ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ: ಅನ್ನದಾನ, ರಕ್ತದಾನ, ನೇತ್ರದಾನ , ಕಟೌಟ್, ಜಾಕಿ ಕ್ರೇಜ್, ಅಪ್ಪು ಬರ್ತ್‌ಡೇ ಸಂಭ್ರಮದಲ್ಲಿ ಫ್ಯಾನ್ಸ್
Puneeth Rajkumar Birthday: ಮಾರ್ಚ್ 17 ಕನ್ನಡದ ಜನಪ್ರಿಯ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಅಪ್ಪು ಫ್ಯಾನ್ಸ್ ನಾಡಿನೆಲ್ಲೆಡೆ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಬೈಕ್ ರಾಲಿ ಸೇರಿದಂತೆ ವಿವಿಧ ಬಗೆಯಲ್ಲಿ ಪುನೀತ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಬೆಂಗಳೂರು: ಮಾರ್ಚ್ 17 ದಿವಂಗತ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ. ಅಗಲಿದ ಅಪ್ಪುವಿನ ನೆನಪಿನಲ್ಲಿ ಅಭಿಮಾನಿಗಳು ಹಲವು ಕಾರ್ಯಕ್ರಮಗಳನ್ನು ರಾಜ್ಯದೆಲ್ಲೆಡೆ ಹಮ್ಮಿಕೊಂಡಿದ್ದಾರೆ. ಇದೇ ಸಮಯದಲ್ಲಿ ಜಾಕಿ ಸಿನಿಮಾ ಮರು ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್‌ರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ರೀತಿಯಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಅಭಿಮಾನಿಗಳು ನೆನಪಿಸಿಕೊಳ್ಳಲಿದ್ದಾರೆ. ಭಾನುವಾರ ಅಪ್ಪು ನೆನಪಿನಲ್ಲಿ ಫ್ಯಾನ್ಸ್ ಏನೆಲ್ಲ ಮಾಡಲಿದ್ದಾರೆ? ಹುಟ್ಟುಹಬ್ಬವನ್ನು ಯಾವ ರೀತಿ ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ನೋಡೋಣ.
ಮುಗಿಲುಮುಟ್ಟಿದ ಜಾಕಿ ಸಿನಿಮಾ ಕ್ರೇಜ್
ಅಪ್ಪು ಹುಟ್ಟುಹಬ್ಬದ ಹಿನ್ನಲೆಯಲ್ಲಿ ದಿವಂಗತ ಪುನೀತ್ ರಾಜ್‌ಕುಮಾರ್ ನಟನೆಯ ಜಾಕಿ ಸಿನಿಮಾ ಮರುಬಿಡುಗಡೆಗೊಂಡಿದೆ. ಚಿತ್ರ ಮರುಬಿಡುಗಡೆಯಾದ ಬಳಿಕ ಥಿಯೇಟರ್‌ನಲ್ಲಿ ಜನಜಾತ್ರೆಯೇ ನೆರೆದಿದೆ. ಸಿನಿಮಾ ಆರಂಭವಾದ ಬಳಿಕ ಪ್ರಸನ್ನ, ಕಾಮಾಕ್ಯ ಥಿಯೇಟರ್ ಸೇರಿದಂತೆ ಬಹುತೇಕ ಥಿಯೇಟರ್‌ಗಳಲ್ಲಿ ಪರದೆ ಮುಂದೆ ಅಭಿಮಾನಿಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ. ಭಾನುವಾರ ಮಧ್ಯಾಹ್ನ ಯುವ ಸಿನಿಮಾ ನಟ ಯುವ ರಾಜ್‌ಕುಮಾರ್ ಅವರು ಜಾಕಿ ಸಿನಿಮಾವನ್ನು ವೀಕ್ಷಿಸಲು ನರ್ತಕಿ ಚಿತ್ರಮಂದಿರ ಮತ್ತು ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸುವ ಸುದ್ದಿಯೂ ಹರಡಿದೆ. ಹೀಗಾಗಿ ಅಪ್ಪು ಹುಟ್ಟುಹಬ್ಬದಂದು ಈ ಥಿಯೇಟರ್‌ಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.
ಮೈಸೂರು ಅಗ್ರಹಾರದಲ್ಲಿ 49 ಅಡಿ ಎತ್ತರದ ಕಟೌಟ್
ಪುನೀತ್ ರಾಜ್‌ಕುಮಾರ್ 49ನೇ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಅಗ್ರಹಾರ ಸರ್ಕಲ್‌ನಲ್ಲಿ 49 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗುತ್ತಿದೆ.
ಅಪ್ಪು ನೆನಪಿನೋತ್ಸವ
ಮಾರ್ಚ್ 17ರಂದು ತೀರ್ಥಹಳ್ಳಿಯ ಕುಪ್ಪಳಿ ಸಮೀಪ ಪುನೀತ್ ನೆನಪಿನೋತ್ಸವ ಕಾರ್ಯಕ್ರಮ ನಡೆಯಲಿದೆ. ವಿಶ್ವಮಾನವ ಕನ್ನಡ ವೇದಿಕೆ, ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ಟಿವಿಯ ಖ್ಯಾತ ಕಲಾವಿದರಿಂದ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಮಯದಲ್ಲಿ ಪುನೀತ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ರಕ್ತದಾನ, ನೇತ್ರದಾನ ನೋಂದಣಿ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಗೋವು ಮತ್ತು ಪ್ರಾಣಿಗಳಿಗೆ ನೀರಿನ ತೊಟ್ಟಿ ನಿರ್ಮಾಣ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೈಕ್ ರಾಲಿ
ಭಾನುವಾರ ಯಜಮಾನರ ಹುಟ್ಟಿದ ಹಬ್ಬದ ಪ್ರಯುಕ್ತ 10:30 ಗೆ ಅಣ್ಣಾವ್ರ ಪುಣ್ಯಭೂಮಿಯಿಂದ ಪ್ರಸನ್ನ ಚಿತ್ರಮಂದಿರದವರೆಗೂ ಬೈಕ್ ರಾಲಿ ಅನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ನಮ್ಮ ತಂಡದ ವತಿಯಿಂದ ಭಾರಿ ಸಿಡಿಮದ್ದು ಸಿಡಿಸಿ, ಡಿಜೆ ಸೌಂಡ್ ಸಿಸ್ಟಮ್‌ನೊಂದಿಗೆ ಅಪ್ಪು ಹುಟ್ಟುಹಬ್ಬ ಆಚರಿಸಲಾಗುವುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಮಾಹಿತಿ ನೀಡಿದ್ದಾರೆ.