Kichcha Sudeep: ಸುದೀಪ್ ವಿರುದ್ಧ ನಿರ್ಮಾಪಕ ಕುಮಾರ್ ಆರೋಪಗಳೆಲ್ಲ ಸುಳ್ಳು, ಅವರಂತೆ ನಾವೂ ಕಾನೂನು ಹೋರಾಟಕ್ಕೆ ಸಿದ್ಧ ಎಂದ ಜಾಕ್ ಮಂಜು
ಕಿಚ್ಚ ಸುದೀಪ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ ನಿರ್ಮಾಪಕ ಎಂ.ಎನ್ ಕುಮಾರ್ ಕುರಿತು ಸುದೀಪ್ ಆಪ್ತ ಜಾಕ್ ಮಂಜು ಮಾತನಾಡಿದ್ದಾರೆ. ಘಟನೆಯ ಸತ್ಯಾಸತ್ಯತೆಯನ್ನು ತೆರೆದಿಟ್ಟಿದ್ದಾರೆ. ಕಾನೂನು ಹೋರಾಟ ಮುಂದುವರಿಸುವ ಬಗ್ಗೆಯೂ ಹೇಳಿಕೊಂಡಿದ್ದಾರೆ.
Kichcha Sudeep: ನಿರ್ಮಾಪಕ ಎಂ.ಎನ್ ಕುಮಾರ್ ಮತ್ತು ಕಿಚ್ಚ ಸುದೀಪ್ ನಡುವಿ ಹಗ್ಗ ಜಗ್ಗಾಟ ಮುಗಿಯುವ ಹಂತಕ್ಕೆ ಬರುವಂತೆ ಕಾಣುತ್ತಿಲ್ಲ. ಹಣ ಪಾವತಿಸುವಂತೆ ಎಂ.ಎನ್ ಕುಮಾರ್ ಪಟ್ಟು ಹಿಡಿದರೆ, ಮಾನ ಹಾನಿ ಮಾಡಿದ್ದಕ್ಕೆ 10 ಕೋಟಿ ಹಣ ನೀಡು ಎಂಬುದು ಸುದೀಪ್ ವಾದ. ಇದೀಗ ಈ ಇಬ್ಬರ ನಡುವಿನ ಅಸಲಿ ವಿಚಾರ ಬಹಿರಂಗವಾಗಿದೆ. ಕಿಚ್ಚ ಸುದೀಪ್ ಅವರ ಆಪ್ತ ಜಾಕ್ ಮಂಜು, ನಿರ್ಮಾಪಕ ಕುಮಾರ್ ಆರೋಪಗಳೆಲ್ಲ ಶುದ್ದು ಸುಳ್ಳು, ಅವರಂತೆ ನಾವೂ ಸಹ ಕಾನೂನು ಹೋರಾಟಕ್ಕೆ ಸಿದ್ಧ ಎಂದಿದ್ದಾರೆ. ಒಂದಷ್ಟು ವಿಚಾರಗಳನ್ನೂ ಹೇಳಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಬಿಚ್ಚಿಡುವ ಸಲುವಾಗಿಯೇ ನಿರ್ಮಾಪಕ ಜಾಕ್ ಮಂಜು ಇಂದು (ಜು. 9) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಈ ಸಮಸ್ಯೆಯ ಆಳ ಅಗಲವನ್ನು ವಿವರಿಸಿದ್ದಾರೆ. ಇದು ಶುರುವಾದ ಬಗೆ ಹೇಗೆ ಎಂಬುದನ್ನೂ ಹೇಳಿಕೊಂಡಿದ್ದಾರೆ. ಸುದೀಪ್ ಜತೆಗೆ ಸಿನಿಮಾ ಮಾಡುವ ಸಲುವಾಗಿ, ನಿರ್ಮಾಪಕ ಕುಮಾರ್ ಒಂದೇ ಒಂದು ರೂಪಾಯಿಯನ್ನೂ ನೀಡಿಲ್ಲ ಎಂದಿದ್ದಾರೆ ಜಾಕ್ ಮಂಜು.
ಇದನ್ನೂ ಓದಿ: ಬಗೆಹರಿಯದ ಸುದೀಪ್ -ನಿರ್ಮಾಪಕ ಕುಮಾರ್ ಅಡ್ವಾನ್ಸ್ ವಿವಾದಕ್ಕೆ ಶಿವಣ್ಣ, ರವಿಚಂದ್ರನ್ ಮಧ್ಯಸ್ಥಿಕೆ
ಕುಮಾರ್ ಅವರಿಗೆ ಉತ್ತರ ತಲುಪಿದೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಮ್ಮ ಪಾಲಿನ ಮಾತೃ ಸಂಸ್ಥೆ ಅದಕ್ಕೆ ಮರ್ಯಾದೆ ಕೊಟ್ಟಿದ್ದೇವೆ. ಅದು ಮುಂದೆಯೂ ಹಾಗೇ ಇರಲಿದೆ. ವಿಷಯ ಏನೆಂದರೆ, ಈ ಘಟನೆಗೆ ಸಂಬಂಧಿಸಿದಂತೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಸೇರಿ ಸದಸ್ಯರು ಸುದೀಪ್ ಮನೆಗೆ ಬಂದಿದ್ದರು. ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಂಡಿದ್ದಾರೆ. ಐದಾರು ವರ್ಷಗಳಿಂದ ಏನೆಲ್ಲ ಘಟಿಸಿತು ಎಂಬುದರ ಬಗ್ಗೆ ಸುದೀಪ್ ವಿವರಿಸಿದ್ದಾರೆ. ಇಷ್ಟಾದರೂ, ಚೇಂಬರ್‌ಗೆ ದೂರು ನೀಡಿದ್ದಾರೆ. ಹಾಗಾಗಿ ಚೇಂಬರ್‌ನಿಂದ ಬಂದ ಪತ್ರಕ್ಕೆ ನಾವೂ ಆಗಲೇ ಉತ್ತರ ನೀಡಿದ್ದೇವೆ.
ನಿರ್ದೇಶಕರ ಸಂಭಾವನೆ ವಿಚಾರವಾಗಿ ಸಿನಿಮಾ ಬಿಟ್ಟ ಕುಮಾರ್
ಮುಕುಂದ ಮುರಾರಿ ಸಿನಿಮಾ ರಿಲೀಸ್ ಆದ 8 ದಿನಕ್ಕೆ ಸುದೀಪ್ ಬಳಿ ಬಂದ ಕುಮಾರ್, ಡಿಮಾನೆಟೈಸೇಷನ್ ಆಗಿದೆ. ಆರ್ಥಿಕವಾಗಿ ತೊಂದರೆ ಆಗಿದೆ. ಒಂದು ಸಿನಿಮಾ ಮಾಡಿ. ತೊಂದರೆಯಿಂದ ಪಾರು ಮಾಡಿ ಎಂದಿದ್ದರು. ಆಗ ಸುದೀಪ್ ಸಹ ಒಪ್ಪಿಗೆ ಸೂಚಿಸಿ ನಿರ್ದೇಶಕರಿದ್ದರೆ ತಿಳಿಸಿ, ನಾನೂ ನೋಡುತ್ತೇನೆ ಎಂದಿದ್ದರು. ಹೀಗೆ ಸಮಯ ಮುಂದೂಡುತ್ತದೆ. ನಿರ್ದೇಶಕರು ಸಿಗುವುದಿಲ್ಲ. ಒಬ್ಬ ನಿರ್ದೇಶಕರ ಕಥೆ ಓಕೆ ಮಾಡಿ, ನಿರ್ಮಾಪಕರ ಬಳಿ ಕಳಿಸುತ್ತಾರೆ ಸುದೀಪ್. ಆಗ ನಿರ್ದೇಶಕರ ಸಂಭಾವನೆ ವಿಚಾರವಾಗಿ ಬೇಡ ಎನ್ನುತ್ತಾರೆ ಕುಮಾರ್. ಅದನ್ನು ಸುದೀಪ್ ಮುಂದೆಯೂ ಹೇಳುತ್ತಾರೆ. ಅದು ನೀವು ಬಗೆಹರಿಸಿಕೊಳ್ಳಬೇಕು ಎನ್ನುತ್ತಾರೆ. ಕೊನೆಗೆ ಆ ಸಿನಿಮಾನೇ ಸೆಟ್ಟೇರುವುದಿಲ್ಲ.
ಭಿಕ್ಷೆಯ ಹಣ ಬೇಡ ಎಂದಿದ್ದ ಕುಮಾರ್
ಹೀಗಿರುವಾಗಲೇ 2020ರಲ್ಲಿ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಶುರುವಾಗುತ್ತದೆ. ಆ ಸಿನಿಮಾಕ್ಕೂ ಮೂರು ವರ್ಷ ಬೇಕಾಯಿತು. ಸುದೀಪ್ ಅವರ ಅನಾರೋಗ್ಯ ಮತ್ತು ಕೆಲಸ ಒತ್ತಡದಿಂದಾಗಿ ಕುಮಾರ್ ಅವರನ್ನು ಭೇಟಿ ಮಾಡಲು ಆಗಲಿಲ್ಲ. ಆಗ ಸುದೀಪ್ ಪತ್ನಿ ಪ್ರಿಯಾ ಅವರೊಂದಿಗೆ ಮಾತುಕತೆ ನಡೆಸಿದರು. ಕೊನೆಗೆ ಈ ವಿಚಾರ ಸುದೀಪ್‌ಗೂ ಗೊತ್ತಾಗಿ, ಕುಮಾರ್ ಅವರನ್ನು ಕರೆಸಿ 5 ಕೋಟಿ ಸಹಾಯ ಮಾಡುವ ನಿರ್ಧಾರಕ್ಕೆ ಬರಲಾಗುತ್ತದೆ. ಆದರೆ, ಕುಮಾರ್ ಕೋಪದಲ್ಲಿ ಇದನ್ನು ಒಪ್ಪಿಕೊಳ್ಳುವುದಿಲ್ಲ. ಈ ರೀತಿಯ ಭಿಕ್ಷೆಯ ಹಣ ಬೇಡ, ಸಿನಿಮಾ ಮಾಡಿ ಎಂದು ಪಟ್ಟು ಹಿಡಿದರು" ಎಂಬುದು ಜಾಕ್ ಮಂಜು ಮಾತು.
ಇದನ್ನೂ ಓದಿ: ಹಸು ಖರೀದಿಸಿ ಹಣ ನೀಡದ ಆರೋಪ; ಸ್ಯಾಂಡಲ್‌ವುಡ್ ನಟ ನೀನಾಸಂ ಅಶ್ವತ್ಥ್ ಬಂಧನ
ಬಜೆಟ್ ಜಾಸ್ತಿ ಎಂದು ಮತ್ತೊಂದು ಪ್ರಾಜೆಕ್ಟ್ ಕ್ಯಾನ್ಸಲ್
ಸಹಾಯ ಬೇಡಿ ಬಂದವರಿಗೆ ಹಣ ನೀಡಲು ಮುಂದಾದರೆ, ಈ ರೀತಿ ಮಾಡಿಬಿಟ್ಟರಲ್ಲ ಎಂದು ಇದು ಸುದೀಪ್‌ಗೂ ಬೇಸರ ತಂದಿತು. ಈ ನಡುವೆ ಸಿಕ್ಕ ಸಿಕ್ಕವರ ಮುಂದೆ ಸುದೀಪ್ ಅವರಿಂದ ನನಗೆ ಹಣ ಬರಬೇಕು. ಆ ಹಣ ಬಂದ ಮೇಲೆ ನಿಮ್ಮ ಸಾಲ ತೀರಿಸುವೆ ಎಂದು ಹೇಳಿಕೊಂಡು ತಿರುಗಾಡಿದ್ರು. ಇದಷ್ಟೇ ಅಲ್ಲ ಬೇರೆ ಬೇರೆ ಸಿನಿಮಾಗಳಿಂದ ಆಗಿರುವ ನಷ್ಟಕ್ಕೆ ಸುದೀಪ್ ಅವರೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಇದೆಲ್ಲದರ ನಡುವೆ ಕುಮಾರ್ ಸ್ಥಿತಿ ಕಂಡು ಕಂಪನಿಯೊಂದರ ಜೊತೆ ಕೈ ಜೋಡಿಸಿ ಸಿನಿಮಾ ಮಾಡಲು ಮುಂದಾದರು. ಆಗ ಆ ಸಿನಿಮಾದ ಬಜೆಟ್ ಜಾಸ್ತಿ ಕಾರಣಕ್ಕೆ ಮತ್ತೆ ಮಾತು ಬದಲಾಯಿಸಿದರು. ಆ ಭೇಟಿಯೇ ಕುಮಾರ್ ಅವರ ಕೊನೆಯ ಭೇಟಿ. ಇದೀಗ ಅವರೂ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ನಾವೂ ಮುಂದುವರಿಸುತ್ತೇವೆ ಎಂದು ಹೇಳಿ ಜಾಕ್ ಮಂಜು ಮಾತು ಮುಗಿಸಿದ್ದಾರೆ.