ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ಕೆಂಡ ಸಿನಿಮಾ; ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ
ಕನ್ನಡ ಸುದ್ದಿ  /  ಮನರಂಜನೆ  /  ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ಕೆಂಡ ಸಿನಿಮಾ; ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ

ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ಕೆಂಡ ಸಿನಿಮಾ; ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ

ಸಹದೇವ್ ಕೆಲವಡಿ ನಿರ್ದೇಶನದ ಕೆಂಡ ಸಿನಿಮಾ ಈಗಾಗಲೇ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು, ವೀಕ್ಷಕರ, ಜ್ಯೂರಿಗಳಿಂದ ಮೆಚ್ಚುಗೆ ಪಡೆದಿದೆ. ಜತೆಗೆ ಒಂದಷ್ಟು ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದೆ. ಈ ನಡುವೆ ಇದೇ ಸಿನಿಮಾ ನ್ಯೂಯಾರ್ಕ್‌ನಲ್ಲೂ ಪ್ರೀಮಿಯರ್‌ ಆಗಿದೆ.

ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ಕೆಂಡ ಸಿನಿಮಾ; ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ
ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ಕೆಂಡ ಸಿನಿಮಾ; ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ

Kenda: ಕಂಟೆಂಟು ಗಟ್ಟಿಯಾಗಿದ್ದರೆ ಯಾವುದೇ ಹೈಪು, ಪ್ರಚಾರದ ಪಟ್ಟುಗಳಿಲ್ಲದೆಯೇ ಚಿತ್ರವೊಂದು ಸದ್ದು ಮಾಡಬಲ್ಲದು. ಈ ಮಾತಿಗೆ ಉದಾಹರಣೆಯಂತೆ ಅನೇಕ ಚಿತ್ರಗಳು ಪ್ರೇಕ್ಷಕರನ್ನು ಸೆಳೆದಿವೆ. ದೊಡ್ಡ ಮಟ್ಟದಲ್ಲಿ ಗೆದ್ದಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಎಲ್ಲ ಲಕ್ಷಣಗಳಿರುವ ಚಿತ್ರ `ಕೆಂಡ’. ಸಹದೇವ್ ಕೆಲವಡಿ ನಿರ್ದೇಶನದ ಈ ಚಿತ್ರ ಹೆಜ್ಜೆ ಹೆಜ್ಜೆಗೂ ಸುದ್ದಿ ಕೇಂದ್ರದಲ್ಲಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೀಗ ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಜೂನ್ 28ರಂದು ಪ್ರದರ್ಶನ ಕಂಡಿದೆ. 

ಕನ್ನಡದಲ್ಲಿ ತಯಾರುಗೊಂಡಿದ್ದ ಈ ಚಿತ್ರವೀಗ ತಾನೇತಾನಾಗಿ ವಿಶ್ವ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ. ಕನ್ನಡದ `ತಿಥಿ’ ಸಿನಿಮಾದ ಹಾದಿಯಲ್ಲಿ ಮುಂದುವರೆದು, ಜೂನ್ 29ರಂದು ಸ್ವಿಟ್ಜರ್‌ಲೆಂಡ್‌ನಲ್ಲಿಯೂ ಕೆಂಡ ಪ್ರದರ್ಶನಗೊಳ್ಳಲಿದೆ. ಇದೇನು ಸಲೀಸಾದ ಹಾದಿಯಲ್ಲ. ತನ್ನ ಕಂಟೆಂಟಿನ ಅಸಲೀ ಕಸುವಿನ ಕಾರಣದಿಂದಲೇ ಅದೆಲ್ಲ ಸಾಧ್ಯವಾಗಿದೆ. ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನ ಕಂಡ ಮೊಟ್ಟ ಮೊದಲ ಕನ್ನಡ ಚಿತ್ರವಾಗಿಯೂ ಕೆಂಡ ದಾಖಲೆ ಬರೆದಿದೆ. ಈ ಹಿಂದೆ ದಾದಾ ಸಾಹೇಬ್ ಫಾಲ್ಕೆ ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡಿದ್ದ ಈ ಚಿತ್ರ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಅನ್ನು ಪಡೆದುಕೊಂಡಿತ್ತು. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ಕಾಣುವ ಮೂಲಕ ಮತ್ತೊಂದು ದಾಖಲೆ ಕೆಂಡದ ಖಾತೆಗೆ ಜಮೆಯಾಗಿದೆ.

ಈ ಹಿಂದೆ ಗಂಟುಮೂಟೆ ಎಂಬ ಚಿತ್ರ ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ರೂಪಾ ರಾವ್ ಕೆಂಡವನ್ನು ನಿರ್ಮಾಣ ಮಾಡಿದ್ದಾರೆ. ಬದುಕಿಗೆ ಹತ್ತಿರಾದ, ಬರಿಗಣ್ಣಿಗೆ ನಿಲುಕದ ಸೂಕ್ಷ್ಮ ಕಥಾನಕದೊಂದಿಗೆ ಸಹದೇವ್ ಕೆಲವಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಕನ್ನಡದ ಕೆಂಡದ ಹವಾ ವಿಶ್ವಾದ್ಯಂತ ಹಬ್ಬಿಕೊಂಡಿದೆ. ಈ ಎಲ್ಲ ಕಾರಣಗಳಿಂದಾಗಿ ಕೆಂಡ ವಿಶಿಷ್ಟ ಚಿತ್ರವಾಗಿ ಪ್ರೇಕ್ಷಕರನ್ನು ಬಹುವಾಗಿ ಸೆಳೆಯುತ್ತಿದೆ.

ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

Whats_app_banner