Kotee Movie: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಟ್ರೆಂಡಿಂಗ್‌; ಸಾವಿರಾರು ರೀಲ್ಸ್‌ಗಳಲ್ಲಿ ಮಾತು ಸೋತು ಹಾಡು ವೈರಲ್‌
ಕನ್ನಡ ಸುದ್ದಿ  /  ಮನರಂಜನೆ  /  Kotee Movie: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಟ್ರೆಂಡಿಂಗ್‌; ಸಾವಿರಾರು ರೀಲ್ಸ್‌ಗಳಲ್ಲಿ ಮಾತು ಸೋತು ಹಾಡು ವೈರಲ್‌

Kotee Movie: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಟ್ರೆಂಡಿಂಗ್‌; ಸಾವಿರಾರು ರೀಲ್ಸ್‌ಗಳಲ್ಲಿ ಮಾತು ಸೋತು ಹಾಡು ವೈರಲ್‌

ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ವಾಸುಕಿ ವೈಭವ್‌ ಸಂಗೀತ ಸಂಯೋಜನೆಯ, ಅರ್ಮಾನ್‌ ಮಲ್ಲಿಕ್‌ ಹಾಡಿರುವ ಈ ಹಾಡನ್ನು ಬಳಸಿ ಸೋಷಿಯಲ್‌ ಮೀಡಿಯಾ ಬಳಕೆದಾರರು ರೀಲ್ಸ್‌ ಮಾಡುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ.

Kotee Movie: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಟ್ರೆಂಡಿಂಗ್‌
Kotee Movie: ಡಾಲಿ ಧನಂಜಯ್‌ ನಟನೆಯ ಕೋಟಿ ಸಿನಿಮಾದ ಹಾಡು ಟ್ರೆಂಡಿಂಗ್‌

ಬೆಂಗಳೂರು: ಮುಂದಿನ ತಿಂಗಳು ಕೋಟಿ ಎಂಬ ಸಿನಿಮಾ ರಿಲೀಸ್‌ ಆಗುತ್ತಿದ್ದು, ಡಾಲಿ ಧನಂಜಯ್‌ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಈಗಾಗಲೇ ಕೋಟಿ ಸಿನಿಮಾದ 'ಮಾತು ಸೋತು' ಹಾಡು ರೀಲ್ಸ್‌ಗಳಲ್ಲಿ ಟ್ರೆಂಡಿಂಗ್ ಆಗುತ್ತಿದೆ. ಈಗಾಗಲೇ ಸಾವಿರಾರು ರೀಲ್ಸ್ ಆಗಿದ್ದು, ಈ ರೀಲ್ಸ್‌ಗಳು ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿವೆ.‌ ಈ ಕುರಿತು ಚಿತ್ರತಂಡ ಖುಷಿಗೊಂಡಿದೆ.

ಇನ್ಸ್ಟಾಗ್ರಾಮ್‌ನಲ್ಲಿ ಕಳೆದ ಒಂದು ವಾರದಿಂದ 'ಟ್ರೆಂಡಿಂಗ್'ನಲ್ಲಿರುವ ಈ ಹಾಡನ್ನು ವಾಸುಕಿ ವೈಭವ್ ಸಂಯೋಜಿಸಿ, ಯೋಗರಾಜ್ ಭಟ್ ಬರೆದು, ಅರ್ಮಾನ್ ಮಲಿಕ್ ಹಾಡಿದ್ದಾರೆ‌.‌ ಈಗಾಗಲೇ ಈ ಹಾಡಿನ ಲಿರಿಕಲ್ ವಿಡಿಯೋ ಯೂಟ್ಯೂಬಿನಲ್ಲಿ ಹದಿನಾಲ್ಕು ಲಕ್ಷದಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯೂಟ್ಯೂಬ್ ಶಾರ್ಟ್ಸಲ್ಲೂ ಟ್ರೆಂಡಿಂಗ್ ಆಗುತ್ತಿದೆ.

ಈ ಹಾಡಿನ ಸಂಯೋಜಕರಾದ ವಾಸುಕಿ ವೈಭವ್ "ಮಾತು ಸೋತು ಟ್ರೆಂಡ್ ಆಗ್ತಿರೋದು ಖುಷಿ ನೀಡಿದೆ.‌ ಇದು ಇನ್ನೂ ಪಿಕ್ ಆಗೋ ಭರವಸೆ ಇದೆ. ಇಷ್ಟಪಟ್ಟು ಮಾಡಿದ ಹಾಡುಗಳು ಹೀಗೆ ಜನರನ್ನು ತಲುಪಿದಾಗ ಆಗೋ ಖುಷಿ ವಿಶೇಷವಾದದ್ದು" ಎಂದು ಹೇಳಿದ್ದಾರೆ.

"ನನ್ನ ಮೊದಲ ಸಿನಿಮಾದ ಮೊದಲ ಹಾಡು ಈ ಮಟ್ಟಿಗಿನ ಸದ್ದು ಮಾಡುತ್ತಿರುವುದ ನೋಡಿ ಖುಷಿ ಆಗಿದೆ. ದಿನಾಲೂ ಸಾವಿರಾರು ರೀಲ್ಸ್‌ಗಳು ಅಪ್ಲೋಡ್ ಆಗುತ್ತಿದ್ದು, ಟ್ರೆಂಡಿಂಗ್ ಹೀಗೆ ಮುಂದುವರಿಯುವ ಭರವಸೆ ಇದೆ" ಎಂದು ಕೋಟಿ ಸಿನಿಮಾದ ನಿರ್ದೇಶಕರಾದ ಪರಮ್ ಹೇಳಿದ್ದಾರೆ.

“ಕನ್ನಡದ ಜನತೆಗಾಗಿ ಯಾರೇ ಕಷ್ಟಪಟ್ಟರೂ ನಾಡಿನ ಜನತೆ ಅವರ ಕೆಲಸವನ್ನು ಗೆಲ್ಲಿಸುತ್ತಾರೆ” ಎಂದು ಈ ಹಾಡಿನ ಸಾಹಿತ್ಯ ರಚಿಸಿರುವ ಯೋಗರಾಜ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಕೋಟಿ ಸಿನಿಮಾದ ತಾರಾಗಣ

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ನಟಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್‌ ಶೆಟ್ಟಿ ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಈ ಸಿನಿಮಾದ ಕ್ಯಾಮೆರಾಮನ್‌.

ಜೂನ್‌ 14ರಂದು ಕೋಟಿ ಸಿನಿಮಾ ಬಿಡುಗಡೆ

ಈ ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್‌ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Whats_app_banner