ಕನ್ನಡ ಸುದ್ದಿ  /  ಮನರಂಜನೆ  /  ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ; ಬಾಯಿಗೆ ಬಾರದೆ ಮಾತು ಹಾಡನ್ನು ಕೇಳೋಣ ಬನ್ನಿ

Kotee Kannada Movie: ಡಾಲಿ ಧನಂಜಯ್‌, ಮೋಕ್ಷ ಕುಶಾಲ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು "ಬಾಯಿಗೆ ಬಾರದೆ ಮಾತು, ತುದಿ ನಾಲಿಗೆ ಕೂತಿದೆ ಸೋತು" ಬಿಡುಗಡೆಯಾಗಿದೆ. ವಾಸುಕಿ ವೈಭವ್‌ ಸಂಯೋಜಿಸಿದ ಈ ಹಾಡಿನ್ನು ಅರ್ಮಾನ್‌ ಮಲಿಕ್‌ ಹಾಡಿದ್ದಾರೆ.

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ
ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಮೊದಲ ಹಾಡು ಬಿಡುಗಡೆ

ಬೆಂಗಳೂರು: ಡಾಲಿ ಧನಂಜಯ್ ಅಭಿನಯದ ಕೋಟಿ ಸಿನಿಮಾದ ಮೊದಲ ಹಾಡು 'ಮಾತು ಸೋತು' ಈಗ ಬಿಡುಗಡೆಯಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿದ್ದು, ಯೋಗರಾಜ್ ಭಟ್ ಸಾಹಿತ್ಯ ರಚಿಸಿ, ಅರ್ಮಾನ್ ಮಲಿಕ್ ಹಾಡಿದ್ದಾರೆ. ಕೋಟಿ ಸಿನಿಮಾದ ಹಾಡುಗಳ ಹಕ್ಕನ್ನು ಸರೆಗಮ ಖರೀದಿಸಿದ್ದು ಈ ಹಾಡಿನ ಲಿರಿಕಲ್ ವಿಡಿಯೋವನ್ನು ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ‌ ವೀಕ್ಷಿಸಬಹುದು.

ಟ್ರೆಂಡಿಂಗ್​ ಸುದ್ದಿ

ಹಾಡಿನ ಸಂಯೋಜಕರಾದ ವಾಸುಕಿ ವೈಭವ್ "ಇದು ನನ್ನ ಮತ್ತು ಅರ್ಮಾನ್ ಮಲಿಕ್ ಕಾಂಬಿನೇಷನ್ನಿನ ಮೊದಲ ಹಾಡು. ಸಾಹಿತ್ಯ ಯೋಗರಾಜ್ ಭಟ್ ಅವರದ್ದು. ಅವರ ಜತೆ ಕೆಲಸ ಮಾಡುವುದು ಯಾವಾಗಲೂ ಖುಷಿ ಮತ್ತು ಕಲಿಕೆಯ ವಿಚಾರ. ಜನರಿಗೆ ಖಂಡಿತ ಈ ಹಾಡು ಇಷ್ಟವಾಗತ್ತೆ‌ ಅನ್ನೊ ನಂಬಿಕೆ ಇದೆ" ಎಂದು ಹೇಳಿದರು.

“ವಾಸುಕಿ ಹೊಸ ತಲೆಮಾರಿನ ಪ್ರತಿಭಾವಂತ ಸಂಗೀತ ನಿರ್ದೇಶಕ. ಯೋಗರಾಜ್ ಭಟ್ ಅವರ ಸಾಹಿತ್ಯದ ದೊಡ್ಡ ಅಭಿಮಾನಿ ನಾನು. ಈ ಇಬ್ಬರ ಕಾಂಬಿನೇಷನ್ನಿನ ಈ ಹಾಡನ್ನು ಅರ್ಮಾನ್ ಮಲಿಕ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಈ ಹಾಡು ಕನ್ನಡದ ಕಿವಿ ಮತ್ತು ಮನಸುಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಕೋಟಿಯ ನಿರ್ದೇಶಕ ‘ಪರಮ್’ ಅಭಿಪ್ರಾಯ ಪಟ್ಟರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ರಮೇಶ್‌ ಇಂದಿರಾ, ತಾರಾ, ಸರ್ದಾರ್‌ ಸತ್ಯ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಚಾರ್ಲಿ 777 ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ.

ರಿಷಬ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾದಲ್ಲಿ ಮಾಡಿರುವ ಕೆಲಸಗಳಿಂದ ಪ್ರಶಂಸೆ ಪಡೆದಿರುವ ಪ್ರತೀಕ್‌ ಶೆಟ್ಟಿ ಈ ಸಿನಿಮಾದ ಸಂಕಲನಕಾರರು. ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಜಿಯೋ ಸ್ಟುಡಿಯೋಸ್‌ ನಿರ್ಮಾಣ ಮಾಡಿದ ಈ ಸಿನಿಮಾವನ್ನು ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ಕನ್ನಡ ಕೋಟಿ ಸಿನಿಮಾ ಇದೇ ವರ್ಷ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ.

ಈ ಸಿನಿಮಾದಲ್ಲಿ ಧನಂಜಯ್ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಹಲವು ಜಾಹೀರಾತುಗಳಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಕೊಡಗಿನ ಮೂಲದ ಕನ್ನಡದ ನಟಿ ಮೋಕ್ಷಾಗೆ ಇದು ಮೊದಲ ಸಿನಿಮಾ. ‘ಸಪ್ತ ಸಾಗರದಾಚೆ ಎಲ್ಲೋʼ ಸಿನಿಮಾದ ನಂತರ ಜನರಿಗೆ ಹೆಚ್ಚು ಪರಿಚಯವಾದ ರಮೇಶ್ ಇಂದಿರಾ ಈ ಸಿನಿಮಾದಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ.

ಕನ್ನಡದ ಯುವ ಪ್ರತಿಭಾನ್ವಿತ ಗಾಯಕ ವಾಸುಕಿ ವೈಭವ್ ಕೋಟಿ ಸಿನಿಮಾದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿದ್ದಾರೆ. ಕೋಟಿಯಲ್ಲಿ ಒಟ್ಟು ಐದು ಹಾಡುಗಳಿವೆ. 3 ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಈ ಸಿನಿಮಾದ ಒಂದು ಹಾಡನ್ನು ಸ್ವತಃ ವಾಸುಕಿ ವೈಭವ್‌ ಬರೆದಿರುವುದು ವಿಶೇಷ. ‘777ಚಾರ್ಲಿ’ ಸೇರಿದಂತೆ ಹಲವು ಸಿನಿಮಾಗಳಿಗೆ ಹಿನ್ನೆಲೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ನೊಬಿನ್ ಪೌಲ್ ಅವರು ಈ ಚಿತ್ರಕ್ಕೆ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ನೀಡುತ್ತಿದ್ದಾರೆ.

ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point