಯಾಂಡಲ್‌ವುಡ್‌ ಹಿರಿಯ ನಟಿ ಲೀಲಾವತಿ ಅವರಿಗೆ ಈಗ 86 ವರ್ಷ ವಯಸ್ಸು. 1958ರಲ್ಲಿ 'ಭಕ್ತ ಪ್ರಹ್ಲಾದ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಲೀಲಾವತಿ ತಮ್ಮ 50 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಈಗ ಸಂಪೂರ್ಣ ನಟನೆಯಿಂದ ದೂರ ಸರಿದು ಬೆಂಗಳೂರು ಹೊರ ವಲಯದ ತೋಟದ ಮನೆಯಲ್ಲಿ ಮಗ ವಿನೋದ್‌ ರಾಜ್‌ ಜೊತೆಗೆ ವಾಸವಿದ್ದಾರೆ.

ಕೆಲವು ದಿನಗಳ ಹಿಂದೆ ಸ್ಯಾಂಡಲ್‌ವುಡ್‌ನ ಕೆಲವರು ಕಲಾವಿದರು ಲೀಲಾವತಿ ಮನೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಇನ್ನಷ್ಟು ಕಲಾವಿದರು ಸೋಲದೇವನಹಳ್ಳಿಗೆ ತೆರಳಿ ಲೀಲಾವತಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ಕಾಲ ಕಳೆದು ಊಟ ಸವಿದು ಕೂಡಾ ಬಂದಿದ್ದಾರೆ. 'ಅಮ್ಮ ಲೀಲಮ್ಮ ನಿನ್ನೊಳಗೆ ನಾವಮ್ಮ' ಎಂಬ ಈ ಕಾರ್ಯಕ್ರಮದ ಫೋಟೋಗಳು ಹಾಗೂ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಾಗೂ ವಿನೋದ್‌ ರಾಜ್‌, ತಮ್ಮ ತಾಯಿಯ ಕಾಳಜಿ ಮಾಡುತ್ತಿರುವ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಸುಂದರ್‌ ರಾಜ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

''ಲೀಲಾವತಿಯವರು 86 ವರ್ಷಗಳನ್ನು ಪೂರೈಸಿದ್ದಾರೆ. ಸಿನಿಮಾ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನೂ ಮಾಡಿದ್ದಾರೆ. ಈಗ ಚಿತ್ರರಂಗದ ಎಲ್ಲಾ ಕಲಾವಿದರನ್ನು ನೋಡುವ ಹಂಬಲ ವ್ಯಕ್ತಪಡಿಸಿ ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆ ಲೀಲಾವತಿ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಗಲೂ ಶ್ರೀನಾಥ್‌, ನಾನು, ಪದ್ಮಾವಾಸಂತಿ ಹಾಗೂ ಇನ್ನಿತರರು ಬಂದು ಅವರ ಆರೋಗ್ಯ ವಿಚಾರಿಸಿದ್ದೆವು. ನಮ್ಮನ್ನು ನೋಡಿ ಅವರು ಬಹಳ ಖುಷಿ ಆದರು. ನಮ್ಮ ಸಿನಿಮಾ ಕಲಾವಿದರು, ನಿರ್ಮಾಪಕರು, ನಿರ್ದೇಶಕರನ್ನು ನೋಡಬೇಕು ಎಂದು ಆಸೆ ವ್ಯಕ್ತಪಡಿಸಿದರು. ಅವರ ಆಸೆಯನ್ನು ಈ ಕಾರ್ಯಕ್ರಮದ ಮೂಲಕ ನೆರವೇರಿಸಲು ಪ್ರಯತ್ನಿಸಿದ್ದೇವೆ. ಬಹಳಷ್ಟು ಕಲಾವಿದರು ಇಂದು ಅವರನ್ನು ಭೇಟಿ ಮಾಡಿದ್ದೇವೆ.''

''ದಿವಾರ್‌ ಎಂಬ ಹಿಂದಿ ಸಿನಿಮಾವನ್ನು ಕೆಲವರು ನೋಡಿರುತ್ತೀರಿ. ಅದರಲ್ಲಿ ಅಮಿತಾಬ್‌ ಬಚ್ಚನ್‌ ಡಾನ್‌ ವಿಜಯ್‌ ವರ್ಮಾ ಪಾತ್ರದಲ್ಲಿ ಶಶಿ ಕಪೂರ್‌ ಪೋಲೀಸ್‌ ಆಫೀಸರ್‌ ರವಿವರ್ಮಾ ಪಾತ್ರದಲ್ಲಿ ನಟಿಸಿದ್ದರು. ಇಂದು ನನ್ನ ಬಳಿ ಕೋಟಿ ಕೋಟಿ ಆಸ್ತಿ ಇದೆ, ಬ್ಯಾಂಕ್‌ ಬ್ಯಾಲೆನ್ಸ್‌ ಇದೆ, ಬಂಗಲೆ ಇದೆ, ಕಾರು ಇದೆ ನಿನ್ನ ಬಳಿ ಏನಿದೆ ಎಂದು ಡಾನ್‌ ಕೇಳುತ್ತಾನೆ. ಆಗ ಇನ್‌ಸ್ಪೆಕ್ಟರ್‌, ''ನನ್ನ ಬಳಿ ಅಮ್ಮ ಇದ್ದಾರೆ'' (ಮೇರಿ ಪಾಸ್‌ ಮಾ ಹೈ) ಎನ್ನುತ್ತಾನೆ. ಅದೇ ರೀತಿ ಇವತ್ತು ವಿನೋದ್‌ ರಾಜ್‌‌ ಮಾಡಿ ತೋರಿಸಿದ್ದಾರೆ. ತಾಯಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಕಾಳಜಿ ಮಾಡುತ್ತಿದ್ದಾರೆ. ಅವರನ್ನು ನೋಡಿ ನಾವೆಲ್ಲರೂ ಕಲಿಯಬೇಕಿದೆ. ಲೀಲಾವತಿ ಹಾಗೂ ಅವರ ಮಗ ವಿನೋದ್‌ ರಾಜ್‌ ಈ ಸ್ಥಳದಲ್ಲಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೂ ಊಟ ನೀಡುತ್ತಿದ್ದಾರೆ. ಲೀಲಾವತಿ ಅಮ್ಮ, 100 ವರ್ಷ ಬದುಕಲಿ'' ಎಂದು ಸುಂದರ್‌ ರಾಜ್‌ ಇಡೀ ಚಿತ್ರರಂಗದ ಪರವಾಗಿ ಶುಭ ಹಾರೈಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ