Kichcha Sudeep: ಸರ್, ನಿಮ್ದು ಮತ್ತೆ ದರ್ಶನ್ ಅವರ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ತೀರಾ? ಹೀಗಿತ್ತು ಕಿಚ್ಚ ಸುದೀಪ್‌ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Kichcha Sudeep: ಸರ್, ನಿಮ್ದು ಮತ್ತೆ ದರ್ಶನ್ ಅವರ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ತೀರಾ? ಹೀಗಿತ್ತು ಕಿಚ್ಚ ಸುದೀಪ್‌ ಉತ್ತರ

Kichcha Sudeep: ಸರ್, ನಿಮ್ದು ಮತ್ತೆ ದರ್ಶನ್ ಅವರ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ತೀರಾ? ಹೀಗಿತ್ತು ಕಿಚ್ಚ ಸುದೀಪ್‌ ಉತ್ತರ

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮುಗಿಯುತ್ತಿದ್ದಂತೆ ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ ಕಿಚ್ಚ ಸುದೀಪ್. ಶೂಟಿಂಗ್‌ ಗ್ಯಾಪ್‌ನಲ್ಲಿಯೇ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ದರ್ಶನ್‌ ಬಗ್ಗೆಯೂ ಕೆಲವು ಪ್ರಶ್ನೆಗಳು ಅವರ ಬಳಿ ಬಂದಿವೆ. ಅದಕ್ಕೆ ಕಿಚ್ಚನ ಉತ್ತರ ಹೀಗಿತ್ತು.

Kichcha Sudeep: ಸರ್, ನಿಮ್ದು ಮತ್ತೆ ದರ್ಶನ್ ಅವರ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ತೀರಾ? ಹೀಗಿತ್ತು ಕಿಚ್ಚ ಸುದೀಪ್‌ ಉತ್ತರ
Kichcha Sudeep: ಸರ್, ನಿಮ್ದು ಮತ್ತೆ ದರ್ಶನ್ ಅವರ ಸಮಸ್ಯೆ ಯಾವಾಗ ಬಗೆಹರಿಸಿಕೊಳ್ತೀರಾ? ಹೀಗಿತ್ತು ಕಿಚ್ಚ ಸುದೀಪ್‌ ಉತ್ತರ (instagram)

Darshan: ಏಳು ವರ್ಷಗಳೇ ಘಟಿಸಿದವು ಕಿಚ್ಚ ಸುದೀಪ್‌ (Kichcha Sudeep) ಮತ್ತು ದರ್ಶನ್‌ (Darshan) ಮುಖಾಮುಖಿ ಆಗದೆ. ಇಬ್ಬರ ನಡುವೆ ಮುನಿಸಿದೆ ಎಂಬ ಮಾತು ಆಗಾಗ ಮುನ್ನೆಲೆಗೆ ಬರುತ್ತಲೇ ಇತ್ತು. ಅಭಿಮಾನಿ ವಲಯದಲ್ಲಿಯೂ ಇದು ಚರ್ಚೆ ಆಗುತ್ತಲೇ ಇತ್ತು. ಈ ನಡುವೆ ದರ್ಶನ್‌ ಮತ್ತು ಸುದೀಪ್‌ ಅದ್ಯಾವಾಗ ಒಂದಾಗುತ್ತಾರೆ ಎಂದು ಅಭಿಮಾನಿ ಬಳಗ ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದೇ ಹೆಚ್ಚು. ಆದರೆ, ಆ ಸಮಯ ಮಾತ್ರ ಬರಲೇ ಇಲ್ಲ. ಈ ನಡುವೆ, ಈ ಇಬ್ಬರು ಸ್ನೇಹಿತರು ಒಂದಾಗುವ ಗಳಿಗೆ ಬಂದೇ ಬಿಡ್ತು ಅನ್ನೋ ಕೆಲವು ಗಳಿಗೆ ಬಂದರೂ, ಅದು ಸಾಕಾರಗೊಳ್ಳಲಿಲ್ಲ. ಹಾಗಾದರೆ, ಇವರಿಬ್ಬರೂ ಯಾವತ್ತೂ ಒಂದಾಗಲ್ವ?

ಇತ್ತೀಚೆಗಷ್ಟೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಮುಕ್ತಾಯಗೊಂಡಿದೆ. ಕಾರ್ತಿಕ್‌ ಮಹೇಶ್‌ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್‌ ಪ್ರತಾಪ್‌ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಇತ್ತ ಇದೇ ಶೋವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ನಟ, ನಿರೂಪಕ ಕಿಚ್ಚ. ಜತೆಗೆ ಮ್ಯಾಕ್ಸ್‌ ಸಿನಿಮಾದತ್ತಲೂ ಗಮನ ಹರಿಸಿದ್ದಾರೆ. ಇನ್ನೇನು 25 ದಿನಗಳಲ್ಲಿ ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ ಮುಕ್ತಾಯಗೊಳ್ಳಲಿದೆ. ಈ ನಡುವೆಯೇ ಮತ್ತೆ ಅಭಿಮಾನಿಗಳ ಎದುರು ಬಂದಿದ್ದಾರೆ ಸುದೀಪ್.‌

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಸುದೀಪ್‌, ಜ. 29ರಂದು ಮ್ಯಾಕ್ಸ್‌ ಸಿನಿಮಾ ಶೂಟಿಂಗ್‌ ಸೆಟ್‌ಗೆ ತೆರಳಿದ್ದಾರೆ. ಬಿಡುವಿನ ಸಮಯದಲ್ಲಿ ಸೋಷಿಯಲ್‌ ಮೀಡಿಯಾ ವೇದಿಕೆ Xನಲ್ಲಿ ಫ್ಯಾನ್ಸ್‌ ಜತೆ ಚಿಟ್‌ ಚಾಟ್‌ ಮಾಡಿದ್ದಾರೆ. ಅಭಿಮಾನಿಗಳಿಗೆ #Askkichcha ಮೂಲಕ ಪ್ರಶ್ನೆಗಳನ್ನು ಆಹ್ವಾನಿಸಿದ್ದಾರೆ. ಈ ವೇಳೆ ಬಗೆ ಬಗೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೂ ಎಂದಿನಂತೆ ದರ್ಶನ್‌ ಕುರಿತಾದ ಪ್ರಶ್ನೆಗಳೂ ಎದುರಾಗಿವೆ. ಇದಕ್ಕೆ ಸುದೀಪ್‌ ಸಹ ಉತ್ತರಿಸಿದ್ದಾರೆ.

ದರ್ಶನ್‌ ಬಗ್ಗೆ ಅಭಿಮಾನಿಯ ಪ್ರಶ್ನೆ

ಈ ನಡುವೆ ಒಬ್ಬ ಅಭಿಮಾನಿ, "ಸರ್, ನಿಮ್ದು ಮತ್ತೆ ದರ್ಶನ್ ಅವರದ್ದು ಸಮಸ್ಯೆಯನ್ನ ಯಾವಾಗ ಬಗೆಹರಿಸಿಕೊಳ್ಳುತ್ತೀರಾ? ಇನ್ನು ಎಷ್ಟು ಟೈಮ್ ತಗೋತೀರಾ" ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಸುದೀಪ್, "ಸಮಸ್ಯೆ ಏನೂ ಅಂತ ಇಬ್ಬರೂ ಹುಡುಕ್ತಾ ಇದ್ದೀವಿ" ಎಂದಷ್ಟೇ ಉತ್ತರ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರ, ದರ್ಶನ್‌ ಮತ್ತು ಸುದೀಪ್‌ ಜತೆಗಿನ ಫೋಟೋ ಶೇರ್‌ ಮಾಡಿಕೊಂಡು, "ದರ್ಶನ್‌ ಬಗ್ಗೆ ಒಂದು ಮಾತು ಹೇಳಿ" ಎಂದಿದ್ದಾರೆ. ಅದಕ್ಕೆ ಸುದೀಪ್, "ನಾನು ಅವರಿಗೆ ಸದಾ ಒಳ್ಳೆಯದೇ ಆಗಲೆಂದು ಶುಭ ಹಾರೈಸುತ್ತೇನೆ" ಎಂದಿದ್ದಾರೆ. ಹೀಗೆ ಅಭಿಮಾನಿಗಳ ಜತೆಹೆ ಒಂದಷ್ಟು ಹೊತ್ತು ಸಮಯ ಕಳೆದಿದ್ದಾರೆ ಸುದೀಪ್.‌

ಸುಮಲತಾ ಬರ್ತ್‌ಡೇಯಲ್ಲಿ ಕೊನೇ ಬಾರಿ ಮುಖಾಮುಖಿ

ಕಳೆದ ವರ್ಷದ ಆಗಸ್ಟ್‌ನಲ್ಲಿ ಹಿರಿಯ ನಟಿ ಸುಮಲತಾ ತಮ್ಮ ಬರ್ತ್‌ಡೇ ನಿಮಿತ್ತ ಗ್ರ್ಯಾಂಡ್‌ ಪಾರ್ಟಿ ಆಯೋಜನೆ ಮಾಡಿದ್ದರು. ಆ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಬಹುತೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ವಿಶೇಷ ಏನೆಂದರೆ ಕಳೆದ ಏಳು ವರ್ಷಗಳ ಬಳಿಕ ನಟ ದರ್ಶನ್‌ ಮತ್ತು ಸುದೀಪ್‌ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಬ್ಬರ ವಿಡಿಯೋಗಳು ವೈರಲ್‌ ಆಗಿದ್ದವು. ಇಬ್ಬರಿಗೂ ಒಂದೇ ಸ್ಪೂನಿನಿಂದ ಕೇಕ್‌ ತಿನಿಸಿದ್ದರು ಸುಮಲತಾ. ಇದೆಲ್ಲವೂ ಅಭಿಮಾನಿಗಳ ಎದೆಯಲ್ಲಿ ಪುಳಕ ಸೃಷ್ಟಿಸಿತ್ತು. ಈ ಘಟನೆ ಬಳಿಕ, ನಾನು ಒಬ್ಬಂಟಿ ಎಂದು ಪೋಸ್ಟ್‌ ಹಾಕಿ ಅಭಿಮಾನಿಗಳ ಎದೆ ನಡುಗಿಸಿದ್ದರು ದರ್ಶನ್.‌

Whats_app_banner