ಕೃಷ್ಣಂ ಪ್ರಣಯ ಸಖಿ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಪಾಲಿಗೆ ಮತ್ತೊಂದು ಮುಂಗಾರು ಮಳೆಯಾಗಬಹುದೇ? ಸಿನಿಮಾದ ಕಥೆ ಏನಿರಬಹುದು
Krishnam Pranaya Sakhi: ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಕಥೆಯೇನು? ಕಥೆಯ ಕುರಿತು ಎಲ್ಲಾದರೂ ಸುಳಿವು ದೊರಕಿರುವುದೇ? ಹುಡುಕೋಣ ಬನ್ನಿ.
ಬೆಂಗಳೂರು: ಈ ಸ್ವಾತಂತ್ರ್ಯ ದಿನಾಚರಣೆ ಸಮಯದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಕಾತರ ಹೆಚ್ಚಿಸಿದ ಸಿನಿಮಾ ಕೃಷ್ಣಂ ಪ್ರಣಯ ಸಖಿ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳ ಒಂದೊಂದು ಹಾಡುಗಳು ಅದ್ಭುತ, ಪರಮಾದ್ಭುತ. ಹಾಡುಗಳು ಗೆದ್ದಾಗಿದೆ. ಆದರೆ, ಕೃಷ್ಣಂ ಪ್ರಣಯ ಸಖಿ ಸಿನಿಮಾದ ಗೆಲುವು ಇರುವುದು ಆ ಸಿನಿಮಾದ ಕಥೆಯಲ್ಲಿ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಒಳ್ಳೆಯ ಕಥೆ ಇರಬಹುದೇ? ಅಥವಾ ಎಂಟು ನಟಿಯರ ಜತೆಗಿನ ಪ್ರೇಮ ಪ್ರಣಯದ ಸಾಮಾನ್ಯ ಕಥೆಗೆ ಈ ಸಿನಿಮಾ ಸೀಮಿತವಾಗಬಹುದೇ? ಎಲ್ಲಾದರೂ ಕೃಷ್ಣಂ ಪ್ರಣಯ ಸಖಿಯಲ್ಲಿ ಕಾಡುವಂತಹ ಗಟ್ಟಿ ಕಥೆಯಿದ್ದರೆ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುವುದು ಪಕ್ಕಾ.
ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆಯೇನು?
ಈಗಾಗಲೇ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಹಲವು ಹಾಡುಗಳು ರಿಲೀಸ್ ಆಗಿವೆ. ಮೊದಲಿಗೆ ಚಂದನ್ ಶೆಟ್ಟಿ ಧ್ವನಿಯ "ಮೈ ಮ್ಯಾರೇಜ್ ಈಸ್ ಫಿಕ್ಸ್‌ಡ್" ಎಂದು ಮದುವೆಯ ಹಾಡನ್ನು ರಿಲೀಸ್ ಮಾಡಲಾಗಿತ್ತು. ಈ ರಾಪ್ ಹಾಡು ಸಾಕಷ್ಟು ಕ್ರೇಜ್ ಹುಟ್ಟುಹಾಕಿತ್ತು. ಕೃಷ್ಣನಿಗೆ ಎಂಟು ಜನರು ಸಖಿಯರು. ಹಾಗಾದರೆ, ಕೃಷ್ಣನ ಮದುವೆ ಯಾರ ಜತೆ ಫಿಕ್ಸ್ ಆಗಿರುವುದು? ಈ ಹಾಡಿನ ಒಳಾರ್ಥವೇನು? ಈ ಹಾಡಿನಲ್ಲಿ ಎಂಟು ಸಖಿಯರು ಇದ್ರು. ಕೃಷ್ಣನ ನಿಜವಾದ ಲವ್ ಇರೋದು ಯಾರ ಮೇಲೆ?. ಮೈ ಮ್ಯಾರೇಜ್ ಫಿಕ್ಸ್ಡ್‌ನಲ್ಲಿ ಈ ಸಿನಿಮಾದ ಕಥೆಯ ಕುರಿತು ಯಾವುದೇ ಸುಳಿವು ದೊರಕಿರಲಿಲ್ಲ.
ಇದಕ್ಕೂ ಮುನ್ನ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದ್ದ ದ್ವಾಪರ ದಾಟಲು ಹಾಡು ಕೂಡ ಒಂದು ಅದ್ಭುತ ಪ್ರೇಮಗೀತೆ. ಆದರೆ, ಈ ಹಾಡಲ್ಲೂ ಸಿನಿಮಾದ ಕಥೆಯ ಕುರಿತು ಯಾವುದೇ ಸುಳಿವು ದೊರಕಿರಲಿಲ್ಲ. ಈ ಹಾಡು ಮಾಳವಿಕ ನಾಯರ್ ಜತೆಗಿನ ರೋಮಾನ್ಸ್‌ಗೆ ಸೀಮಿತವಾಗಿತ್ತು. ಇತ್ತೀಚೆಗೆ ಬಿಡುಗಡೆಯಾದ "ಕಾಡದೆಯೇ ಹೇಗಿರಲಿ ಹೃದಯವು ಕಳೆದಿದೆ ನಿನಗಾಗಿ ಜೀವದಲ್ಲಿ ಏನೇನೋ... ಹಸಿಬಿಸಿ ಕನಸುಗಳಿವೆ ನವಿರಾಗಿ" ಎಂಬ ಹಾಡು ಕೂಡ ಶರಣ್ಯ ಜತೆಗಿನ ರೋಮಾನ್ಸ್‌ಗೆ ಸೀಮಿತವಾಗಿತ್ತು.
ನಾಲ್ಕು ದಿನದ ಹಿಂದೆ ಬಿಡುಗಡೆಯಾದ ನಿನ್ನ ಹೆಗಲು ಹಾಡಿನಲ್ಲೂ ಪ್ರೇಮಗೀತೆ ಇತ್ತು. ಆದರೆ ಈ ಹಾಡು ಕೂಡ ಸಿನಿಮಾದ ಕಥೆಯ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಚಿನ್ನಮ್ಮ ಚಿನ್ನಮ್ಮ ಹಾಡಿನಲ್ಲೂ ಮಾಳವಿಕ ನಾಯರ್ ಜತೆಗಿನ ಪ್ರೇಮದ ಹಾಡಿತ್ತು. ಫೈನಲ್ ಆಗಿ ಕೃಷ್ಣನ ವಿವಾಹವಾಗುವುದು ಮಾಳವಿಕ ನಾಯರ್ ಪಾತ್ರವೇ? ಅಥವಾ ಮುಂಗಾರು ಮಳೆಯಂತೆ ಈ ಸಿನಿಮಾದಲ್ಲೂ ದುರಂತ ಅಂತ್ಯವಾಗುವುದೇ? ಪ್ರೇಮಿಯನ್ನು ಬಿಟ್ಟುಕೊಟ್ಟು ಗಣೇಶ್ ತ್ಯಾಗಮಯಿಯಾಗುವನೇ?
ಬಿಡುಗಡೆಯಾದ ಹಾಡುಗಳೆಲ್ಲವೂ ಅದ್ಭುತ. ಆದರೆ, ಎಲ್ಲೂ ಸಿನಿಮಾದ ಕಥೆಯ ಸುಳಿವಿಲ್ಲ. ಹೋಗ್ಲಿ, ಟ್ರೇಲರ್ ಬಿಡುಗಡೆ ಮಾಡಿದ್ರೆ ಸಿನಿಮಾದ ಕಥೆಯೇನು ಎಂದು ತಿಳಿಯುತ್ತಿತ್ತು. ಆದರೆ, ಟ್ರೇಲರ್ ಬಿಡುಗಡೆ ಮಾಡುವುದೇ ಇಲ್ಲ, ಪ್ರೇಕ್ಷಕರಿಗೆ ನಮ್ಮ ಹಾಡುಗಳೇ ಆಮಂತ್ರಣ ಎಂದು ಚಿತ್ರತಂಡ ಈಗಾಗಲೇ ಘೋಷಿಸಿಯಾಗಿವೆ. ಗಣೇಶ್ ಇಲ್ಲಿಯವರೆಗೆ ನೀಡಿದ ಸಂದರ್ಶನಗಳಲ್ಲೂ ಕೃಷ್ಣಂ ಪ್ರಣಯ ಸಖಿಯ ಕಥೆಯ ಕುರಿತು ಯಾವುದೇ ಸುಳಿವು ಇಲ್ಲ. ಇದು ಲವ್ ಸ್ಟೋರಿ ಅಂತ ಮಾತ್ರ ಹೇಳಿದ್ರು. ಈ ಹಾಡುಗಳನ್ನೆಲ್ಲ ಕೇಳಿದ್ರೆ ಅದು ಲವ್ ಸ್ಟೋರಿ ಅಲ್ಲದೆ ಹಾರರ್ ಸ್ಟೋರಿ ಅನ್ನಲು ಸಾಧ್ಯವಿಲ್ಲ. ಸಿನಿಮಾದ ಕಥೆಯ ಸುಳಿವು ಇಲ್ಲಿಯವರೆಗೆ ಬಿಟ್ಟುಕೊಡದೆ ಇರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಅದು ಚಿತ್ರತಂಡದ ಪ್ರಮುಖ ಸಾಧನೆಯೂ ಹೌದು.
ಹಾಡಿನ ಹಿನ್ನಲೆಯಲ್ಲಿ ಸಿನಿಮಾದ ಕಥೆ ಹುಡುಕುವುದು ಕಷ್ಟ. ನಿರ್ದೇಶಕರ ಹಿನ್ನಲೆಯಲ್ಲಿ ಹುಡುಕುವುದಾದರೆ ಖಂಡಿತಾ ಇದು ದಂಡುಪಾಳ್ಯ ರೀತಿಯಂತಹ ಸಿನಿಮಾವಲ್ಲ. ದಂಡುಪಾಳ್ಯ ನಿರ್ದೇಶಕರೇ ಈ ಸಿನಿಮಾ ಮಾಡುತ್ತಿದ್ದಾರೆ. ಶ್ರೀನಿವಾಸ್ ರಾಜು ನಿರ್ದೇಶನದ ನನ್ನವನು, ಕೋಟಿ, ಶಿವಮ್, ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ, ತಗ್ಗದ್ದೆಲೆ (ತೆಲುಗು), ಎರಡು ದಂಡಪಾಳ್ಯ ಸಿನಿಮಾಗಳ ಹಿನ್ನೆಲೆ ನೋಡಿದ್ರೆ ಕೃಷ್ಣಂ ಪ್ರಣಯ ಸಖಿಯ ಕಥೆಯೇನು ಎಂಬ ಸುಳಿವು ದೊರಕದು.
ಹಾಗಾದರೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆಯೇನು?
ಸದ್ಯ, ವಿಕಿಪಿಡಿಯಾ, ಐಎಂಡಿಬಿ ಮುಂತಾದ ವೆಬ್‌ಸೈಟ್‌ಗಳಲ್ಲಿ ನೀಡಿರುವ ಸಾರಾಂಶ ಆಧಾರದಲ್ಲಿ ಹೇಳುವುದಾದರೆ "ಅಗರ್ಭ ಶ್ರೀಮಂತನ ಮಗನೊಬ್ಬ ವಿನಮ್ರ ಹಿನ್ನಲೆಯ ಹುಡುಗಿಯ ಮನಸ್ಸು ಗೆಲ್ಲಲು ಬಯಸುತ್ತಾನೆ. ಆದರೆ, ಆಕೆಯ ಹೆತ್ತವರಿಂದ ಒಪ್ಪಿಗೆ ಪಡೆಯುವಲ್ಲಿ ಸಾಕಷ್ಟು ಸವಾಲು ಎದುರಾಗುತ್ತದೆ" ಈ ಎರಡು ಲೈನ್ ನೋಡಿಕೊಂಡ್ರೆ ಸ್ಟೋರಿ ಅರ್ಥವಾಗದು. ಬಹುತೇಕ ಸಿನಿಮಾಗಳ ಕಥೆಗಳು ಹೀಗೆಯೇ ಇರುತ್ತವೆ. ಒಂದೊಳ್ಳೆಯ ಕಥೆ ಇದ್ದರೆ ಖಂಡಿತವಾಗಿಯೂ ಈ ಸಿನಿಮಾ ಗಣೇಶ್ ಪಾಲಿಗೆ ಮತ್ತೊಂದು ಮುಂಗಾರು ಮಳೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಹಾಗಾದರೆ, ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆಯೇನು ಎಂಬ ಪ್ರಶ್ನೆಗೆ ಇದೇ ಗುರುವಾರ (ಬುಧವಾರವೇ ಪ್ರೀಮಿಯರ್ ಶೋ ಆರಂಭವಾಗಲಿದೆ) ಸ್ವಾತಂತ್ರ್ಯ ದಿನಾಚರಣೆಯಂದು ಉತ್ತರ ದೊರಕಲಿದೆ. ಒಂದೊಳ್ಳೆಯ ಕಥೆ ಇದ್ರೆ ಖಂಡಿತವಾಗಿಯೂ ಕೃಷ್ಣಂ ಪ್ರಣಯ ಸಖಿ ಗಣೇಶ್ ಪಾಲಿಗೆ ಮತ್ತೊಂದು ಮುಂಗಾರು ಮಳೆಯಾಗಬಹುದು. ಕನ್ನಡ ಚಿತ್ರರಂಗದ ಪಾಲಿಗೆ ಚಿನ್ನದ ಗಣಿಯಾಗಬಹುದು.
ಒಟ್ಟಾರೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕಥೆಯೇನು ಎಂಬ ಪ್ರಶ್ನೆಗೆ ನಿಮಗೆ ಉತ್ತರ ದೊರಕದೆ ಇರುವುದಕ್ಕೆ ಬೇಸರವಾಗಿರಬಹುದು. ಬೇಸರಿಸಬೇಡಿ. ನಿನ್ನ ಹೆಗಲು ನನಗಾಗೇ ಇರಲು ಎಂಬ ಹಾಡಿನ ಲಿರಿಕ್ಸ್ ಇಲ್ಲಿದೆ. ಇದು ಖುಷಿ ನೀಡಬಹುದು.
ನಿನ್ನ ಹೆಗಲು ನನಗಾಗೇ ಇರಲು
ಬೇರೆ ಸುಖವ ಯಾಕೆ ಕೇಳಲಿ
ನಿನ್ನ ನೆರಳು ನನಗಾಗೇ ಇರಲು
ಬೇರೆ ವರವ ಯಾಕೆ ಬೇಡಲಿ
ನನ್ನಾ ಚರ್ರಿತೆ ಬರಿ ನಿನ್ನಾ ಕುರಿತೆ
ಇಂದು ಎಂದು ಬರದಾಗಿದೆ
ನಿನ್ನಿಂದಲೆ ನಾ ಸಂಪೂರ್ಣವು
ನಿನೇಂದರೆ ಮುಗಿಯದ ಸಂತೋಷವು
ನಿನ್ನ ಹೆಗಲು ನನಗಾಗೇ ಇರಲು
ಬೇರೆ ಸುಖವ ಯಾಕೆ ಕೇಳಲಿ
ಪದೆ ಪದೆ ಗುನುಗುವೆ ನಾನು
ಪ್ರತಿ ಪದ ಪದಗಳು ನೀನು
ನೀ ಎಂಥಹ ಮಧುರ ಮೋಹಕ
ವಿಚಾರಣೆ ಉಳಿದಿದೆ ಏನು
ವಿಷೇಶವು ಎಲ್ಲಕೂ ನೀನು
ನಿನ್ನ ತೋಳಿನ ಸೆರೆಯೆ ರೋಚಕ
ಮುದ್ದಾದ ಈ ಮೌನವು ಮಾತಡಿದೆ ಮೆಲ್ಲಗೆ
ಒಂಚೂರೆ ನೀ ಸೋಕಲು ನೂರಾರು ಆಲಾಪನೆ
ನನ್ನಾ ಚರ್ರಿತೆ ಬರಿ ನಿನ್ನಾ ಕುರಿತೆ
ಎಂದು ಇಂದು ಬರದಾಗಿದೆ
ನನ್ನಾ ಚರ್ರಿತೆ ಬರಿ ನಿನ್ನಾ ಕುರಿತೆ
ಇಂದು ಎಂದು ಬರದಾಗಿದೆ