ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಖುಷಿಗೊಂಡ ದುಬೈ ಕನ್ನಡಿಗರು, ಅಬುದಾಬಿಯಲ್ಲೂ ಪ್ರದರ್ಶನಗೊಂಡ ಗಣೇಶ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಖುಷಿಗೊಂಡ ದುಬೈ ಕನ್ನಡಿಗರು, ಅಬುದಾಬಿಯಲ್ಲೂ ಪ್ರದರ್ಶನಗೊಂಡ ಗಣೇಶ್‌ ಸಿನಿಮಾ

ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಖುಷಿಗೊಂಡ ದುಬೈ ಕನ್ನಡಿಗರು, ಅಬುದಾಬಿಯಲ್ಲೂ ಪ್ರದರ್ಶನಗೊಂಡ ಗಣೇಶ್‌ ಸಿನಿಮಾ

Krishnam Pranaya Sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ವಿಶೇಷ ಪ್ರದರ್ಶನ ಅಬುದಾಭಿ ಮತ್ತು ದುಬೈನಲ್ಲಿ ನಡೆದಿದೆ. ದುಬೈ ಕನ್ನಡಿಗರು ಚಿತ್ರತಂಡದ ಜತೆ ಈ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ.

ದುಬೈ  ಮತ್ತು ಅಬುದಾಬಿಯಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ  ಪ್ರದರ್ಶನ
ದುಬೈ ಮತ್ತು ಅಬುದಾಬಿಯಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಪ್ರದರ್ಶನ

ಬೆಂಗಳೂರು: ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ "ಕೃಷ್ಣಂ ಪ್ರಣಯ ಸಖಿ" ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಈ ಯಶಸ್ವಿ ಚಿತ್ರ ಅಬುದಾಬಿ ಹಾಗೂ ದುಬೈನಲ್ಲೂ ಪ್ರದರ್ಶನಗೊಂಡಿದೆ. ಅಲ್ಲಿನ ಕನ್ನಡಿಗರು ಅಪ್ಪಟ ಮನೋರಂಜನೆಯ ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಇತ್ತೀಚೆಗೆ ದುಬೈನಲ್ಲಿ ರಶ್ಮಿ ವೆಂಕಟೇಶ್ , ಸೆಂದಿಲ್ ಮತ್ತು ತಂಡದವರು "ಕೃಷ್ಣಂ ಪ್ರಣಯ ಸಖಿ" ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿ ಮಾಳವಿಕ ನಾಯರ್, ನಟ ರಂಗಾಯಣ ರಘು, ನಿರ್ದೇಶಕ ಶ್ರೀನಿವಾಸರಾಜು, ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಸೇರಿದಂತೆ ಚಿತ್ರತಂಡದ ಸದಸ್ಯರು ಈ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿಯ ದ್ವಾಪರ ದಾಟುತ ಹಾಡು ಸೇರಿದಂತೆ ವಿವಿಧ ಹಾಡುಗಳಿಗೆ ದುಬೈ ಕನ್ನಡಿಗರು ಹೆಜ್ಜೆ ಹಾಕಿದ್ದಾರೆ. ಪರವೂರಿನಲ್ಲಿ ಕನ್ನಡ ಸಿನಿಮಾ ನೋಡಿದ ಸಂಭ್ರಮ ಎಲ್ಲರಲ್ಲೂ ಮನೆಮಾಡಿತ್ತು. ಸುಮಾರು 750ಕ್ಕೂ ಅಧಿಕ ಕನ್ನಡಿಗರು ಈ ಚಿತ್ರವನ್ನು ನೋಡಿ ಸಂಭ್ರಮಿಸಿದರು. ನಮ್ಮ ಚಿತ್ರಕ್ಕೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಮನ ತುಂಬಿ ಬಂದಿದೆ ಎಂದು ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಈ ಸಂದರ್ಭದಲ್ಲಿ ತಿಳಿಸಿದ್ದರು.

ದ್ವಾಪರ ದಾಟುತ ಎಷ್ಟು ವೀಕ್ಷಣೆಯಾಯ್ತು?

ಯೂಟ್ಯೂಬ್‌ನಲ್ಲಿ ದ್ವಾಪರ ದಾಟುತ ಹಾಡು ಬಿಡುಗಡೆಯಾದ ಬಳಿಕ ಟ್ರೆಂಡಿಂಗ್‌ನಲ್ಲಿದೆ. ಒಂದು ತಿಂಗಳ ಬಳಿಕ ಯೂಟ್ಯೂಬ್‌ನಲ್ಲಿ 34,547,074 ವೀಕ್ಷಣೆ ಪಡೆದಿದೆ. ಅಂದರೆ, 34 ಕೋಟಿ ಬಾರಿ ಈ ಹಾಡನ್ನು ಜನರು ವೀಕ್ಷಿಸಿದ್ದಾರೆ. "ಬಹಳ ದಿನಗಳ ನಂತರ ಒಂದೊಳ್ಳೆ ಹಾಡು ಕನ್ನಡಕ್ಕೆ ಸಿಕ್ಕಿದೆ.. 100 times ಕೇಳಿರಬಹುದು ಅನ್ಸುತ್ತೆ ಗುರು" "ಕವಿ ನಾಗೇಂದ್ರ ಪ್ರಸಾದ್ ಅದ್ಬುತ ಪದಪುಂಜ..... ಗಣೇಶ್ ಡಾನ್ಸ್ ಸೂಪರ್.... ಮ್ಯೂಸಿಕ್ ಅದ್ಭುತ...." ಎಂದೆಲ್ಲ ಅಭಿಮಾನಿಗಳ ಕಾಮೆಂಟ್ಸ್‌ ಮುಂದುವರೆದಿದೆ.

ಕೃಷ್ಣಂ ಪ್ರಣಯ ಸಖಿ ಕಲೆಕ್ಷನ್‌ ಎಷ್ಟು?

ಸಕ್‌ನಿಲ್ಕ್‌.ಕಾಂ ಪ್ರಕಾರ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿಯು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 17.3 ಕೋಟಿ ರೂಪಾಯಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ. ಇದು ಇತ್ತೀಚೆಗೆ ಕನ್ನಡದ ಸಿನಿಮಾವೊಂದು ಪಡೆದ ದೊಡ್ಡ ಮಟ್ಟದ ಗೆಲುವು ಆಗಿದೆ. ಬಾಲಿವುಡ್‌ನ ಅಕ್ಷಯ್‌ ಕುಮಾರ್‌ ಸಿನಿಮಾವು ಇತ್ತೀಚೆಗೆ ಇಷ್ಟೊಂದು ಗಳಿಕೆ ಮಾಡಿರಲಿಲ್ಲ. ಆದರೆ, ಗಣೇಶ್‌ ಸಿನಿಮಾ ಉತ್ತಮವಾಗಿ ಗಳಿಕೆ ಮಾಡಿದೆ. ಈ ಸಿನಿಮಾದ ಹಾಡುಗಳು ಭರ್ಜರಿ ಹಿಟ್‌ ಆಗಿದ್ದರೂ ಸಿನಿಮಾದ ಕಥೆ ಹೆಚ್ಚು ಜನರಿಗೆ ಇಷ್ಟವಾಗಿರಲಿಲ್ಲ. ಹಾಡಿನಂತೆ ಸಿನಿಮಾದ ಕಥೆ, ನಿರೂಪಣೆ ಇತ್ಯಾದಿಗಳೂ ಸೂಪರ್‌ ಆಗಿದ್ದರೆ ಗಳಿಕೆ ದುಪ್ಪಟ್ಟು ಆಗಿರುತ್ತಿತ್ತು ಎಂದು ಸಿನಿಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.