ಕನ್ನಡ ಸುದ್ದಿ  /  Entertainment  /  Sandalwood News Kantara Chapter 1 First Look Overwhelming Response For The Divine Revelation Trending In Youtube Pcp

ಯೂಟ್ಯೂಬ್‌ನಲ್ಲಿ ಕಾಂತಾರ ಟ್ರೆಂಡಿಂಗ್‌, ಪಂಜುರ್ಲಿಯ ಕೋರೆಹಲ್ಲು ಕಾಂತಾರ ಫಸ್ಟ್‌ಲುಕ್‌ನ ಹೈಲೈಟ್‌; ಗೆಳೆಯನಿಗೆ ರಕ್ಷಿತ್‌ ಶೆಟ್ಟಿ ಹೀಗಂದ್ರು

Kantara chapter 1 first look: ರಿಷಬ್‌ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್‌ 1 ಸಿನಿಮಾದ ಫಸ್ಟ್‌ ಲುಕ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಸಮಯದಲ್ಲಿ ಯೂಟ್ಯೂಬ್‌ನಲ್ಲಿ ಈ ಫಸ್ಟ್‌ಲುಕ್‌ 10 ದಶಲಕ್ಷಕ್ಕಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಕಾಂತಾರ ಚಾಪ್ಟರ್‌ 1ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌
ಕಾಂತಾರ ಚಾಪ್ಟರ್‌ 1ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌

ಬೆಂಗಳೂರು: ದೈವಿಕ ಅನುಭೂತಿ ನೀಡುವ ಕಾಂತಾರ ಚಾಪ್ಟರ್‌ 1 ಸಿನಿಮಾದ ಫಸ್ಟ್‌ಲುಕ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೂಟ್ಯೂಬ್‌ನಲ್ಲಿ 10 ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಇದೀಗ ಹೊಂಬಾಳೆ ಫಿಲ್ಮ್ಸ್‌ ಅಪ್‌ಡೇಟ್‌ ನೀಡಿದೆ. "ಹತ್ತು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಯೊಂದಿಗೆ ಯೂಟ್ಯೂಬ್‌ನಲ್ಲಿ ಕಾಂತಾರ ಚಾಪ್ಟರ್‌ 1 ಟ್ರೆಂಡಿಂಗ್‌ನಲ್ಲಿದೆ" ಎಂದು ಎಕ್ಸ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌ ಖುಷಿ ಹಂಚಿಕೊಂಡಿದೆ. ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ಗೆ ಬೆರಗಾಯ್ತು ಗೂಗಲ್‌; ವಾಹ್‌, 2024 ಇನ್ನಷ್ಟು ರೋಚಕ ಎಂದು ಟ್ವೀಟ್‌ ಮಾಡಿದ ಸರ್ಚ್‌ ಎಂಜಿನ್‌ ದೈತ್ಯ

ನಿನ್ನೆ ಬಿಡುಗಡೆಯಾದ ಕಾಂತಾರ ಚಾಪ್ಟರ್‌ 1 ಫಸ್ಟ್‌ಲುಕ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಇದೇ ಸಂದರ್ಭದಲ್ಲಿ ರಿಷಬ್‌ ಶೆಟ್ಟಿ ಸ್ನೇಹಿತರಾದ ರಕ್ಷಿತ್‌ ಶೆಟ್ಟಿ ಕೂಡ ಗೆಳೆಯನ ಫಸ್ಟ್‌ಲುಕ್‌ಗೆ ವಾಹ್‌ ಎಂದಿದ್ದಾರೆ. "ಈ ಫಸ್ಟ್‌ಲುಕ್‌ನ ಅತ್ಯುತ್ತಮ ಭಾಗ ಎಂದರೆ ನೀನು ಧರಿಸಿರುವ ಕಿವಿಯೋಲೆ. ಪಂಜುರ್ಲಿಯ ಎರಡು ಕೋರೆ ಹಲ್ಲು ನಿನ್ನ ಗಡ್ಡದ ಮೂಲಕ ಹೊರಬಂದಿರುವಂತೆ ಕಾಣಿಸುತ್ತಿದೆ. ಆಲ್‌ ದಿ ಬೆಸದ್ಟ್‌ ಮಗ. ವಿಜಯ್‌ ಸರ್‌ ಮತ್ತು ಹೊಂಬಾಳೆ ಸಿನಿಮಾಕ್ಕೆ ನನ್ನ ಶುಭ ಹಾರೈಕೆಗಳು" ಎಂದು ರಕ್ಷಿತ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

"ಈ ಸಿನಿಮಾಕ್ಕೆ ಕಾಯುತ್ತಿರುವೆ" ಎಂದು ಪೃಥ್ವಿರಾಜ್‌ ಸುಕುಮಾರನ್‌ ಟ್ವೀಟ್‌ ಮಾಡಿದ್ದಾರೆ. "ಈ ಮಾಸ್ಟರ್‌ಪೀಸ್‌ಗೆ ಧನ್ಯವಾದ. ಇದು ನಿಜಕ್ಕೂ ರೋಮಾಂಚನ, ಗೋಸ್‌ಬಂಬ್‌ ಉಂಟುಮಾಡಿದೆ" ಎಂದು ಸಾಕಷ್ಟು ಜನರು ಟ್ವೀಟ್‌ ಮಾಡಿದ್ದಾರೆ. "ಈ ಫಸ್ಟ್‌ಲುಕ್‌ ದೈವಿಕ ಅನುಭೂತಿ ನೀಡಿದೆ" ಎಂದು ಹಲವು ಜನರು ಟ್ವೀಟ್‌ ಮಾಡಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಎಲ್ಲೆಡೆ ರಿಷಬ್‌ ಶೆಟ್ಟಿಯವರ ಹೊಸ ಅವತಾರದ ವಿಡಿಯೋಗಳೇ ಕಾಣಿಸುತ್ತಿವೆ. ಇದನ್ನೂ ಓದಿ: Kantara A Legend: ಕಾಂತಾರ ಚಾಪ್ಟರ್‌ 1 ಫಸ್ಟ್‌ ಲುಕ್‌ ಬಿಡುಗಡೆ; ಮೊದಲ ನೋಟದಲ್ಲಿಯೇ ರೋಮಾಂಚನ ಉಂಟುಮಾಡಿದ ರಿಷಬ್‌ ಶೆಟ್ಟಿ

ಕಳೆದ ವರ್ಷ ಬಿಡುಗಡೆಯಾಗಿ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ 'ಕಾಂತಾರ' ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ 'ಕಾಂತಾರ - ಅಧ್ಯಾಯ ೧'ರ ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.

'ಕಾಂತಾರ' ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಭ್ ಶೆಟ್ಟಿ ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

'ಕಾಂತಾರ' ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ 'ಕಾಂತಾರ - ಅಧ್ಯಾಯ ೧' ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ.

ಕಳೆದ ವರ್ಷ ಹೊಂಬಾಳೆ ಫಿಲಂಸ್ ನಿರ್ಮಾಣದ 'ಕೆಜಿಎಫ್ ೨' ಮತ್ತು 'ಕಾಂತಾರ' ಚಿತ್ರಗಳು ಜಾಗತಿಕವಾಗಿ ೧೬೦೦ ಕೋಟಿ ರೂ ಸಂಗ್ರಹಿಸಿತ್ತು. ಹೊಂಬಾಳೆಯ ಮುಂದಿನ ಬಿಡುಗಡೆಯಾದ 'ಸಲಾರ್' ಈ ವರ್ಷದ ಬ್ಲಾಕ್‌ಬಸ್ಟರ್ ಆಗುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಡಿ. ೧ರಂದು ಬಿಡುಗಡೆಯಾಗಲಿದೆ.

'ಕಾಂತಾರ -ಅಧ್ಯಾಯ ೧' ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದ್ದು ಮುಂದಿನ ವರ್ಷ ೭ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ ಸರಳಪೂಜಾ ಸಮಾರಂಭ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಅಣ್ಣ ಮಂಜುನಾಥ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ