ಕಾಂತಾರ ಸಿನಿಮಾಕ್ಕೆ ಕಲಾವಿದರು ಬೇಕಾಗಿದ್ದಾರೆ; 30-60 ವಯಸ್ಸಿನ ಪುರುಷರು, 18-60 ವರ್ಷ ವಯಸ್ಸಿನ ಮಹಿಳೆಯರಿಗೆ ಅವಕಾಶ; ಅರ್ಜಿ ಹೀಗೆ ಸಲ್ಲಿಸಿ
Kantara film Cast Audition: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರೀಕ್ವೆಲ್‌ಗಾಗಿ ಸದ್ಯದಲ್ಲಿಯೇ ಆಡಿಷನ್ ನಡೆಯಲಿದ್ದು, ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ಆಸಕ್ತರು www.kantara.film ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು.
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಪ್ರೀಕ್ವೆಲ್‌ನಲ್ಲಿ ನಟಿಸಲು ಬಯಸುವಿರಾ? ಕಾಂತಾರ ತಂಡದಲ್ಲಿ ನೀವೊಬ್ಬರಾಗಬೇಕೆ? ಹಾಗಾದರೆ, ಇಲ್ಲೊಂದು ಸದವಕಾಶವಿದೆ. ಕಾಂತಾರ ಸಿನಿಮಾದಲ್ಲಿ ನಟಿಸಲು 30 ವರ್ಷದಿಂದ 60 ವರ್ಷದವರೆಗಿನ ಪುರುಷರಿಂದ ಮತ್ತು 18-60 ವರ್ಷದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಂತಾರ ಸಿನಿಮಾಕ್ಕೆ ನೂರಾರು ಕಲಾವಿದರ ಅವಶ್ಯಕತೆ ಇರುವುದರಿಂದ ಈ ಸಿನಿಮಾದಲ್ಲಿ ನಟಿಸಲು ಸಾಕಷ್ಟು ಜನರಿಗೆ ಅವಕಾಶವಿರಲಿದೆ. ಕಾಂತಾರ ಸಿನಿಮಾಕ್ಕೆ ಅರ್ಜಿ ಸಲ್ಲಿಸಲು ಬಯಸುವವರು ಈ ಮುಂದಿನ ಮಾಹಿತಿಗಳನ್ನು ತಪ್ಪದೆ ಓದಿ.
ಕಾಂತಾರ ಚಾಪ್ಟರ್ 1ರಲ್ಲಿ ತುಳುನಾಡಿನ ದೈವದ ಮೂಲ ಕಥೆ ಇರಲಿದೆಯಂತೆ. ಕ್ರಿಶ 301-400 ಕಾಲದ ಕಥೆ ಇರಲಿದೆ ಎಂದು ಈಗಾಗಲೇ ಹೇಳಲಾಗಿದೆ. ಇತಿಹಾಸದ ಪುಟಗಳನ್ನು ಆಧಾರವಾಗಿಟ್ಟುಕೊಂಡು ನೈಜತೆಗೆ ಧಕ್ಕೆಯಾಗದಂತೆ ಕಾಲ್ಪನಿಕ ಕಥೆಯೊಂದನ್ನು ಕಟ್ಟುವ ಕೆಲಸದಲ್ಲಿ ರಿಷಬ್ ಶೆಟ್ಟಿ ನಿರತರಾಗಿದ್ದಾರೆ. ಮುಂದಿನ ವರ್ಷದ ಅಂತ್ಯದ ವೇಳೆಗೆ ಕಾಂತಾರ ಚಾಪ್ಟರ್ 1 ತೆರೆಗೆ ಬರುವ ನಿರೀಕ್ಷೆಯಿದೆ.
ಕಾಂತಾರ ಸಿನಿಮಾಕ್ಕೆ ಕಲಾವಿದರ ಹುಡುಕಾಟ
ಕಾಂತಾರ ಸಿನಿಮಾಕ್ಕೆ ನಾನೇ ಹೀರೋ. ನಾಯಕಿ ಮತ್ತು ಇತರೆ ಪಾತ್ರಗಳ ಹುಡುಕಾಟದಲ್ಲಿದ್ದೇವೆ. ಕನ್ನಡ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೊಸ ಕಲಾವಿದರಿಗೆ ಅವಕಾಶ ನೀಡಲಾಗುವುದು. ಕರಾವಳಿ ಮತ್ತು ಇತರೆ ಭಾಗದ ಕಲಾವಿದರು ಚಿತ್ರತಂಡದಲ್ಲಿ ಇರಲಿದ್ದಾರೆ ಎಂದು ರಿಷಬ್ ಶೆಟ್ಟಿ ಈ ಹಿಂದೆ ಮಾಹಿತಿ ನೀಡಿದ್ದರು. ಇದೀಗ ಕಾಂತಾರ ತಂಡವು ಕಲಾವಿದರು ಬೇಕಾಗಿದ್ದಾರೆ ಎಂಬ ಪ್ರಕಟಣೆ ನೀಡಿದೆ.
ಕಾಂತಾರ ಸಿನಿಮಾದಲ್ಲಿ ಯಾರಿಗೆ ಅವಕಾಶ ದೊರಕಲಿದೆ?
ಅರ್ಜಿ ಸಲ್ಲಿಸಲು ವಯೋಮಿತಿ ನಿಗದಿಪಡಿಸಲಾಗಿದೆ. ಬಹುತೇಕ ಎಲ್ಲಾ ವಯೋಮಿತಿಯವರಿಗೆ ಈ ಸಿನಿಮಾದಲ್ಲಿ ನಟಿಸಲು ಅವಕಾಶ ದೊರಕಲಿದೆ. 30ರಿಂದ 60 ವರ್ಷ ವಯಸ್ಸಿನ ಪುರುಷರು ಬೇಕಾಗಿದ್ದಾರೆ. 18ರಿಂದ 60 ವರ್ಷ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಕಾಂತಾರ ಸಿನಿಮಾದಲ್ಲಿ ನಟಿಸಲು ಅರ್ಜಿ ಸಲ್ಲಿಕೆಗೆ ಕೊನೆ ದಿನ
ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನಾಂಕವಾಗಿದೆ. ಅಂದರೆ, ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು https://www.kantara.film/ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲಿಗೆ ಈ ಲಿಂಕ್‌ನಲ್ಲಿ ಹೆಸರು ದಾಖಲಿಸಬೇಕು. ಇದಾದ ಬಳಿಕ ಫೋನ್ ನಂಬರ್, ಇಮೇಲ್ ವಿಳಾಸ, ಮತ್ತು ವಿಳಾಸ ನಮೂದಿಸಬೇಕು. ಬಳಿಕ ನಿಮ್ಮ ವಯಸ್ಸು, ಜನ್ಮ ದಿನಾಂಕ ಇತ್ಯಾದಿ ವಿವರ ನಮೂದಿಸಬೇಕು. ಇದಾದ ಬಳಿಕ ನಿಮ್ಮ ವೃತ್ತಿ ಮಾಹಿತಿ ನಮೂದಿಸಬೇಕು. ನಂತರ ನಿಮ್ಮ ತೂಕ, ಎತ್ತರದ ಮಾಹಿತಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಇನ್‌ಸ್ಟಾಗ್ರಾಂ ಐಡಿ ನಮೂದಿಸಬೇಕು. ಬಳಿಕ ನಿಮ್ಮ ಕೌಶಲಗಳ ಕುರಿತು ಮಾಹಿತಿ ನಮೂದಿಸಬೇಕು. ಅಂತಿಮವಾಗಿ ಒಂದು ನಿಮಿಷದ ವಿಡಿಯೋದಲ್ಲಿ ನಿಮ್ಮ ಪ್ರತಿಭೆಯನ್ನು ಅನಾವರಣ ಮಾಡಬೇಕು. ಇದು ಪ್ರಮುಖ ಹಂತವಾಗಿದೆ. ಇಲ್ಲಿ ನಿಮ್ಮ ಪ್ರತಿಭೆ ರಿಷಬ್ ಶೆಟ್ಟಿ ಗಮನ ಸೆಳೆಯುವಂತೆ ಇರಬೇಕು. ರೀಲ್ಸ್ ರೀತಿಯ ವಿಡಿಯೋ ಅಪ್ಲೋಡ್ ಮಾಡಬಾರದು.