ಕಿಂಗ್ ಈಸ್ ಬ್ಯಾಕ್, ಮಿಯಾಮಿಯಲ್ಲಿ ಕ್ಯಾನ್ಸರ್ ಚಿಕಿತ್ಸೆ ಬಳಿಕ ಬೆಂಗಳೂರಿಗೆ ಶಿವರಾಜ್ ಕುಮಾರ್ ಆಗಮನ
ಗಣರಾಜ್ಯೋತ್ಸವದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಮೆರಿಕದಿಂದ ಬೆಂಗಳೂರಿಗೆ ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸುವ ಸುದ್ದಿ ಕೇಳಿ ಶಿವಣ್ಣನನ್ನು ಸ್ವಾಗತಿಸಲು ಅಭಿಮಾನಿಗಳು, ಆತ್ಮೀಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದಾರೆ.

ಬೆಂಗಳೂರು: ಗಣರಾಜ್ಯೋತ್ಸವದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಮೆರಿಕದಿಂದ ಬೆಂಗಳೂರಿಗೆ ಇಂದು ಬೆಳಗ್ಗೆ 9 ಗಂಟೆಗೆ ಆಗಮಿಸುವ ಸುದ್ದಿ ಕೇಳಿ ಶಿವಣ್ಣನನ್ನು ಸ್ವಾಗತಿಸಲು ಅಭಿಮಾನಿಗಳು, ಆತ್ಮೀಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಶಿವಣ್ಣ ಆಗಮಿಸಿದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಇಂದು ಬೆಂಗಳೂರಿಗೆ ಶಿವಣ್ಣ ವಾಪಸ್ ಬರುವ ಸುದ್ದಿ ಕೇಳಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣ ರಸ್ತೆಗಳು, ಶಿವಣ್ಣನ ಮನೆ ಆಸುಪಾಸಿನಲ್ಲಿ "ಕಿಂಗ್ ಈಸ್ ಬ್ಯಾಕ್ ಕೌಟೌಟ್‌ಗಳು ರಾರಾಜಿಸುತ್ತಿವೆ. ಕಟೌಟ್‌ಗಳಲ್ಲಿ ಶಿವರಾಜ್ ಕುಮಾರ್ ಜತೆ ಗೀತಾ ಶಿವರಾಜ್ ಕುಮಾರ್ ಫೋಟೋ ಕೂಡ ರಾರಾಜಿಸುತ್ತಿದೆ. ಶಿವ ರಾಜ್ ಕುಮಾರ್ ಬೆಂಗಳೂರಿಗೆ ವಾಪಸ್ ಬರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಅನ್ನ ಸಂತರ್ಪಣೆ ಆಯೋಜನೆ ಮಾಡಿದ್ದಾರೆ.
"ಇದು ಸ್ಯಾಂಡಲ್‌ವುಡ್‌ಗೆ ಸಂಭ್ರಮದ ಕ್ಷಣ. ಶಿವಣ್ಣ ಅಂದರೆ ಎಲ್ಲರಿಗೂ ಇಷ್ಟ. ಶಿವರಾಜ್ ಕುಮಾರ್ ಅವರನ್ನು ಸ್ವಾಗತಿಸಲು ಬಂದಿದ್ದೇವೆ. ಅವರು ಆರೋಗ್ಯವಾಗಿ ಬರುತ್ತಿರುವುದು ಖುಷಿ ನೀಡಿದೆ. ಅವರಿಗೆ ಇನ್ನು ಮುಂದೆ ದೇವರ ದಯೆಯಿಂದ ಅವರಿಗೆ ಆರೋಗ್ಯ ಸಮಸ್ಯೆಯಾಗದು. ಅವರು ಇನ್ನೂ ನೂರೈವತ್ತು ಸಿನಿಮಾ ಮಾಡಲಿದ್ದಾರೆ" ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿವಣ್ಣನ ಸ್ವಾಗತಕ್ಕೆ ಬಂದಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.
ಕ್ಯಾನ್ಸರ್ ಟ್ರೀಟ್‌ಮೆಂಟ್‌ಗೆ ಅಮೆರಿಕಾಕ್ಕೆ ಹೋಗಿದ್ದ ನಟ ಶಿವರಾಜ್ ಕುಮಾರ್ ಹೊಸ ವರ್ಷದ ಮೊದಲ ದಿನವೇ ಶುಭ ಸುದ್ದಿ ನೀಡಿದ್ದರು. ಮಿಯಾಮಿಯಿಂದಲೇ ವಿಶೇಷ ವಿಡಿಯೋ ಶೇರ್ ಮಾಡಿದ ಶಿವಣ್ಣ, ನಾನೀಗ ಕ್ಯಾನ್ಸರ್ ಫ್ರೀ. ಎಲ್ಲ ವರದಿಗಳೂ ನೆಗೆಟಿವ್ ಬಂದಿದೆ. ಒಂದು ತಿಂಗಳು ರೆಸ್ಟ್ ಮಾಡಿ, ಮಾರ್ಚ್ ವೇಳೆಗೆ ಮತ್ತೆ ನಿಮ್ಮ ಎನರ್ಜಿಟಿಕ್ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ ಎಂದಿದ್ದಾರೆ. ಅಂದಹಾಗೆ, ಶಿವಣ್ಣ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದೀಗ ಗಣರಾಜ್ಯೋತ್ಸವದ ಸಂಭ್ರಮದ ಸಮಯದಲ್ಲಿ ಕರುನಾಡಿಗೆ ಶಿವಣ್ಣ ಆಗಮಿಸಿರುವುದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.
ಹೊಸ ವರ್ಷದಂದು ಶಿವಣ್ಣ ಪುಟ್ಟ ವಿಡಿಯೋ ಮೂಲಕ ತನ್ನ ಹೆಲ್ತ್ ಅಪ್‌ಡೇಟ್ ನೀಡಿದ್ದರು. "ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ನನಗೂ ಭಯ ಆಗುತ್ತೆ. ಮಾತಾಡುವಾಗ ಎಲ್ಲಿ ಎಮೋಷನಲ್ ಆಗ್ತೀನೋ ಅಂತಾ. ಹೊರಡಬೇಕಾದಾಗ ನಾನು ಭಾವುಕನಾಗಿದ್ದೆ. ನನಗೂ ಅಂಥ ಒಂದು ಭಯ ಇತ್ತು. ಆದರೆ, ಭಯ ನೀಗಿಸೋಕೆ ಅಂತಾನೆ ಅಭಿಮಾನಿ ದೇವರುಗಳಿರ್ತಾರೆ. ಕೆಲವರು ಕಲಾವಿದರು ಇರ್ತಾರೆ, ಕೆಲವು ಸ್ನೇಹಿತರು, ಸಂಬಂಧಿಗಳು ಹಾಗೂ ವೈದ್ಯರು ಇರುತ್ತಾರೆ. ಬೆಂಗಳೂರಿನಲ್ಲಿ ನನಗೆ ಕಿಮೋ ಮಾಡಿದ ಡಾಕ್ಟರ್‌ಗಳು, ಶಶಿಧರ್, ದಿಲೀಪ್, ಬಿ ಕೆ ಶ್ರೀನಿವಾಸ್ ತುಂಬ ಚೆನ್ನಾಗಿ ನೋಡಿಕೊಂಡರು" ಎಂದು ವಿಡಿಯೋ ಸಂದೇಶದಲ್ಲಿ ಶಿವರಾಜ್ ಕುಮಾರ್ ಹೇಳಿದ್ದರು.
"ಈ ಹಿಂದೆ ನಾನು ಕಿಮೋಥೆರಪಿ ಮಾಡಿಕೊಂಡು 45 ದಿನಗಳ ಕಾಲ ಸಿನಿಮಾದ ಅಂತಿಮ ಘಟ್ಟದ ಶೂಟಿಂಗ್ ಮುಗಿಸಿದ್ದೆ. ಅನಾರೋಗ್ಯದ ಸಮಯದಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡ ಸಿನಿಮಾ ತಂಡಕ್ಕೆ ಕ್ರೆಡಿಟ್ ಸಲ್ಲಬೇಕು. ಆಪರೇಷನ್ ದಿನ ಹತ್ತಿರ ಬರ್ತಿದ್ದಂತೆ, ನನಗೂ ಟೆನ್ಷನ್ ಜಾಸ್ತಿ ಆಯ್ತು. ಆಪ್ತರು ನನ್ನ ಜೊತೆಗಿದ್ದರು. ಇನ್ನು ಗೀತಾ ಇಲ್ಲದೆ ನಾನಿಲ್ಲ. ಆಕೆಯಿಂದ ದೊಡ್ಡ ಬೆಂಬಲ ನನಗೆ ಸಿಕ್ಕಿದೆ. ನನ್ನನ್ನು ಮಧು ಬಂಗಾರಪ್ಪ ಮಗು ರೀತಿ ನೋಡಿಕೊಂಡರು. ಬ್ಯಾಪ್ಟಿಸ್ಟ್ ಆಸ್ಪತ್ರೆ, ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲೂ ಇನ್ನೊಬ್ಬ ತಾಯಂದಿರು, ಆ ಥರ ನೋಡಿಕೊಂಡಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿದ್ದ ಯೂರಿನಲ್ ಬ್ಲಾಡರ್ (ಮೂತ್ರಕೋಶ) ತೆಗೆದಿದ್ದಾರೆ. ಈಗ ಹೊಸ ಬ್ಲಾಡರ್ ಹಾಕಿದ್ದಾಗಿ ತಿಳಿಸಿದ್ದಾರೆ. ಇದು ಸಿಂಪಲ್ ಆಪರೇಷನ್" ಎಂದು ಶಿವಣ್ಣ ತನ್ನ ಆರೋಗ್ಯದ ಕುರಿತು ಅಪ್‌ಡೇಟ್ ನೀಡಿದ್ದರು.
