Dwarakish Death: ಪಂಚಭೂತಗಳಲ್ಲಿ ‘ಪ್ರಚಂಡ ಕುಳ್ಳ’ ದ್ವಾರಕೀಶ್ ಲೀನ; ತಂದೆಯ ಅಂತಿಮ ವಿಧಿ ವಿಧಾನ ನೆರವೇರಿಸಿದ ಹಿರಿ ಮಗ ಯೋಗೀಶ್
ನಟ, ನಿರ್ದೇಶಕ ದ್ವಾರಕೀಶ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನೆರವೇರಿವೆ.
Dwarakish Death: ಸ್ಯಾಂಡಲ್‌ವುಡ್ ಚಿತ್ರರಂಗ ಕಂಡ ಮೇರು ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಚಿತಾಗಾರದಲ್ಲಿ ದ್ವಾರಕೀಶ್ ಅವರ ಹಿರಿಯ ಪುತ್ರ ತಂದೆಯ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಷ ಮಾಡಿದ್ದಾರೆ. ಕುಟುಂಬಸ್ಥರು, ಚಿತ್ರರಂಗದ ಆಪ್ತರ ಸಮ್ಮುಖದಲ್ಲಿ ಬ್ರಾಹ್ಮಣ ಪದ್ಧತಿಯಂತೆ, ಅಂತಿಮ ವಿಧಿ ವಿಧಾನಗಳು ನೆರವೇರಿವೆ.
ಮಂಗಳವಾರ (ಏ. 16) ಬೆಳಗ್ಗೆ ಹೃದಯಾಘಾತದಿಂದ ದ್ವಾರಕೀಶ್ ನಿಧನರಾದ ಸುದ್ದಿ ಹೊರಬೀಳುತ್ತಿದ್ದಂತೆ, ಇಡೀ ಚಿತ್ರೋದ್ಯಮವೇ ಶಾಕ್‌ನಲ್ಲಿ ಮುಳುಗಿತು. 81ರ ಹರೆಯದಲ್ಲೂ ಆಕ್ಟಿವ್ ಆಗಿದ್ದ ದ್ವಾರಕೀಶ್ ಅವರ ದಿಢೀರ್ ಸಾವು ಕುಟುಂಬಸ್ಥರಿಗೂ ನೋವುಂಟು ಮಾಡಿತ್ತು. ಅದಾದ ಬಳಿಕ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಸಿನಿಮಾ ಗಣ್ಯರು ಅಗಲಿದ ನಟನಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದರು.
ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಗುಳಿಮಂಗಳದಲ್ಲಿನ ಮನೆಯಲ್ಲಿದ್ದ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸ್ಯಾಂಡಲ್‌ವುಡ್‌ನ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿ ಕರುನಾಡ ಕುಳ್ಳನ ದರ್ಶನ ಪಡೆದು ಮರಳಿದರು. ಈ ನಡುವೆ ಮಧ್ಯಾಹ್ನ 12ರ ನಂತರ ಮೆರವಣಿಗೆ ಮೂಲಕ ಚಾಮರಾಜಪೇಟೆಯ ಚಿತಾಗಾರಕ್ಕೆ ಮೃತ ದೇಹವನ್ನು ತರಲಾಯಿತು. ಬ್ರಾಹ್ಮಣ ಸಂಪ್ರದಾಯದಂತೆ, ಹಿರಿಯ ಮಗ ಯೋಗೇಶ್ ತಂದೆಯ ಅಂತಿಮ ವಿಧಿ ವಿಧಾನ ನೆರವೇರಿಸಿ ಅಗ್ನಿ ಸ್ಪರ್ಷಿಸಿದರು.
ಸಿಎಂ ಸಿದ್ದರಾಮಯ್ಯ ಸಂತಾಪ
ಹಿರಿಯ ನಟ ದ್ವಾರಕೀಶ್ ಅವರ ಅಂತಿಮ ದರ್ಶನದಲ್ಲಿ ಭಾಗವಹಿಸಿದ ಸಿಎಂ ಸಿದ್ಧರಾಮಯ್ಯ, X ಖಾತೆಯಲ್ಲಿ ಅವರ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಅದು ಹೀಗಿದೆ.
"ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ದ್ವಾರಕೀಶ್ ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಕೊಡುಗೆಯನ್ನು ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಹಾಸ್ಯನಟನಾಗಿ ಮಾತ್ರವಲ್ಲ, ನಾಯಕ ನಟರಾಗಿಯೂ ಉತ್ತಮ ಅಭಿನಯ ನೀಡಿದ್ದರು. ಡಾ. ರಾಜ್ ಕುಮಾರ್ ಮತ್ತು ದ್ವಾರಕೀಶ್ ಜೋಡಿ ಬಹಳ ಚೆನ್ನಾಗಿತ್ತು. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.
ಜೀವನದಲ್ಲಿ ಬಹಳಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಆದರೂ ಕನ್ನಡ ಚಿತ್ರ ನಿರ್ಮಾಣ, ನಟನೆಯನ್ನು ಬಿಟ್ಟಿರಲಿಲ್ಲ. ಕಷ್ಟಗಳನ್ನು ಸಹಿಸಿ ಕನ್ನಡ ಚಿತ್ರರಂಗ ಬೆಳೆಯಲು ಕೊಡುಗೆ ನೀಡಿದ್ದಾರೆ. ದ್ವಾರಕೀಶ್ ಮೈಸೂರಿನ ಹುಣಸೂರಿನಲ್ಲಿ ಹುಟ್ಟಿದವರು. ತವರಿನ ಬಗ್ಗೆ ಬಹಳ ಪ್ರೇಮವಿತ್ತು. ಒಮ್ಮೆ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರಾಜಕೀಯ, ಸಿನಿಮಾ, ಸಾಮಾಜಿಕ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದ್ದೆ.
ಕೆಲ ವರ್ಷಗಳ ಹಿಂದೆ ಅವರ ಧರ್ಮಪತ್ನಿಯವರು ಮೃತಪಟ್ಟ ದಿನವೇ ದ್ವಾರಕೀಶ್ ಅವರೂ ಮೃತಪಟ್ಟಿದ್ದಾರೆ. ಇಬ್ಬರ ಆತ್ಮಕ್ಕೂ ಚಿರಶಾಂತಿ ದೊರಕಲಿ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ದ್ವಾರಕೀಶ್ ಅವರು ಸಾವಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಎರಡು ಕಣ್ಣುಗಳನ್ನು ದಾನಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲ ಕರುನಾಡು ಬಡವಾಗಿದೆ"