ಬಾಕ್ಸ್ ಆಫೀಸ್‌ನಲ್ಲಿ ಡಾಲಿ- ಚಿಟ್ಟೆ ಮುಖಾಮುಖಿ; ಚಿತ್ರಮಂದಿರಕ್ಕೆ ‘ಚೆಫ್’ ಜತೆ ಬರ್ತಿದ್ದಾರೆ ಯರೇಹಂಚಿನಾಳದ ‘ಶಿವಮ್ಮ’
ಈ ವಾರ ಸಾಲು ಸಾಲು ಚಿತ್ರಗಳು ಚಿತ್ರಮಂದಿರ ಪ್ರವೇಶಿಸುತ್ತಿವೆ. ಆ ಪೈಕಿ ಡಾಲಿ ಧನಂಜಯ್ ಕೋಟಿ, ವಸಿಷ್ಠ ಸಿಂಹ ನಟನೆಯ ಲವ್‌ಲಿ ಚಿತ್ರ, ಅನಿರುದ್ಧ ಜತ್ಕರ್ ನಟನೆಯ ಚೆಫ್ ಚಿದಂಬರ ಸಿನಿಮಾ ಸೇರಿ ಇನ್ನೂ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ.

Friday Kannada Movies: ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಕೆಲ ವಾರಗಳಿಂದ ಸ್ಟಾರ್ ನಟರ ಸಿನಿಮಾಗಳಿಲ್ಲ ಎಂದು ಎಲ್ಲರೂ ಹೇಳಿದ್ದೇ ಬಂತು. ಇದೀಗ ಈ ವಾರ ಸಾಲು ಸಾಲು ಚಿತ್ರಗಳು ಚಿತ್ರಮಂದಿರ ಪ್ರವೇಶಿಸುತ್ತಿವೆ. ಆ ಪೈಕಿ ಡಾಲಿ ಧನಂಜಯ್ (Daali Dhananjay) ನಟನೆಯ ಕೋಟಿ (Kotee) ಸಿನಿಮಾ ಮತ್ತು ವಸಿಷ್ಠ ಸಿಂಹ (Vasishta simha) ನಟನೆಯ ಲವ್‌ಲಿ (Love Li) ಚಿತ್ರ, ಅನಿರುದ್ಧ ಜತ್ಕರ್ ನಟನೆಯ ಚೆಫ್ ಚಿದಂಬರ ಸಿನಿಮಾ ಸೇರಿ ಇನ್ನೂ ಹಲವು ಚಿತ್ರಗಳು ಬಿಡುಗಡೆ ಆಗುತ್ತಿವೆ. ಈ ಮೂಲಕ ಟಗರು ಸಿನಿಮಾದಲ್ಲಿ ಒಂದಾಗಿದ್ದ ಡಾಲಿ ಮತ್ತು ಚಿಟ್ಟೆ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ.
ಡಾಲಿ ಧನಂಜಯ್ ಕೋಟಿ ಕನಸು
ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ಜೂನ್ 14ರಂದು ತೆರೆಗೆ ಬರಲಿದೆ. ಪರಮ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಟ್ರೇಲರ್ ಮೂಲಕ ಕುತೂಹಲ ಮೂಡಿಸಿರುವ ಈ ಚಿತ್ರ ಮಧ್ಯಮ ವರ್ಗದ ಯುವಕನೊಬ್ಬ ಕೋಟಿ ರೂಪಾಯಿ ಗಳಿಸಬೇಕೆಂಬ ಕನಸಿನ ಸುತ್ತ ಈ ಕಥೆ ಸಾಗಲಿದೆ. ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ನಟಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಮಾಸ್ ಅವತಾರದಲ್ಲಿ ವಸಿಷ್ಠ ಲವ್ ಲೀ
ಅಭುವನಸ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ Love ಲಿ ಸಿನಿಮಾ ಸಹ ಈ ಶುಕ್ರವಾರ ತೆರೆಗೆ ಬರಲಿದೆ. ರವೀಂದ್ರ ಕುಮಾರ್ ನಿರ್ಮಿಸಿರುವ, ಚೇತನ್ ಕೇಶವ್ ನಿರ್ದೇಶನದ ಮೂಡಿ ಬಂದಿರುವ ಲವ್‌ಲಿ ಚಿತ್ರದಲ್ಲಿ ನಟ ವಸಿಷ್ಠ ಸಿಂಹ ನಾಯಕರಾಗಿ ನಟಿಸಿದ್ದಾರೆ. ಸ್ಟೆಫಿ ಪಟೇಲ್ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ, ನಟಿ ನಂದು, ಸಮೀಕ್ಷ, ಬೇಬಿ ವಂಶಿಕ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಿಷಬ್ ಶೆಟ್ಟಿಯ ಶಿವಮ್ಮ ಯರೇಹಂಚಿನಾಳ
ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಶಿವಮ್ಮ, ಈಗಾಗಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿ ವಿಶ್ವದ ಹದಿನೇಳಕ್ಕೂ ಅಧಿಕ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಹಲವು ಪ್ರಶಸ್ತಿಗಳನ್ನೂಪಡೆದಿದೆ. ಇದೀಗ ಈ ಸಿನಿಮಾ ಇದೇ ಶುಕ್ರವಾರ (ಜೂನ್ 14) ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರವನ್ನು ನಿರ್ದೇಶಕ ಜೈಶಂಕರ್ ಆರ್ಯರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶರಣಮ್ಮ ಚಟ್ಟಿ ಶಿವಮ್ಮನಾಗಿ ನಟಿಸಿದರೆ, ಇನ್ನುಳಿದಂತೆ ಚೆನ್ನಮ್ಮ ಅಬ್ಬಿಗೆರೆ, ಶಿವು ಅಬ್ಬಿಗೆರೆ ಹಾಗೂ ಶೃತಿ ಕೊಂಡೇನಹಳ್ಳಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ.
ಚೆಫ್ ಚಿದಂಬರನಾಗಿ ಅನಿರುದ್ಧ ಅದೃಷ್ಟ ಪರೀಕ್ಷೆ
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಜನಪ್ರಿಯರಾಗಿರುವ ನಟ ಅನಿರುದ್ದ್ ಜತ್ಕರ್ ನಾಯಕನಾಗಿ ನಟಿಸಿರುವ ಚೆಫ್ ಚಿದಂಬರ ಚಿತ್ರ ಬಿಡುಗಡೆಯ ಹೊಸ್ತಿಲಿಗೆ ಬಂದಿದೆ. ರೂಪ ಡಿ.ಎನ್ ನಿರ್ಮಾಣದ ಹಾಗೂ ಆನಂದರಾಜ್ ಎಂ ನಿರ್ದೇಶಿಸಿರುವ chef ಚಿದಂಬರ ಸಿನಿಮಾ ಕೇವಲ 29 ದಿನಗಳಲ್ಲಿ ಶೂಟಿಂಗ್ ಮುಗಿಸಿರುವುದು ವಿಶೇಷ. ಇನ್ನುಳಿದಂತೆ ಯಾವೋ ಇವೆಲ್ಲ ಎಂಬ ಚಿತ್ರವೂ ಶುಕ್ರವಾರ ತೆರೆಗೆ ಬರುತ್ತಿವೆ.
ತಮಿಳಿನಲ್ಲಿ ವಿಜಯ್ ಸೇತುಪತಿ ನಟನೆಯ ಮಹಾರಾಜ ಸಿನಿಮಾ ರಿಲೀಸ್ ಆಗಲಿದ್ದು, ತೆಲುಗಲ್ಲಿ ಹರೋಮ್ ಹರ, ಇಂದ್ರಾಣಿ ಎಪಿಕ್ ಧರಂ ವರ್ಸಸ್ ಕರಂ ಸೇರಿ ಇನ್ನೂ ಹಲವು ಚಿತ್ರಗಳು ಬಿಡುಗಡೆ ಆಗಲಿವೆ.
