Kichcha Sudeep: ರಸ್ತೆಗಿಳಿಯಿತು ಕಿಚ್ಚನ ‘ಮ್ಯಾಕ್ಸ್’ ಸಿನಿಮಾ ಹೆಸರಿನ ಆಂಬುಲೆನ್ಸ್; ಜೀವ ರಕ್ಷಕ ಸೇವೆಗೆ ಸುದೀಪ್ ಚಾಲನೆ
ಕಿಚ್ಚ ಸುದೀಪ್ ಅಭಿಮಾನಿಗಳೀಗ ನಟನ ಮೇಲಿನ ಅಭಿಮಾನವನ್ನು ವಿಶೇಷ ರೀತಿಯಲ್ಲಿ ತೋರ್ಪಡಿಸಿದ್ದಾರೆ. ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ. ಆ ಜೀವ ರಕ್ಷಕ ಸೇವೆಗೆ ಸ್ವತಃ ಸುದೀಪ್ ಚಾಲನೆ ನೀಡಿದ್ದಾರೆ.
Kichcha Sudeep: ಬಿಗ್ ಬಾಸ್ ಕನ್ನಡದ ಸೀಸನ್ 10 ಕೊನೇ ಘಟ್ಟಕ್ಕೆ ಬಂದು ನಿಂತಿದೆ. ಈ ಕೆಲಸಗಳ ಜತೆಗೆ ಮ್ಯಾಕ್ಸ್ ಸಿನಿಮಾ ಶೂಟಿಂಗ್‌ನಲ್ಲಿಯೂ ಸುದೀಪ್ ಅವರು ಭಾಗವಹಿಸಿದ್ದಾರೆ. ಇದೆಲ್ಲದರ ನಡುವೆ ಒಂದೊಳ್ಳೆಯ ಕೆಲಸಕ್ಕೂ ಅವರಿಂದ ಚಾಲನೆ ಸಿಕ್ಕಿದೆ. ಮ್ಯಾಕ್ಸ್ ಸಿನಿಮಾ ಹೆಸರಿನ ಆಂಬುಲೆನ್ಸ್ ಸೇವೆಯನ್ನು ಸುದೀಪ್ ಲೋಕಾರ್ಪಣೆ ಮಾಡಿದ್ದಾರೆ.
ಕಿಚ್ಚ ಸುದೀಪ್ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ತೆರೆಮರೆಯಲ್ಲಿ ಕಷ್ಟ ಎಂದು ಬಂದವರಿಗೆ ಸಹಾಯಹಸ್ತ ಚಾಚಿದ್ದಾರೆ. ಈಗಾಗಲೇ ತಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟ್ ಮೂಲಕ ಅವರು ಮಾಡಿರುವ ಸಹಾಯಗಳು ಎಲ್ಲರ ಕಣ್ಣಮುಂದಿವೆ. ಗ್ರಾಮ, ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದರ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯದ ನೆರವು ನೀಡಿದ್ದಾರೆ.
ಕಿಚ್ಚನ ಹೆಸರಿನ ಟ್ರಸ್ಟ್ ಹೊರತಾಗಿ ಅವರ ಅಭಿಮಾನಿಗಳೇ ಸಂಸ್ಥಾಪಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಸಾವಿರಾರು ಜೀವಗಳ ಉಳಿವಿಗೆ ನೆರವಾಗಿದೆ. ಬಹಳ ವರ್ಷಗಳಿಂದ ಕಿಚ್ಚ ಸುದೀಪ್ ಫ್ಯಾನ್ಸ್ ಪ್ರಾರಂಭಿಸಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್, ಸಮಾಜ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಅದರಂತೆ ಈ ಟ್ರಸ್ಟ್ ಈಗ ಮ್ಯಾಕ್ಸ್ ಹೆಸರಿನ ಆಂಬುಲೆನ್ಸ್ ಸೇವೆ ಪ್ರಾರಂಭಿಸಿದೆ. ಶುಕ್ರವಾರ ಮಾಕ್ಸ್ ಹೆಸರಿನ ಆಂಬುಲೆನ್ಸ್ ಅನ್ನು ಸುದೀಪ್ ಸಾವರ್ಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದ್ದಾರೆ.
ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮ್ಯಾಕ್ಸ್
ಅಂದಹಾಗೇ ಮ್ಯಾಕ್ಸ್ ಸಿನಿಮಾ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ಚಿತ್ರದ ಮೊದಲ ಗ್ಲಿಂಪ್ಸ್ ಅಭಿಮಾನಿಗಳಿಗೂ ಇಷ್ಟವಾಗಿದೆ. ಈ ಚಿತ್ರದಲ್ಲಿ ಸುದೀಪ್ ಅವರು ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್ ಸಿನಿಮಾ ಕ್ಲೈಮ್ಯಾಕ್ಸ್ ಶೂಟ್ ಮುಗಿದಿದೆ. ಇನ್ನೊಂದು ಕಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ನಡೆಯುತ್ತಿವೆ.
ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪ್ಪುಲಿ ಎಸ್ ದಾನು ಮ್ಯಾಕ್ಸ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶನದ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಸುದೀಪ್ ನಟಿಸಿದ್ದು, ವಿಭಿನ್ನ ಕಥೆಗೆ ಜೀವತುಂಬಿದ್ದಾರೆ. ಮ್ಯಾಕ್ಸ್ ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇರಲಿದ್ದು, ಇದರಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಕಾಮರಾಜ್, ಸುಕೃತಾ ವಾಗ್ಲೆ ಸೇರಿ ಹಲವರು ನಟಿಸಿದ್ದಾರೆ. ಮಾಸ್ ಆಕ್ಷನ್ ಶೈಲಿಯ ಸಿನಿಮಾ ಆಗಿರುವ ಈ ಚಿತ್ರ ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.