ಚಂದನವನದ ಹಿರಿಯ ನಟರಾದ ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಕನ್ನಡ ಸುದ್ದಿ  /  ಮನರಂಜನೆ  /  ಚಂದನವನದ ಹಿರಿಯ ನಟರಾದ ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ

ಚಂದನವನದ ಹಿರಿಯ ನಟರಾದ ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ

Bank Janardhan: ಸ್ಯಾಂಡಲ್‌ವುಡ್‌ನ ಹಿರಿಯ ಹಾಸ್ಯ ನಟ, ಪೋಷಕ ಕಲಾವಿದ ಬ್ಯಾಂಕ್‌ ಜನಾರ್ದನ್‌ ಅವರಿಗೆ ಈ ಸಲದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಿನಿಮಾ ಕ್ಷೇತ್ರದಲ್ಲಿ ಈ ವರೆಗೂ 800ಕ್ಕೂ ಅಧಿಕ ಸಿನಿಮಾಗಳಲ್ಲಿ ಜನಾರ್ದನ್‌ ಬಣ್ಣ ಹಚ್ಚಿದ್ದಾರೆ.

ಚಂದನವನದ ಹಿರಿಯ ನಟರಾದ ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ
ಚಂದನವನದ ಹಿರಿಯ ನಟರಾದ ಬ್ಯಾಂಕ್‌ ಜನಾರ್ದನ್‌, ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಪ್ರಶಸ್ತಿ

Karnataka Rajyotsava Awards 2023: ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ನಟನೆ ಮೂಲಕ ನಾಡಿನ ಸಿನಿಮಾಪ್ರೇಮಿಗಳ ಜನಮನ ಗೆದ್ದವರು ಹಿರಿಯ ನಟ ಬ್ಯಾಂಕ್‌ ಜನಾರ್ದನ್ ಮತ್ತು ಡಿಂಗ್ರಿ ನಾಗರಾಜ್‌. ಸಿನಿಮಾ ಮೇಲಿನ ಅತಿಯಾದ ಹುಚ್ಚು, ನಟನೆ ಮೇಲಿನ ಗೀಳು ಚಂದನವನದಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಂತೆ ಮಾಡಿತ್ತು. ಇದೀಗ ಇದೇ ಹಿರಿಯ ನಟರ ಸಿನಿಮಾರಂಗದ ಸಾಧನೆ ಗುರುತಿಸಿದ ಸರ್ಕಾರ, ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಇವರ ಹೆಸರನ್ನು ಆಯ್ಕೆ ಮಾಡಿದೆ.

ಡಿಂಗ್ರಿ ನಾಗರಾಜ್‌ಗೆ ರಾಜ್ಯೋತ್ಸವ ಗರಿ

ನಟ ಡಿಂಗ್ರಿ ನಾಗರಾಜ್‌, ಬಾಲ್ಯದಿಂದಲೂ ಸಿನಿಮಾ ಜತೆಗೆ ನಂಟಿತ್ತು. ಬಾಲ್ಯದಲ್ಲಿ ಗುಬ್ಬಿ ವೀರಣ್ಣ, ಮತ್ತು ಅಬ್ಬಯ್ಯ ನಾಯ್ಡು ನಾಟಕ ಕಂಪನಿಗಳಲ್ಲಿಯೂ ಡಿಂಗ್ರಿ ನಾಗರಾಜ್‌ ಕೆಲಸ ಮಾಡಿದ್ದರು. ಅಲ್ಲಿಂದ ಆರಂಭವಾದ ಅವರ ಬಣ್ಣದ ಲೋಕದ ಜರ್ನಿ, ನಿಧಾನಕ್ಕೆ ಸಿನಿಮಾ ಕಡೆಗೂ ಹೊರಳಿತು. ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌ ಸೇರಿ ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲ ಕಲಾವಿದರ ಜತೆಗೆ ಕೆಲಸ ಮಾಡಿದ್ದಾರೆ. ಸೋಲಿಲ್ಲದ ಸರದಾರ, ದೊರೆ, ಬಂಗಾರದ ಕಲಶ, ಮಲ್ಲಿಗೆ ಹೂವೆ, ರಾಜಾದಿ ರಾಜ, ಮನೆ ದೇವ್ರು, ಹುಲಿ ಹೆಬ್ಬುಲಿ, ಮನೆಯೇ ಮಂತ್ರಾಲಯ, ಶಿವ ಕೊಟ್ಟ ಸೌಭಾಗ್ಯ, ನಿನ್ನೆ ಪ್ರೀತಿಸುವೆ ಸೇರಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬ್ಯಾಂಕ್‌ ಜನಾರ್ಧನ್‌ಗೂ ಗೌರವ

ಮೇನ್‌ಸ್ಟ್ರೀಮ್‌ ಪಾತ್ರಗಳಲ್ಲಿ ನಟಿಸುವುದಕ್ಕೂ ಮುನ್ನ ವಿಲನ್‌ ಹಿಂದೆ ನಿಲ್ಲುವ ಸಹಚರರಾಗಿ ಬ್ಯಾಂಕ್‌ ಜನಾರ್ದನ್‌ ಹೆಚ್ಚು ಕಂಡಿದ್ದರು. ಅದಾದ ಬಳಿಕ ಕಾಶಿನಾಥ್‌ ಅವರ ಸಂಗ ಮಾಡಿ, ಅವರ ಸಾಲು ಸಾಲು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು. ಹುಟ್ಟಿ ಬೆಳೆದಿದ್ದು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ. ವಿದ್ಯಾಭ್ಯಾಸವೂ ಅಲ್ಲಿಯೇ. ವೈವಾಹಿಕ ಬದುಕಿಗೆ ಕಾಲಿಟ್ಟಿದ್ದೂ ಅಲ್ಲಿಯೇ. ವಿಜಯಾ ಬ್ಯಾಂಕ್‌ ಜವಾನನಾಗಿ ಕೆಲಸ ಆರಂಭಿಸಿದ್ದೂ ಹೊಳಲ್ಕೆರೆಯಲ್ಲಿಯೇ.

ಶಾಲಾದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯ

ಅಂದಹಾಗೆ, ಸಿನಿಮಾಕ್ಕೆ ಬರುವುದಕ್ಕೂ ಮುನ್ನ ಶಾಲಾ ದಿನಗಳಲ್ಲಿ ಗಂಡ್ಸಲ್ವೆ ಗಂಡ್ಸು ಅನ್ನೋ ನಾಟಕದಲ್ಲಿ ನಟಿಸಿದರು. ಆ ನಾಟಕದಲ್ಲಿನ ಪಾತ್ರ ಸೂಪರ್‌ ಹಿಟ್‌ ಆಯಿತು. ಪ್ರಶಸ್ತಿಯೂ ಸಿಕ್ಕಿತು. ಅಲ್ಲಿಂದ ನಿಧಾನಕ್ಕೆ ಬಣ್ಣದ ಗೀಳು ಅಂಟಿಸಿಕೊಂಡು, 10 ತರಗತಿ ಮುಗಿದ ಬಳಿಕ ಜಯಲಕ್ಷ್ಮೀ ಬ್ಯಾಂಕ್‌ಗೆ ಜವಾನನಾಗಿ ಜನಾರ್ದನ್ ಸೇರಿಕೊಂಡರು. ಆಗ ಅವರ ಸಂಬಳ ಕೇವಲ 50 ರೂಪಾಯಿ. ನಿಧಾನಕ್ಕೆ ಸಿನಿಮಾ ಕ್ಷೇತ್ರಕ್ಕೂ ಎಂಟ್ರಿ ಪಡೆದ ಜನಾರ್ದನ್‌, ಆರಂಭದಲ್ಲಿಯೇ ಕನ್ನಡದ ಬಹುತೇಕ ಎಲ್ಲ ಹೀರೋಗಳ ಜತೆಗೆ 200ಕ್ಕೂ ಅಧಿಕ ಸಿನಿಮಾ ಮಾಡಿದರು.

200 ಸಿನಿಮಾಗಳಲ್ಲಿ ಸಣ್ಣ ಪಾತ್ರ

200 ಸಿನಿಮಾ ಮಾಡಿದರೂ ತೃಪ್ತಿ ಸಿಗುವ ಪಾತ್ರಗಳು ಮಾತ್ರ ಅವರಿಗೆ ಸಿಗಲಿಲ್ಲ. ಮನೆಯಲ್ಲಿ ಮದುವೆಯೂ ಮಾಡಿದರು. ಮೂರು ಹೆಣ್ಣುಮಕ್ಕಳು, ಒಬ್ಬ ಮಗನೂ ಹುಟ್ಟಿದ. ಹೀಗೇ ಬಿಟ್ಟರೆ ಇವನು ಕೈಗೆ ಸಿಗಲ್ಲ ಎಂದು, 1967ರಲ್ಲಿ ವಿಜಯಾ ಬ್ಯಾಂಕ್‌ನ ಹಿರಿಯೂರು ಶಾಖೆಗೆ ವರ್ಗಾವಣೆ ಆಯಿತು. ಸಿನಿಮಾ ಕಡೆ ಮುಖ ಹಾಕದ ಜನಾರ್ದನ್‌, ನಿಷ್ಠೆಯಿಂದ ಕೆಲಸ ಮಾಡಿದರು. ಅದಾದ ಬಳಿಕ ಕನಕಪುರಕ್ಕೆ ವರ್ಗಾವಣೆ ಆದರು. ಅಲ್ಲಿಯೂ ಒಂದಷ್ಟು ದಿನ ಕೆಲಸ ಮಾಡಿದರು. ಇಷ್ಟಾದರೂ, ಬಣ್ಣದ ಸೆಳೆತ ಮಾತ್ರ ಅವರಲ್ಲಿ ಕಡಿಮೆ ಆಗಿರಲಿಲ್ಲ.

ಕಾಶಿನಾಥ್‌ ಅವರಿಂದ ಮುನ್ನೆಲೆಗೆ

ಹೀಗಿರುವಾಗಲೇ ಒಂದು ಮಧ್ಯಾಹ್ನ ಕಾಶಿನಾಥ್‌ ಅವರಿಂದ ಬ್ಯಾಂಕ್‌ ಜನಾರ್ದನ್‌ಗೆ ಬುಲಾವ್‌ ಬರುತ್ತದೆ. ಅಜಗಜಾಂತರ ಸಿನಿಮಾದಲ್ಲಿ ಬ್ರೋಕರ್‌ ಭೀಮಯ್ಯ ಪಾತ್ರವೂ ಸಿಗುತ್ತದೆ. ಆ ಸಿನಿಮಾಕ್ಕೆ 45 ದಿನಗಳ ಕಾಲ್‌ಶೀಟ್‌ ಸಹ ಕೊಡುತ್ತಾರೆ. ಕೊನೆಗೆ ಆ ಸಿನಿಮಾ ರಿಲೀಸೂ ಆಗುತ್ತದೆ. ಶತದಿನೋತ್ಸವವನ್ನೂ ಆಚರಿಸುತ್ತದೆ. ಗಾಂಧಿನಗರದಲ್ಲಿ ಬ್ಯಾಂಕ್‌ ಜನಾರ್ದನ್‌ ಹೆಸರೂ ಮುಂಚೂಣಿಗೆ ಬರುತ್ತದೆ. ಅದಾದ ಬಳಿಕ ಮತ್ಯಾವತ್ತೂ ಜನಾರ್ದನ್‌ ಹಿಂತಿರುಗಿ ನೋಡಲಿಲ್ಲ.

ಈ ವರೆಗೂ 800ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ

ಅಂದಿನಿಂದ ಇಂದಿನವರೆಗೂ ಹಾಸ್ಯಪಾತ್ರಗಳಲ್ಲಿ, ಪೋಷಕ ಪಾತ್ರಗಳಲ್ಲಿ ಬಹುತೇಕ ಎಲ್ಲ ಸಿನಿಮಾ ಹೀರೋಗಳ ಜತೆಗೆ ಬ್ಯಾಂಕ್‌ ಜನಾರ್ದನ್‌ ನಟಿಸಿದ್ದಾರೆ. ಅಜಗಜಾಂತರ, ಗೌರಿ ಗಣೇಶ, ತರ್ಲೆ ನನ್ಮಗ, ಬೆಳ್ಳಿಯಪ್ಪ, ಬಂಗಾರಪ್ಪ, ಶ್‌, ರೂಪಾಯಿ ರಾಜ, ಚೆಲುವ, ರಂಗ SSLC, ನ್ಯೂಸ್‌, ಮೂರ್ಖ, ಗಿಲ್ಲಿ ಹೀಗೆ 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ಇದೇ ಹಿರಿಯ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.

Whats_app_banner