ಕಾಂತಾರದಲ್ಲಿ ಫಾರೆಸ್ಟ್ ಗಾರ್ಡ್ ಆಗಿ ನಟಿಸಿದ್ದ ಸೂಚನ್ ಶೆಟ್ಟಿ ಈಗ ಗಾಡ್ ಪ್ರಾಮಿಸ್ ಚಿತ್ರಕ್ಕೆ ನಿರ್ದೇಶಕ
ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರ ನಿರ್ವಹಿಸಿದ್ದ ಸೂಚನ್ ಶೆಟ್ಟಿ ಇದೀಗ ಸಿನಿಮಾ ನಿರ್ದೇಶಕನಾಗಿದ್ದಾರೆ. ಆ ಚಿತ್ರಕ್ಕೆ ಗಾಡ್ ಪ್ರಾಮಿಸ್ ಎಂಬ ಶೀರ್ಷಿಕೆ ಇಡಲಾಗಿದ್ದು, ಇನ್ನೇನು ಶೀಘ್ರದಲ್ಲಿ ಚಿತ್ರೀಕರಣವೂ ಶುರುವಾಗಲಿದೆ.
God Promise: ರವಿ ಬಸ್ರೂರ್ ಬಹುಬೇಡಿಕೆ ಸಂಗೀತ ನಿರ್ದೇಶಕರಲ್ಲಿ ಒಬ್ಬರು.. ಕೆಜಿಎಫ್ ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್ ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ ಸೂಚನ್ ಶೆಟ್ಟಿ, ಹೊಸ ಪಯಣ ಪ್ರಾರಂಭಿಸಿದ್ದಾರೆ.
ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೂಚನ್ ಅವರ ಚೊಚ್ಚಲ ಪ್ರಯತ್ನದ ಸಿನಿಮಾಗೆ ಗಾಡ್ ಪ್ರಾಮಿಸಿ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ಯಾನ್ ಇಂಡಿಯಾ ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.
ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ ಗಾಡ್ ಪ್ರಾಮಿಸ್. ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಕುತೂಹಲವನ್ನು ಹೆಚ್ಚು ಮಾಡಿದೆ. ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜೊತೆಯಾಗಿದೆ.
ಗಾಡ್ ಪ್ರಾಮಿಸ್ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಕಬ್ಜ- ಸಲಾರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಹಾಗೂ ಭುವನ್ ಗೌಡ ಜೊತೆ ಕೆಲಸ ಮಾಡಿರುವ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ರವಿ ಬಸ್ರೂರ್ ಜೊತೆ ಸಲಾರ್, ಕೆಜಿಎಫ್ ಸರಣಿ ಚಿತ್ರಗಳಿಗೆ ಕೆಲಸ ಮಾಡಿರುವ ಭರತ್ ಮಧುಸೂದನನ್ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ರುತ್ವಿಕ್, ಪ್ರತಿಕ್ ಶೆಟ್ಟಿ ಬಳಗದಲ್ಲಿ ದುಡಿದಿರುವ ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.