ತಮಿಳು ನಿರ್ದೇಶಕ ಪವಿತ್ರನ್‌ ಕನ್ನಡ ಸಿನಿಮಾ ಕರ್ಕಿ ತೆರೆಗೆ ಬರಲು ರೆಡಿ; ಅರ್ಜುನ್‌ ಜನ್ಯ ಮೆಲೋಡಿ ಹಾಡುಗಳ ಬಿಡುಗಡೆ-sandalwood news kollywood senior director pavitran directs karki kannada movie audio released mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತಮಿಳು ನಿರ್ದೇಶಕ ಪವಿತ್ರನ್‌ ಕನ್ನಡ ಸಿನಿಮಾ ಕರ್ಕಿ ತೆರೆಗೆ ಬರಲು ರೆಡಿ; ಅರ್ಜುನ್‌ ಜನ್ಯ ಮೆಲೋಡಿ ಹಾಡುಗಳ ಬಿಡುಗಡೆ

ತಮಿಳು ನಿರ್ದೇಶಕ ಪವಿತ್ರನ್‌ ಕನ್ನಡ ಸಿನಿಮಾ ಕರ್ಕಿ ತೆರೆಗೆ ಬರಲು ರೆಡಿ; ಅರ್ಜುನ್‌ ಜನ್ಯ ಮೆಲೋಡಿ ಹಾಡುಗಳ ಬಿಡುಗಡೆ

Karki Kannada Movie: ತಮಿಳು ನಿರ್ದೇಶಕ ಪವಿತ್ರನ್‌ ನಿರ್ದೇಶನ ಮಾಡಿರುವ ಕನ್ನಡ ಸಿನಿಮಾ ಕರ್ಕಿ. ಈಗಾಗಲೇ ಟ್ರೇಲರ್‌ ಮೂಲಕ ಗಮನ ಸೆಳೆದ ಈ ಸಿನಿಮಾ, ಇದೀಗ ಹಾಡುಗಳ ಮೂಲಕವೂ ಮುನ್ನೆಲೆಗೆ ಬಂದಿದೆ. ಇನ್ನೇನು ಇದೇ ತಿಂಗಳು ಈ ಚಿತ್ರ ಬಿಡುಗಡೆ ಆಗಲಿದೆ.

ಕರ್ಕಿ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ
ಕರ್ಕಿ ಸಿನಿಮಾದ ಹಾಡುಗಳು ಬಿಡುಗಡೆ ಆಗಿವೆ

Karki Kannada Movie Audio Released: ಒಂದಷ್ಟು ಕಾರಣಕ್ಕೆ ಕನ್ನಡದ ಕರ್ಕಿ ಸಿನಿಮಾ ಕುತೂಹಲ ಮೂಡಿಸಿದೆ. ತಮಿಳಿನಲ್ಲಿ 90ರ ದಶಕದಲ್ಲಿ ‘ಸೂರ್ಯನ್’, ‘ಐ ಲವ್ ಇಂಡಿಯಾ’, ‘ಇಂದು’, ‘ಕಲ್ಲೂರಿ ವಾಸಲ್‍’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದವರು ಖ್ಯಾತ ನಿರ್ದೇಶಕ ಪವಿತ್ರನ್. ಈಗ ಪವಿತ್ರನ್ ಕನ್ನಡದಲ್ಲಿ ಸದ್ದಿಲ್ಲದೆ ‘ಕರ್ಕಿ’ ಎಂಬ ಹೊಸ ಸಿನಿಮಾ ಮಾಡಿ ಮುಗಿಸಿದ್ದು, ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ‘ಕರ್ಕಿ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಿದೆ.

ನಿರ್ದೇಶಕ ಪವಿತ್ರನ್‌ ಹೇಳುವುದೇನು?

ಇನ್ನು ಖ್ಯಾತ ನಿರ್ದೇಶಕ ಪವಿತ್ರನ್, ‘ಇದು ಕನ್ನಡ ಚಿತ್ರ ಪ್ರೇಕ್ಷಕರಿಗೆ ಖಂಡಿತವಾಗಿಯೂ ಮನಮುಟ್ಟುವ ಸಿನಿಮಾವಾಗಲಿದೆ. ನಮ್ಮ ನಡುವೆಯೇ ನಡೆಯುವ ನೈಜ ಕಥೆಯನ್ನು ಈ ಸಿನಿಮಾದಲ್ಲಿ ತೆರೆಮೇಲೆ ತಂದಿದ್ದೇವೆ. ಇಲ್ಲಿ ಯಾವುದನ್ನೂ ವೈಭವೀಕರಿಸದೆ, ನೈಜವಾಗಿ ಪ್ರೇಕ್ಷಕರ ಮುಂದಿಡುವ ಕೆಲಸ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಪ್ರೇಕ್ಷಕರು ಬೆಂಬಲಿಸುತ್ತಾರೆ ಎಂಬ ನಂಬಿಕೆಯಿದೆ’ ಎನ್ನುತ್ತಾರೆ ನಿರ್ದೇಶಕ ಪವಿತ್ರನ್.

ಜಯಪ್ರಕಾಶ್ ಕರ್ಕಿ ನಾಯಕ

ಈ ಹಿಂದೆ ‘ವಾಟ್ಸಾಪ್ ಲವ್’, ‘ರಾಜರಾಣಿ’ ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಜಯಪ್ರಕಾಶ್ (ಜೆ.ಪಿ) ರೆಡ್ಡಿ ‘ಕರ್ಕಿ’ ಚಿತ್ರದ ನಾಯಕ. ಕಾನೂನು ಪದವಿಧರನಾಗಬೇಕು ಎಂಬ ಕನಸಿರುವ ಹಳ್ಳಿ ಹುಡುಗನ ಪಾತ್ರದಲ್ಲಿ ಜೆಪಿ ಅಭಿನಯಿಸಿದ್ದಾರೆ. ‘ಈ ಚಿತ್ರದಲ್ಲಿ ನನ್ನದು ಮುತ್ತುರಾಜ್ ಎಂಬ ಹಳ್ಳಿ ಹುಡುಗನ ಪಾತ್ರ. ಜಾತಿ ಮತ್ತು ಜನಾಂಗೀಯ ವಿಷಯವನ್ನು ಮನ ಮುಟ್ಟುವಂತೆ ಇಲ್ಲಿ ಹೇಳಲಾಗಿದೆ. ಸ್ನೇಹ, ಪ್ರೀತಿ, ಪ್ರೇಮ ಮತ್ತು ಮಾನವೀಯತೆಯ ಅಂಶಗಳ ಸುತ್ತ ಈ ಚಿತ್ರ ಸಾಗುತ್ತದೆ. ಆದಷ್ಟು ನೈಜವಾಗಿ ಸಿನೆಮಾದ ಕಥೆ, ಪಾತ್ರಗಳು ಮೂಡಿಬಂದಿದೆ’ ಎಂದಿದ್ದಾರೆ.

ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಿಸಿರುವ ವಿತರಕ ಮತ್ತು ಉದ್ಯಮಿ ಪ್ರಕಾಶ್ ಪಳನಿ, ‘ಕರ್ಕಿ’ ಚಿತ್ರವನ್ನು ನಿರ್ಮಿಸಿದ್ದಾರೆ. ತಮ್ಮ ಮೊದಲ ಚಿತ್ರದ ಬಗ್ಗೆ ಮಾತನಾಡುವ ಅವರು, ‘ಸಿನೆಮಾದ ಕಥೆ ಇಷ್ಟವಾಗಿ ಈ ಸಿನೆಮಾವನ್ನು ನಿರ್ಮಿಸಲು ಮುಂದಾದೆ. ಮೊದಲು ಈ ಸಿನೆಮಾವನ್ನು ಕನ್ನಡದ ದೊಡ್ಡ ನಿರ್ದೇಶಕರೊಬ್ಬರು ಮಾಡಬೇಕಿತ್ತು. ಕಾರಣಾಂತರಗಳಿಂದ ಅವರು ನಿರ್ದೇಶನ ಮಾಡಲಾಗಲಿಲ್ಲ. ಅವರ ಬದಲಾಗಿ ತಮಿಳು ನಿರ್ದೇಶಕ ಪವಿತ್ರನ್ ಈ ಸಿನಿಮಾವನ್ನು ನಿರ್ದೇಶಿಸಿದರು. ಅವರ ಅನುಭದಲ್ಲಿ ‘ಕರ್ಕಿ’ ಸಿನೆಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆಯಿದೆ’ ಎಂದರು.

ಕರ್ಕಿ ಮೆಲೋಡಿ ಗೀತೆಗೆ ಅರ್ಜುನ್ ಜನ್ಯ ಟ್ಯೂನ್

‘ಕರ್ಕಿ’ ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದಲ್ಲಿ ಬೇರೆ ಬೇರೆ ಶೈಲಿಯ ಆರು ಹಾಡುಗಳಿದ್ದು, ಈ ಎಲ್ಲಾ ಹಾಡುಗಳಿಗೆ ಸಾಹಿತ್ಯ ರಚಿಸಿದವರು ಚಿತ್ರ ಸಾಹಿತಿ ಕವಿರಾಜ್‍. ಚಿತ್ರದ ಕುರಿತು ಮಾತನಾಡುವ ಕವಿರಾಜ್, ‘ತಮಿಳಿನ ಹಿರಿಯ ಮತ್ತು ಅನುಭವಿ ನಿರ್ದೇಶಕ ಪವಿತ್ರನ್, ಈ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನೆಮಾದಲ್ಲಿ ಆರು ಹಾಡುಗಳಿದ್ದು, ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆಯಲು ಅವಕಾಶ ಸಿಕ್ಕಿದೆ. ಪ್ರತಿ ಹಾಡಿನ ಒಂದೊಂದು ಪದವನ್ನೂ ಅವರೂ ಅರ್ಥೈಸಿಕೊಂಡು, ಸ್ಪಂದಿಸುತ್ತಿದ್ದರು. ನಮ್ಮ ನಡುವಿನ ಕಥೆಯೊಂದು ಹೊಸ ರೀತಿಯಲ್ಲಿ ಮೂಡಿಬಂದಿದ್ದು, ‘ಕರ್ಕಿ’ ನೋಡುಗರಿಗೆ ಹೊಸ ಅನುಭವ ಕೊಡಲಿದೆ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮಾಸಾಂತ್ಯಕ್ಕೆ ‘ಕರ್ಕಿ’ ದರ್ಶನ ಫಿಕ್ಸ್

ಚಿತ್ರತಂಡದ ಮೂಲಗಳ ಪ್ರಕಾರ ಇದೇ ಸೆಪ್ಟೆಂಬರ್ ಅಂತ್ಯದೊಳಗೆ ‘ಕರ್ಕಿ’ ಸಿನಿಮಾ ತೆರೆಗೆ ಬರುವ ಯೋಜನೆ ಹಾಕಿಕೊಂಡಿದೆ. ‘ಕರ್ಕಿ’ ಸಿನಿಮಾ ಹಿಂದಿಯಲ್ಲಿ ‘ಧಡಕ್ 2’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಈ ಸಿನಿಮಾವನ್ನು ಕರಣ್ ಜೋಹಾರ್ ನಿರ್ಮಿಸಿ, ಬಾಲಿವುಡ್ ನಲ್ಲಿ ತೆರೆಗೆ ತರುತ್ತಿದ್ದಾರೆ. ಆ ಸಿನಿಮಾ ನವೆಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದ್ದು, ಅಷ್ಟರೊಳಗೆ ‘ಕರ್ಕಿ’ ಕನ್ನಡದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾನೆ.

ಚಂದನವನಕ್ಕೆ ಮಲಯಾಳಿ ಮೀನಾಕ್ಷಿ ಎಂಟ್ರಿ

ಇನ್ನು ‘ಕರ್ಕಿ’ ಸಿನೆಮಾದಲ್ಲಿ ನಾಯಕಿಯಾಗಿ ಮಲೆಯಾಳಿ ಬೆಡಗಿ ಮೀನಾಕ್ಷಿ ಕಾಣಿಸಿಕೊಂಡಿದ್ದಾರೆ. ಮೀನಾಕ್ಷಿ ಅವರಿಗೆ ಇದು ಮೊದಲ ಕನ್ನಡ ಸಿನೆಮಾ. ಈ ಸಿನೆಮಾದಲ್ಲಿ ಮೀನಾಕ್ಷಿ ಅವರದ್ದು ಶ್ರೀಮಂತ ಕುಟುಂಬದ, ಮೇಲ್ವರ್ಗದ ಹುಡುಗಿಯ ಪಾತ್ರವಂತೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಮೀನಾಕ್ಷಿ, ‘ನನ್ನ ಮೊದಲ ಕನ್ನಡ ಸಿನೆಮಾದಲ್ಲೇ ಒಳ್ಳೆಯ ಪಾತ್ರ ಸಿಕ್ಕಿದೆ. ನೈಜತೆಗೆ ಹತ್ತಿರವಿರುವಂತ ಪಾತ್ರ ಇದಾಗಿದೆ. ಅಪ್ಪಟ ಕನ್ನಡದ ಹುಡುಗಿಯ ಪಾತ್ರ ಮಾಡಿಕುವುದಕ್ಕೆ ಖುಷಿಯಿದೆ. ಪ್ರತಿಯೊಬ್ಬ ನೋಡುಗರಿಗೂ ನನ್ನ ಪಾತ್ರ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನುರಿತ ಕಲಾವಿದರ ಜೊತೆ ‘ಕರ್ಕಿ’ ಆಗಮನ

‘ಕರ್ಕಿ’ ಚಿತ್ರದಲ್ಲಿ ಜಯಪ್ರಕಾಶ್‍ ಅವರಿಗೆ ಮಲೆಯಾಳಿ ಬೆಡಗಿ ಮೀನಾಕ್ಷಿ ಜೋಡಿಯಾಗಿದ್ದಾರೆ. ಉಳಿದಂತೆ ಸಾಧು ಕೋಕಿಲ, ಬಲ ರಾಜವಾಡಿ, ಯತಿರಾಜ್, ಮಿಮಿಕ್ರಿ ಗೋಪಿ, ಸ್ವಾತಿ, ಸವಿತಾ ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಹೃಷಿಕೇಶ ಛಾಯಾಗ್ರಹಣ, ಕ್ರೇಜಿಮೈಂಡ್ಸ್ ಶ್ರೀ ಸಂಕಲನ, ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಒಟ್ಟಾರೆ ಬೃಹತ್ ಕಲಾವಿದರ ತಾರಾಗಣ, ನುರಿತ ತಂತ್ರಜ್ಞರ ದಂಡೇ ‘ಕರ್ಕಿ’ ಸಿನಿಮಾದಲ್ಲಿದೆ. ಸದ್ಯ ತನ್ನ ಟೀಸರ್ ಮತ್ತು ಟ್ರೇಲರ್ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ ‘ಕರ್ಕಿ’ ಅಬ್ಬರ ತೆರೆಮೇಲೆ ಹೇಗಿರಲಿದೆ ಎಂಬುದು ಇದೇ ತಿಂಗಳಾಂತ್ಯಕ್ಕೆ ಗೊತ್ತಾಗಲಿದೆ.

ಸಂಗೀತ ನಿರ್ದೇಶಕ ಮತ್ತು ಸಾಹಿತಿ ಕೆ. ಕಲ್ಯಾಣ್, ಚಿತ್ರ ಸಾಹಿತಿ ಕವಿರಾಜ್, ನಟಿ ಸಾತ್ವಿಕಾ, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ. ವಿಶ್ವನಾಥ್, ಬಾ. ಮ. ಹರೀಶ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಮತ್ತು ಚಿತ್ರತಂಡದ ಸದಸ್ಯರು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ‘ಕರ್ಕಿ’ಯ ಹಾಡುಗಳನ್ನು ಬಿಡುಗಡೆ ಮಾಡಿದರು.

mysore-dasara_Entry_Point