Kannanjaru Movie: ಕಣಂಜಾರು ಚಿತ್ರದ ರೊಮ್ಯಾಂಟಿಕ್ ಹಾಡಿನಲ್ಲಿ ಗ್ಲಾಮರ್ ಗೊಂಬೆಯಂತೆ ಬಳುಕಿದ ನಟಿ ಅಪೂರ್ವ
ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸಿನಿಮಾ ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಬಿಜಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ.
Kannanjaru Movie First Single: 'ಕಣಂಜಾರು', 'ಪ್ರೇಮ ಶೃಂಗಾರದ' ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. RP ಫಿಲಂಸ್ ಬ್ಯಾನರ್ ಅಡಿ ಆರ್. ಬಾಲಚಂದ್ರ ನಿರ್ಮಿಸಿ, ನಿರ್ದೇಶನ ಮಾಡಿ, ನಾಯಕನಾಗಿ ನಟಿಸಿರುವ ಸಿನಿಮಾ ಕಣಂಜಾರು. ಕ್ಯಾಚಿ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಕಣಂಜಾರು ಸದ್ಯ ರೋಮ್ಯಾಂಟಿಕ್ ಹಾಡಿನ ಮೂಲಕ ಚಂದನವನದಲ್ಲಿ ಸಂಚಲನ ಮೂಡಿಸಿದೆ. ಈ ಚಿತ್ರದ ಹಾಡನ್ನು ಚಂದನವನದ ಅನೇಕ ಗಣ್ಯರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ತಯಾರಿ ಮಾಡಿಕೊಂಡಿರುವ ಕಣಂಜಾರು ಸದ್ಯ ಪ್ರಮೋಷನ್ ಚಟುವಟಿಕೆಯಲ್ಲಿ ಸಿಕ್ಕಾಪಟ್ಟೆ ಬಿಜಿಯಾಗಿದೆ. ಇದೀಗ ಸಿನಿಮಾ ತಂಡ ಅದ್ಭುತವಾದ ಹಾಡನ್ನು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಕಾಟೇರ, ಭೀಮ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಿಗೆ ಡೈಲಾಗ್ ಬರೆದಿರುವ ಖ್ಯಾತ ಡೈಲಾಗ್ ರೈಟರ್ ಮಾಸ್ತಿ, ನಟರಾದ ನಕುಲ್ ಗೌಡ, ಶ್ರೇಯಸ್ ಮಂಜು, ವಿಕ್ಕಿ, ನಿರ್ದೇಶಕ ಮಹೇಶ್ ಗೌಡ, ನಟಿಯರಾದ ಕಾರುಣ್ಯ ರಾಮ್, ಅನುಷಾ ರೈ ಸೇರಿದಂತೆ ಅನೇಕ ಗಣ್ಯರು ಚಿತ್ರದ ಹಾಡನ್ನು ರಿಲೀಸ್ ಮಾಡಿ ಸಾಥ್ ನೀಡಿದರು.
ಪ್ರೇಮ ಶೃಂಗಾರ ಹಾಡಲ್ಲಿ ಅಪೂರ್ವ ಗ್ಲಾಮರ್ ಲುಕ್
ಕಣಂಜಾರು ಸಿನಿಮಾದಲ್ಲಿ ನಾಯಕ ಆರ್ ಬಾಲಚಂದ್ರನ್ ಜೊತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಅಪೂರ್ವ ಸಿನಿಮಾ ಖ್ಯಾತಿಯ ನಟಿ ಅಪೂರ್ವಾ ನಾಯಕಿಯಾಗಿ ಮಿಂಚಿದ್ದಾರೆ. ಈ ಹಾಡಿನಲ್ಲಿ ಅಪೂರ್ವಾ ಸಿಕ್ಕಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಪ್ರೇಮ ಶೃಂಗಾರ... ಸಾಲುಗಳಿರುವ ಈ ಪ್ರೇಮ ಗೀತೆ ನಿಜಕ್ಕೂ ರವಿಚಂದ್ರನ್ ಅವರ ಸಿನಿಮಾಗಳ ಹಾಡುಗಳನ್ನು ನೆನಪಿಸುತ್ತಿದೆ. ಅಂದಹಾಗೆ ಈ ಹಾಡಿಗೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ರಚಿಸಿದ್ದು ಮೋಹನ್ ಮಾಸ್ಟರ್ ಕೊರಿಯೋಗ್ರಫಿವಿದೆ.
ತರುಣ್ ಸುಧೀರ್ ಸಹಾಯ ಮರೆಯಲ್ಲ..
ಹಾಡು ರಿಲೀಸ್ ಬಳಿಕ ಮಾತನಾಡಿದ ನಾಯಕ, ನಿರ್ದೇಶಕ ಬಾಲಚಂದ್ರ, ‘ಯೂಟ್ಯೂಬ್ ನಲ್ಲಿ ರಿಲೀಸ್ ಮಾಡೋಣ ಅಂತ ಅಂದುಕೊಂಡಿದ್ದೆ. ಆದರೆ ಕೆಲವರು ಅದ್ಭುತವಾಗಿದೆ ಅಂತ ಹೇಳಿದ್ರು ಹಾಗಾಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಿದ್ದೀವಿ. ನನ್ನನ್ನು ಹೊಸಬ ಅಂತ ಅಂದುಕೊಳ್ಳದೆ ನಾಯಕಿ ಅಪೂರ್ವಾ ಕೂಡ ಒಪ್ಪಿಕೊಂಡು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ತುಂಬಾ ಸಹಾಯ ಮಾಡಿದ್ದಾರೆ. ಇತ್ತೀಚಿಗಷ್ಟೇ ತರುಣ್ ಸುಧೀರ್ ಮತ್ತು ಸೋನಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಈ ಹಾಡನ್ನು ಅರ್ಪಿಸುತ್ತಿದ್ದೇನೆ' ಎಂದರು.
ನಾಯಕಿ ಅಪೂರ್ವ ಮಾತನಾಡಿ, 'ಸಿನಿಮಾದ ಟೀಸರ್ ರಿಲೀಸ್ ಆದ್ಮೇಲೆ ಅದ್ಭುತವಾದ ರೆಸ್ಪಾನ್ಸ್ ಬಂದಿದೆ. ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ. ಹಾಗಾಗಿ ಈ ಸಿನಿಮಾವನ್ನು ನಾನು ಒಪ್ಪಿಕೊಂಡೆ. ನಾನು ಮೊದಲು ಕಥೆಗೆ ಆದ್ಯತೆ ನೀಡುತ್ತೇನೆ. ಜನ ಸಿನಿಮಾ ನೋಡಲ್ಲ ಅಂತ ಹೇಳ್ತಾರೆ ಆದ್ರೆ ಒಳ್ಳೆ ಸಿನಿಮಾ ಬಂದ್ರೆ ಖಂಡಿತ ಜನ ಥಿಯೇಟರಿಗೆ ಬರ್ತಾರೆ. ಈ ಸಿನಿಮಾ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ದಯವಿಟ್ಟು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದರು.