Friday Released Movies: ಸಿನಿ ಶುಕ್ರವಾರಕ್ಕೆ ಒಂದಲ್ಲ ಎರಡಲ್ಲ ಐದು ಸಿನಿಮಾಗಳು; ಆಚಾರ್‌ ಕುಟುಂಬದ ಜತೆಗೆ ಕೌಸಲ್ಯಳ ಮಗ ರಾಮನ ಆಗಮನ
ಕನ್ನಡ ಸುದ್ದಿ  /  ಮನರಂಜನೆ  /  Friday Released Movies: ಸಿನಿ ಶುಕ್ರವಾರಕ್ಕೆ ಒಂದಲ್ಲ ಎರಡಲ್ಲ ಐದು ಸಿನಿಮಾಗಳು; ಆಚಾರ್‌ ಕುಟುಂಬದ ಜತೆಗೆ ಕೌಸಲ್ಯಳ ಮಗ ರಾಮನ ಆಗಮನ

Friday Released Movies: ಸಿನಿ ಶುಕ್ರವಾರಕ್ಕೆ ಒಂದಲ್ಲ ಎರಡಲ್ಲ ಐದು ಸಿನಿಮಾಗಳು; ಆಚಾರ್‌ ಕುಟುಂಬದ ಜತೆಗೆ ಕೌಸಲ್ಯಳ ಮಗ ರಾಮನ ಆಗಮನ

ಶುಕ್ರವಾರ ಬಂದೇ ಬಿಡ್ತು. ಈ ಸಿನಿವಾರದಂದು ಒಂದಲ್ಲ ಎರಡಲ್ಲ ಒಟ್ಟು ಐದು ಸಿನಿಮಾಗಳು ತೆರೆಕಂಡಿವೆ. ಹಳಬರ ಜತೆಗೆ ಹೊಸಬರ ಆಗಮನವೂ ಆಗಿದೆ.

ಸಿನಿ ಶುಕ್ರವಾರಕ್ಕೆ ಒಂದಲ್ಲ ಎರಡಲ್ಲ ಐದು ಸಿನಿಮಾಗಳು; ಆಚಾರ್‌ ಕುಟುಂಬದ ಜತೆಗೆ ಕೌಸಲ್ಯಳ ಮಗ ರಾಮನ ಆಗಮನ
ಸಿನಿ ಶುಕ್ರವಾರಕ್ಕೆ ಒಂದಲ್ಲ ಎರಡಲ್ಲ ಐದು ಸಿನಿಮಾಗಳು; ಆಚಾರ್‌ ಕುಟುಂಬದ ಜತೆಗೆ ಕೌಸಲ್ಯಳ ಮಗ ರಾಮನ ಆಗಮನ

Friday Released Movies: ಕಳೆದ ವಾರ ಬಿಡುಗಡೆ ಆಗಿದ್ದ ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ತನ್ನ ಗೆಲುವಿನ ಹಾವಳಿಯನ್ನು ವಿದೇಶದವರೆಗೂ ಕೊಂಡೊಯ್ದಿದೆ. ವಿದೇಶಿ ನೆಲದಲ್ಲೂ ಈ ಸಿನಿಮಾ ಪ್ರದರ್ಶನ ಮುಂದುವರಿಸಲಿದೆ. ಕರ್ನಾಟಕದಲ್ಲೂ ಚಿತ್ರಕ್ಕೆ ಮಗದಷ್ಟು ಚಿತ್ರಮಂದಿರಗಳು ಸಿಕ್ಕಿವೆ. ಹೀಗಿರುವಾಗಲೇ ಒಂದು ವಾರ ಕಳೆದುಹೋಗಿದೆ. ಮತ್ತೊಂದು ಸಿನಿ ಶುಕ್ರವಾರ (ಜುಲೈ 28) ಬಂದಿದೆ. ಈ ವಾರವೂ ಹಲವು ಸಿನಿಮಾಗಳು ತೆರೆಕಂಡಿವೆ ಆ ಚಿತ್ರಗಳು ಯಾವವು? ಅವುಗಳ ಕಿರು ಮಾಹಿತಿ ಇಲ್ಲಿದೆ.

ಆಚಾರ್ & ಕೋ

ಪುನೀತ್‌ ರಾಜ್‌ಕುಮಾರ್‌ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಆಚಾರ್‌ ಅಂಡ್‌ ಕೋ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಸಿಂಧು ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಚಿತ್ರ ಕೇವಲ ಶೀರ್ಷಿಕೆಯಲ್ಲಿ ಮಾತ್ರವಲ್ಲದೆ, ಮಹಿಳೆಯರೇ ಒಟ್ಟಾಗಿ ಸೇರಿ ಈ ಸಿನಿಮಾ ತೆರೆಗೆ ತಂದಿದ್ದಾರೆ. ​​1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ ಇದಾಗಿದೆ. ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ? ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನು ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಚಿತ್ರ.

ಕೌಸಲ್ಯ ಸುಪ್ರಜಾ ರಾಮ

ಡಾರ್ಲಿಂಗ್‌ ಕೃಷ್ಣ ನಾಯಕನಾಗಿ ನಟಿಸಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಈಗಾಗಲೇ ನಿರ್ದೇಶಕನಾಗಿ ಹತ್ತು ಹಲವು ಸಿನಿಮಾಗಳನ್ನು ನೀಡಿರುವ ಶಶಾಂಕ್‌ ಈ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೇಲರ್‌ ಮೂಲಕವೇ ಕೊಂಚ ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ಕೃಷ್ಣಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ. ಇನ್ನುಳಿದಂತೆ ನಟಿ ಮಿಲನಾ ನಾಗರಾಜ್‌ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಕೌರವ ಪ್ರೊಡಕ್ಷನ್ಸ್‌ ಮತ್ತು ಶಶಾಂಕ್‌ ಸಿನಿಮಾಸ್‌ ಜಂಟಿಯಾಗಿ ಕೌಸಲ್ಯ ಸುಪ್ರಜಾ ರಾಮನಿಗೆ ಬಂಡವಾಳ ಹೂಡಿದ್ದಾರೆ.

ಡೈಮಂಡ್‌ ಕ್ರಾಸ್‌

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನೇ ಆಧರಿಸಿ ದಾವಣಗೆರೆಯ ಯುವ ಉತ್ಸಾಹಿ ತಂಡವೊಂದು ಡೈಮಂಡ್‌ ಕ್ರಾಸ್‌ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ರಾಜ್ಯಾದ್ಯಂತ ಇಂದು (ಜು. 28) ತೆರೆಕಂಡಿದೆ. ಅಂದಹಾಗೆ ಕಳೆದ ಐದು ವರ್ಷಗಳ ಹಿಂದೆಯೇ ಈ ಸಿನಿಮಾ ನಿರ್ಮಾಣವಾಗಿತ್ತು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಬಿಡುಗಡೆಯ ಸಮಸ್ಯೆ ಎದುರಿಸಿತ್ತು. ಇದೀಗ ಎಲ್ಲವನ್ನು ಮೆಟ್ಟಿನಿಂತು ಸಿನಿಮಾ ತೆರೆಗೆ ಬಂದಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಅಣ್ಣತಮ್ಮಂದಿರೇ ಹೀರೋಗಳಾಗಿ ನಟಿಸಿದ್ದಾರೆ.

ನವ ಇತಿಹಾಸ

ಹೆಣ್ಣಿನ ಭ್ರೂಣ ಹತ್ಯೆಗೆ ಸಂಬಂಧಿಸಿದ ನವ ಇತಿಹಾಸ ಸಿನಿಮಾ ಸಹ ಇಂದು ತೆರೆಕಂಡಿದೆ. ಶ್ರೀರಜನಿ ಮತ್ತು ಸಮರ್ಥ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಬಹುತೇಕರು ಹೊಸಬರೇ. ಹೆಣ್ಣು ಭ್ರೂಣ ಹತ್ಯೆ ನಿಲ್ಲಿಸಿ ಎಂಬ ಸಾಮಾಜಿಕ ಕಳಕಳಿಯ ಸಿನಿಮಾ ಇದಾಗಿದ್ದು, ನವ ಇತಿಹಾಸ ಸಿನಿಮಾ ಮೂಲಕ ಸಂದೇಶವೊಂದನ್ನು ಹೇಳಲು ಮುಂದೆ ಬಂದಿದೆ.

ಆರ

ಹೊಸಬರ ಹೊಸ ಪ್ರಯತ್ನವೊಂದು ಈ ವಾರ ತೆರೆಗೆ ಬಂದಿದೆ. ಆ ಚಿತ್ರವೇ ಆರ. ಅಶ್ವಿನ್‌ ವಿಜಯ್‌ಮೂರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ದೈವ ಶಕ್ತಿ ಮತ್ತು ದುಷ್ಟ ಶಕ್ತಿಯ ಕಥಾಹಂದರವನ್ನು ಆಯ್ದುಕೊಂಡು ಸಸ್ಪೆನ್ಸ್‌ ಥ್ರಿಲ್ಲರ್‌ ಶೈಲಿಯಲ್ಲಿ ಈ ಸಿನಿಮಾ ಸಿದ್ಧವಾಗಿದೆ. ತಾರಾಬಳಗದಲ್ಲಿ ಬಹುತೇಕರು ಹೊಸಬರೇ ನಟಿಸಿದ್ದು, ರೋಹಿತ್‌ ಮತ್ತು ದೀಪಿಕಾ ಆರಾಧ್ಯ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ರೋಹಿತ್‌ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮತ್ತಷ್ಟು ಮನರಂಜನೆ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner