ಅರ್ಜುನ ಆನೆ ಸಮಾಧಿಗೆ ಕಲ್ಲುಗಳನ್ನು ತಂದು ರಕ್ಷಣೆ ಮಾಡಿದ್ದು ದರ್ಶನ್‌ ಅಭಿಮಾನಿಗಳು; ಪೋಸ್‌ ನೀಡಿದ್ದು ಮಾತ್ರ ಅರಣ್ಯ ಇಲಾಖೆಯವರಂತೆ
ಕನ್ನಡ ಸುದ್ದಿ  /  ಮನರಂಜನೆ  /  ಅರ್ಜುನ ಆನೆ ಸಮಾಧಿಗೆ ಕಲ್ಲುಗಳನ್ನು ತಂದು ರಕ್ಷಣೆ ಮಾಡಿದ್ದು ದರ್ಶನ್‌ ಅಭಿಮಾನಿಗಳು; ಪೋಸ್‌ ನೀಡಿದ್ದು ಮಾತ್ರ ಅರಣ್ಯ ಇಲಾಖೆಯವರಂತೆ

ಅರ್ಜುನ ಆನೆ ಸಮಾಧಿಗೆ ಕಲ್ಲುಗಳನ್ನು ತಂದು ರಕ್ಷಣೆ ಮಾಡಿದ್ದು ದರ್ಶನ್‌ ಅಭಿಮಾನಿಗಳು; ಪೋಸ್‌ ನೀಡಿದ್ದು ಮಾತ್ರ ಅರಣ್ಯ ಇಲಾಖೆಯವರಂತೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳು ಮೃತಪಟ್ಟ ಮೈಸೂರು ದಸರಾ ಆನೆ ಅರ್ಜುನನ ಸಮಾಧಿ ರಕ್ಷಣೆಗೆ ಇತ್ತೀಚೆಗೆ ಮುಂದಾಗಿದ್ದರು. ಬಳಿಕ ಅರಣ್ಯ ಇಲಾಖೆಯವರು ದರ್ಶನ್‌ ಅಭಿಮಾನಿಗಳಿಗೆ ಕೆಲಸ ಮುಂದುವರೆಸಲು ಅವಕಾಶ ನೀಡದೆ ತಾವೇ ಆ ಕ್ರೆಡಿಟ್‌ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಅರ್ಜುನ ಆನೆ ಸಮಾಧಿಗೆ ಕಲ್ಲುಗಳನ್ನು ತಂದು ರಕ್ಷಣೆ ಮಾಡಿದ್ದು ದರ್ಶನ್‌ ಅಭಿಮಾನಿಗಳು
ಅರ್ಜುನ ಆನೆ ಸಮಾಧಿಗೆ ಕಲ್ಲುಗಳನ್ನು ತಂದು ರಕ್ಷಣೆ ಮಾಡಿದ್ದು ದರ್ಶನ್‌ ಅಭಿಮಾನಿಗಳು

ಬೆಂಗಳೂರು: ಕಳೆದ ವರ್ಷ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಮೃತಪಟ್ಟ ದಸರಾ ಅಂಬಾರಿ ಆನೆ ಅರ್ಜುನ ಸಮಾಧಿ ವಿಚಾರ ಮತ್ತೆ ಚರ್ಚೆಯಲ್ಲಿದೆ. ದರ್ಶನ್‌ ಅಭಿಮಾನಿಗಳು ಕಷ್ಟಪಟ್ಟು ಕಲ್ಲು ಚಪ್ಪಡಿಗಳನ್ನು ತಂದು ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನಡುತೋಪಿನ ಪ್ರದೇಶದಲ್ಲಿ ಸಮಾಧಿ ಸ್ಥಳಕ್ಕೆ ರಕ್ಷಣೆ ನೀಡಲು ಕಲ್ಲಿನ ಸ್ಲ್ಯಾಬ್‌ಗಳನ್ನು ತಂದು ಸಾಕಷ್ಟು ಕೆಲಸ ಮಾಡಿದ್ದರು. ಆದರೆ, ಅರಣ್ಯ ಇಲಾಖೆಯವರು ಕೊನೆಕ್ಷಣದಲ್ಲಿ ಎಚ್ಚೆತ್ತು ತಾವೇ ಸಮಾಧಿ ರಕ್ಷಣೆಗೆ ಮುಂದಾಗಿದ್ದರು. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಕಲ್ಲುಗಳ ಹಣವನ್ನು ದರ್ಶನ್‌ ಸ್ನೇಹಿತರ ಖಾತೆಗಳಿಗೆ ಹಾಕಿದ್ದೇವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಇದೀಗ ದರ್ಶನ್‌ ಆಪ್ತ ನಾಗರಾಜು ಪ್ರತಿಕ್ರಿಯೆ ನೀಡಿದ್ದಾರೆ.

ನಮಗೆ ನಿಮ್ಮ ಹಣ ಬೇಡ

"ಮಳೆ ಆರಂಭವಾಗುವ ಮೊದಲು ಸಮಾಧಿ ರಕ್ಷಣೆ ಮಾಡುವಂತೆ ದರ್ಶನ್‌ ಅವರೇ ನಮಗೆ ಹಣ ನೀಡಿ ಸಮಾಧಿ ರಕ್ಷಣೆ ಮಾಡಲು ತಿಳಿಸಿದ್ದಾರೆ. ದರ್ಶನ್‌ ಅವರು ಮೇ 2ರಂದೇ ಅರ್ಜುನ ಸಮಾಧಿ ರಕ್ಷಣೆ ಮಾಡುವಂತೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಆದರೆ, ಆ ಸಮಯದಲ್ಲಿ ಯಾರೂ ಗಮನ ನೀಡಿರಲಿಲ್ಲ. ಕೊನೆಗೆ ಅರ್ಜುನ ಆನೆಯ ಮಾವುತ ವಿನು ಮತ್ತು ದರ್ಶನ್‌ ಅಭಿಮಾನಿಗಳಾದ ನಮ್ಮ ತಂಡವು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಾತ್ಕಾಲಿಕವಾಗಿ ತಡೆಗೋಡೆ ಕಟ್ಟಲು ಅನುಮತಿ ಕೇಳಿದ್ದೆವು. ಅದಕ್ಕೆ ಅರಣ್ಯಾಧಿಕಾರಿಗಳು ಸಮ್ಮತಿ ನೀಡಿದ್ದರು. ತಾತ್ಕಾಲಿಕವಾಗಿ ಕಟ್ಟಿ ಎಂದು ಹೇಳಿದ್ದರು" ಎಂದು ನಾಗರಾಜು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

"ಇಷ್ಟು ಅನುಮತಿ ದೊರಕಿದ ಬಳಿಕ ನಾವು ಕಲ್ಲುಗಳನ್ನು ತಂದೆವು. ಆ ಕಲ್ಲುಗಳನ್ನು ಜೋಡಿಸಲು ಸಮಾಧಿ ಸುತ್ತ ಗುಂಡಿ ತೋಡಿದೆವು. ನಾವು ಅಷ್ಟೆಲ್ಲ ಕಷ್ಟಪಡುತ್ತಿರುವಾಗ ಅರಣ್ಯ ಇಲಾಖೆಯವರು ಬಂದು ನಮ್ಮ ಕೆಲಸ ನಿಲ್ಲಿಸಲಿಲ್ಲ. ಎಲ್ಲಾ ಕೆಲಸ ಮುಗಿದ ಬಳಿಕ ಬಂದು ನಿಲ್ಲಿಸಿದ್ದಾರೆ. ನೀವು ಮಾಡಿದರೆ ಅರಣ್ಯ ಇಲಾಖೆಯ ಮರ್ಯಾದೆ ಹೋಗುತ್ತದೆ ಎಂದು ಹೇಳಿ ನಮ್ಮನ್ನು ಕಳುಹಿಸಿದ್ದಾರೆ. ಬಳಿಕ ಅವರೇ ಬುಲ್ಡೋಜರ್‌ ತಂದು ಸಮಾಧಿ ರಕ್ಷಣೆ ಮಾಡಿದ ಸ್ಥಳದ ಮುಂದೆ ನಿಂತು ಪೋಸ್‌ ನೀಡಿದ್ದಾರೆ" ಎಂದು ನಾಗರಾಜು ವಿವರಿಸಿದ್ದಾರೆ.

"ಮಾಧ್ಯಮದವರ ಮುಂದೆ ದರ್ಶನ್‌ ಸ್ನೇಹಿತರ ಅಕೌಂಟ್‌ಗೆ ಹಣ ವಾಪಸ್‌ ನೀಡಿದ್ದೇವೆ ಎಂದು ಅರಣ್ಯ ಇಲಾಖೆಯವರು ಹೇಳಿದ್ದಾರೆ. ದರ್ಶನ್‌ ನನಗೆ ಹಣ ನೀಡಿದ್ದರು. ನಾನು ಆ ಹಣದಲ್ಲಿ ಕಲ್ಲು ಖರೀದಿಸಿ ಕೊಟ್ಟಿದ್ದೇನೆ. ಆ ದುಡ್ಡು ನಮಗೆ ವಾಪಸ್‌ ಬೇಕಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ಆದರೆ, ಈಗಾಗಲೇ ವಾಪಸ್‌ ಮಾಡಿದ್ದೇವೆ ಎಂದು ಅರಣ್ಯ ಇಲಾಖೆಯವರು ಹೇಳಿದ್ದಾರೆ. ಈ ಹಣ ನಮ್ಮ ಖಾತೆಗೂ ಬಂದಿಲ್ಲ, ದರ್ಶನ್‌ ಖಾತೆಗೂ ಬಂದಿಲ್ಲ. ಒಳ್ಳೆಯ ಕೆಲಸ ಮಾಡುವ ಸಂದರ್ಭದಲ್ಲಿ ಅವಮಾನ ಮಾಡಿದ್ದೀರಾ. ಕೊನೆಗೆ ಬಂದು ಪೋಸ್‌ ನೀಡಿದ್ದೀರಿ" ಎಂದು ನಾಗರಾಜ್‌ ವಿಡಿಯೋ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ದಸರಾದಲ್ಲಿ ಎಂಟು ಬಾರಿ ಯಶಸ್ವಿಯಾಗಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ದುರ್ಮರಣಕ್ಕೀಡಾಗಿತ್ತು. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಯುವಾಗ ಒಂಟಿ ಸಲಗದೊಂದಿಗೆ ನಡೆದ ಸಂಘರ್ಷದಲ್ಲಿ ತಿವಿತಕ್ಕೊಳಗಾಗಿ ಮೃತಪಟ್ಟಿತ್ತು.

"ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು" ಎಂದು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದರು. ಈ ಸಮಯದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದು ಕಾಣಿಸದೆ ಇದ್ದಾಗ ದರ್ಶನ್‌ ಅಭಿಮಾನಿಗಳೇ ಸಮಾಧಿ ರಕ್ಷಣೆಗೆ ಮುಂದಾಗಿದ್ದರು.

Whats_app_banner