ಕನ್ನಡ ಸುದ್ದಿ  /  Entertainment  /  Sandalwood News Kannada Veteran Actress Leelavathi Health Condition Vinod Raj Gets Emotional Remembering Animal Love Pcp

Leelavathi Health: ಅಮ್ಮ ತುಸು ಆರೋಗ್ಯವಾಗಿರಬೇಕಿತ್ತು; ಹಿರಿಯ ನಟಿ ಲೀಲಾವತಿ ಅನಾರೋಗ್ಯ ನೆನಪಿಸಿಕೊಂಡು ಭಾವುಕರಾದ ವಿನೋದ್‌ ರಾಜ್‌

Leelavathi Health: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಇಂದು ಲೀಲಾವತಿ ಕಟ್ಟಿಸಿದ ಪಶು ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಅಮ್ಮನ ಪರಿಸ್ಥಿತಿ ನೆನೆದು ಅವರ ಪುತ್ರ ವಿನೋದ್‌ ರಾಜ್‌ ಭಾವುಕರಾಗಿದ್ದಾರೆ.

Leelavathi Health: ಹಿರಿಯ ನಟಿ ಲೀಲಾವತಿ ಅನಾರೋಗ್ಯ ನೆನಪಿಸಿಕೊಂಡು ಭಾವುಕರಾದ ವಿನೋದ್‌ ರಾಜ್
Leelavathi Health: ಹಿರಿಯ ನಟಿ ಲೀಲಾವತಿ ಅನಾರೋಗ್ಯ ನೆನಪಿಸಿಕೊಂಡು ಭಾವುಕರಾದ ವಿನೋದ್‌ ರಾಜ್

ಬೆಂಗಳೂರು: "ನನ್ನ ತಾಯಿಯವರು ಸ್ವಲ್ಪ ಆರೋಗ್ಯವಾಗಿರಬೇಕಿತ್ತು. ಪ್ರಾಣಿಗಳ ಕಾಳಜಿ ಕುರಿತು ತುಂಬಾ ಆಸೆ ಪಟ್ಟವರು. ಇದೇ ಕಾರಣಕ್ಕೆ ಈ ಪಶು ಆಸ್ಪತ್ರೆ ಕಟ್ಟಿಸಿದ್ದಾರೆ. ಅವರು ಆರೋಗ್ಯವಾಗಿದ್ದರೆ ಇಂದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು" ಎಂದು ಅಮ್ಮನ ಆರೋಗ್ಯ ನೆನೆದು ವಿನೋದ್‌ ರಾಜ್‌ ಭಾವುಕರಾಗಿದ್ದಾರೆ. ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಹಿರಿಯ ನಟಿ ಲೀಲಾವತಿಯವರು ಈ ಪಶು ವೈದ್ಯಕೀಯ ಆಸ್ಪತ್ರೆ ನಿರ್ಮಿಸಿದ್ದಾರೆ. ಇದರ ಉದ್ಘಾಟನಾ ಕಾರ್ಯಕ್ರಮಕ್ಕೆ ಶಿವರಾಜ್‌ ಕುಮಾರ್‌, ಗೀತಾ ಶಿವರಾಜ್‌ಕುಮಾರ್‌, ಡಿಕೆ ಶಿವಕುಮಾರ್‌ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದಾರೆ. ಸುಮಾರು 45 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪಶು ಆಸ್ಪತ್ರೆ ನಿರ್ಮಿಸಲಾಗಿದೆ.

ಹಿರಿಯ ನಟಿ ಲೀಲಾವತಿ ಅವರ ಪ್ರಾಣಿ ಪ್ರೇಮ

"ನನ್ನ ಅಮ್ಮ ಪ್ರಾಣಿಪಕ್ಷಿಗಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ನಿಮಗೆ ದನ ಹಾಲು ಕರೆದರೆ ಸಾಕು, ನಾಯಿಗಳು ಶೋ ಮಾಡಲು ಕಾಣಿಸಿದರೆ ಸಾಕು, ನಾನು ಅದನ್ನು ನೋಡೋಲ್ಲ ಕಣೋ, ನಾಯಿ ಕಣ್ಣನ್ನು ನೋಡ್ತಿನಿ, ಅದರ ಪರಿಸ್ಥಿತಿ ನೋಡ್ತಿನಿ, ಅದಕ್ಕೆ ಹೊಟ್ಟೆ ನೋವು ಆಗಿದೆಯಾ, ಅದಕ್ಕೆ ಹೊಟ್ಟೆ ಹಸಿವಾಗಿದೆಯೇ, ಎಲ್ಲವನ್ನೂ ನಾನು ಗಮನಿಸ್ತಿನಿ. ನೀವು ಕೂಡ ಈ ರೀತಿ ನೋಡಬೇಕು. ದೂರದಿಂದ ಯಾರಾದರೂ ಬರುವ ಜನರನ್ನು ನೋಡಬೇಕು. ಯಾರಾದರೂ ಹರಕಲು ಬಟ್ಟೆ ಹಾಕಿ ಬಂದರೆ ತಾತ್ಸಾರ ಮಾಡಬಾರದು. ಹರಕಲು ಬಟ್ಟೆ ಹಾಕಿದವರು ಕಸದ ಸಮ ಎಂದುಕೊಳ್ಳಬಾರದು. ಅವನ ಪರಿಸ್ಥಿತಿ ನೋಡಬೇಕಪ್ಪ ಎಂದು ನನ್ನಮ್ಮ ಹೇಳುತ್ತಿದ್ದರು" ಎಂದು ಲೀಲಾವತಿ ಅಮ್ಮನವರ ಕುರಿತು ವಿನೋದ್‌ ರಾಜ್‌ ಮಾತನಾಡಿದ್ದಾರೆ.

"ಇತರರ ಬಗ್ಗೆ ವಹಿಸುವ ಕಾಳಜಿಯೇ ಏಳನೇ ಅರಿವು, ಇದೇ ಸೆವೆಂನ್ತ್‌ ಸೂಪರ್‌ ಸ್ಪಿರಿಚ್ಯುವಲ್‌, ಇದೇ ಪರಮಾತ್ಮ ಎಂದು ಹೇಳುತ್ತಿದ್ದರು. ಪರಮಾತ್ಮ ಎಲ್ಲಿದ್ದಾನೆ, ನಮ್ಮ ಈ ಆತ್ಮದಲ್ಲಿಯೇ ಇದ್ದಾನೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಆತ್ಮದ ಬಗ್ಗೆ ಕಾಳಜಿ ವಹಿಸಬೇಕು. ಹೆಣ್ಣಾಗಲಿ, ಗಂಡಾಗಲಿ, ಎಲ್ಲವೂ ಒಂದೇನಪ್ಪ, ಎಲ್ಲವೂ ಜೀವಗಳು, ಅದನ್ನು ಅರ್ಥಮಾಡಿಕೊಂಡು ನಡೀರಿ ಎಂದು ನನ್ನಮ್ಮ ಹೇಳ್ತಾ ಇದ್ರು. ಅವರು ಈ ಪಶು ಆಸ್ಪತ್ರೆ ಉದ್ಘಾಟನೆಯನ್ನು ನೋಡಿದ್ರೆ ನಮಗೆ ತುಂಬಾ ಸಂತೋಷವಾಗುತ್ತಿತ್ತು" ಎಂದು ವಿನೋದ್‌ ರಾಜ್‌ ಭಾವುಕರಾಗಿ ಹೇಳಿದರು.

ಹಿರಿಯ ನಟಿ ಆರೋಗ್ಯ ವಿಚಾರಿಸಿದ ಗಣ್ಯರು

ಲೀಲಾವತಿ ಆರೋಗ್ಯವನ್ನು ವಿಚಾರಿಸಿಕೊಂಡು ಪ್ರತಿನಿತ್ಯ ಸಾಕಷ್ಟು ಜನರು ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಅಭಿಷೇಕ್‌ ಅಂಬರೀಶ್‌ ಮತ್ತು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಲೀಲಾವತಿ ಅವರ ತೋಟದ ಮನೆಗೆ ಆಗಮಿಸಿದ ದರ್ಶನ್‌ ಮತ್ತು ಅವರ ಸಂಗಡಿಗರು, ವಿನೋದ್‌ ರಾಜ್‌ ಅವರನ್ನು ಭೇಟಿಯಾಗಿದ್ದರು. ಇದನ್ನು ಓದಿ: 'ಅಮ್ಮ ನೋಡಿಲ್ಲಿ, ಯಾರ್‌ ಬಂದಿದಾರೆ.. ದರ್ಶನ್‌ ಬಂದಿದಾನಮ್ಮ'; ಲೀಲಾವತಿ ಆರೋಗ್ಯ ವಿಚಾರಿಸಿದ ದಚ್ಚು

ಕ್ಷೀಣಿಸುತ್ತಿದೆ ಲೀಲಾವತಿ ಆರೋಗ್ಯ

ಕಳೆದ ಹಲವು ದಿನಗಳಿಂದ ಲೀಲಾವತಿ ಅವರ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ, ಪುತ್ರ ವಿನೋದ್‌ ರಾಜ್‌ ಚಿಕಿತ್ಸೆ ಕೊಡಿಸುತ್ತಲೇ ಬಂದಿದ್ದಾರೆ. ಕಾರಿನಲ್ಲಿ ಅಮ್ಮನನ್ನು ಕೂರಿಸಿಕೊಂಡು, ಅವರಿಷ್ಟದ ಸ್ಥಳಗಳಿಗೂ ಭೇಟಿ ನೀಡಿ ಸುತ್ತಾಡಿ ಬಂದಿದ್ದಾರೆ. ಇದೀಗ ಕೆಲ ದಿನಗಳಿಂದ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ಎದ್ದು ಓಡಾಡದ ಸ್ಥಿತಿಗೆ ತಲುಪಿರುವ ಲೀಲಾವತಿ ಅವರನ್ನು ನೆಲಮಂಗಲದ ಸೋಲದೇವನಹಳ್ಳಿಯ ಮನೆಯಲ್ಲಿಯೇ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದಾರೆ ಪುತ್ರ ವಿನೋದ್‌ ರಾಜ್.‌ ವೀಲ್‌ ಚೇರ್‌ ಮೇಲೆ ಕೂರಿಸಿಕೊಂಡು ಮನೆಯಲ್ಲಿಯೇ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ