ದಿವಂಗತ ಪುನೀತ್‌ ರಾಜ್‌ ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ: ಅಪ್ಪು ಬಗ್ಗೆ ಈ 8 ವಿಷಯಗಳನ್ನು ನೆನಪಿಸಿಕೊಳ್ಳೋಣ-sandalwood news late kannada actor puneeth rajkumar birthday today top 8 interesting facts about powerstar pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ದಿವಂಗತ ಪುನೀತ್‌ ರಾಜ್‌ ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ: ಅಪ್ಪು ಬಗ್ಗೆ ಈ 8 ವಿಷಯಗಳನ್ನು ನೆನಪಿಸಿಕೊಳ್ಳೋಣ

ದಿವಂಗತ ಪುನೀತ್‌ ರಾಜ್‌ ಕುಮಾರ್‌ 49ನೇ ವರ್ಷದ ಹುಟ್ಟುಹಬ್ಬ: ಅಪ್ಪು ಬಗ್ಗೆ ಈ 8 ವಿಷಯಗಳನ್ನು ನೆನಪಿಸಿಕೊಳ್ಳೋಣ

ಇಂದು ಮಾರ್ಚ್‌ 17 ದಿವಂಗತ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ರಾಜಕುಮಾರ, ಅಂಜನಿ ಪುತ್ರ, ನಟ ಸಾರ್ವಭೌಮ, ಯುವರತ್ನ, ಜೇಮ್ಸ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಅಪ್ಪುವಿನ ಕುರಿತು ಎಂಟು ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

ದಿವಂಗತ ಪುನೀತ್‌ ರಾಜ್‌ ಕುಮಾರ್‌ ಹುಟ್ಟುಹಬ್ಬ
ದಿವಂಗತ ಪುನೀತ್‌ ರಾಜ್‌ ಕುಮಾರ್‌ ಹುಟ್ಟುಹಬ್ಬ

ಬೆಂಗಳೂರು: ಮಾರ್ಚ್‌ 17 ಎಂದಾಗ ಅಪ್ಪು ಅಭಿಮಾನಿಗಳ ಮನದಲ್ಲಿ ನಾನಾ ಭಾವ. ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಹ್ಯಾಪಿ ಬರ್ತ್‌ಡೇ ಎಂದು ಹೇಳಿದರೆ ಮಾರುತ್ತರ ನೀಡಲು ಅವರಿಲ್ಲ ಎಂಬ ನೋವು ಅಭಿಮಾನಿಗಳದ್ದು. ಅಪ್ಪು ಅಜರಾಮರ ಎನ್ನುವಂತೆ ಅಪ್ಪು ಹೆಸರಿನಲ್ಲಿ ಹುಟ್ಟುಹಬ್ಬದಂದು ನಡೆಯುವ ಸಾಮಾಜಿಕ ಕಾರ್ಯಗಳಿಗೆ ಲೆಕ್ಕವಿಲ್ಲ. ಅಪ್ಪು ಕನ್ನಡಿಗರಿಗೆ ಸ್ಪೂರ್ತಿಯ ಚಿಲುಮೆ ಎನ್ನಬಹುದು. ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ನೆಪದಲ್ಲಿ ಅಪ್ಪು ಬಗ್ಗೆ ಒಂದಿಷ್ಟು ವಿಷಯಗಳನ್ನು ನೆನಪಿಸಿಕೊಳ್ಳೋಣ.

  1. ದಿವಂಗತ ಪುನೀತ್‌ ರಾಜ್‌ಕುಮಾರ್‌ 1975ರ ಮಾರ್ಚ್‌ 17ರಂದು ಜನಿಸಿದರು (ನಿಧನ: ಅಕ್ಟೋಬರ್‌ 29, 2021). ಇವರು ನಟರಾಗಿ, ಪ್ಲೇಬ್ಯಾಕ್‌ ಸಿಂಗರ್‌ ಆಗಿ, ಟಿವಿ ಕಾರ್ಯಕ್ರಮ ನಿರೂಪಕರಾಗಿ (ಕರುನಾಡ ಕೋಟ್ಯಧಿಪತಿ ನೆನಪಾಯ್ತ), ನಿರ್ಮಾಪಕರಾಗಿ, ಸಾಮಾಜಿಕ ಸೇವಕರಾಗಿ ಜನಪ್ರಿಯತೆ ಪಡೆದ ಮಹಾನ್‌ ಚೇತನ. ದಿ. ಡಾ. ರಾಜ್‌ಕುಮಾರ್‌ ಪುತ್ರರಾದ ಅಪ್ಪು ಸುಮಾರು 32 ಸಿನಿಮಾಗಳಲ್ಲಿ ನಾಯಕರಾಗಿ ಪ್ರೇಕ್ಷಕರ ಹೃದಯಲ್ಲಿ ಅಜರಾಮರವಾಗಿದ್ದಾರೆ.
  2. ಪುನೀತ್‌ ರಾಜ್‌ಕುಮಾರ್‌ ಬಾಲನಟರಾಗಿಯೂ ಫೇಮಸ್‌. ವಸಂತ ಗೀತ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಯಾರಿವನು, ಬೆಟ್ಟದ ಹೂವು ಮುಂತಾದ ಸಿನಿಮಾಗಳಲ್ಲಿ ಬಾಲನಟರಾಗಿ ನಟಿಸಿದ್ದಾರೆ.
  3. ಬೆಟ್ಟದ ಹೂವು ಸಿನಿಮಾದ ನಟನೆಗಾಗಿ ಇವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದಿದ್ದರು. ಎರಡು ನಕ್ಷತ್ರಗಳು ಮತ್ತು ಚಲಿಸುವ ಮೋಡಗಳು ಚಿತ್ರಗಳ ನಟನೆಗಾಗಿ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು. ಇದನ್ನೂ ಓದಿ: Movie Quiz: ಶಂಕರ್‌ನಾಗ್‌ ತ್ರಿಬಲ್‌ ಆಕ್ಟಿಂಗ್‌ನಲ್ಲಿ ನಟಿಸಿದ ಸಿನಿಮಾ ಯಾವುದು? ಅಪ್ಪು ಹುಟ್ಟುಹಬ್ಬ ಯಾವಾಗ? 10 ರಸಪ್ರಶ್ನೆಗಳಿಗೆ ಉತ್ತರಿಸಿ
  4. ದಿವಂಗತ ಪುನೀತ್‌ ರಾಜ್‌ಕುಮಾರ್‌ ಸುಮಾರು ಮೂರು ದಶಕದ ಸಿನಿ ಪ್ರಯಾಣದಲ್ಲಿ ಒಂದು ರಾಷ್ಟ್ರೀಯ ಸಿನಿಮಾ ಪ್ರಶಸ್ತಿ, ನಾಲ್ಕು ಕರ್ನಾಟಕ ರಾಜ್ಯ ಸಿನಿಮಾ ಪ್ರಶಸ್ತಿ, ಆರು ಫಿಲ್ಮ್‌ಫೇರ್‌ ಸೌತ್‌ ಅವಾರ್ಡ್‌, ಐದು ಸೈಮಾ ಅವಾರ್ಡ್‌ ಪಡೆದಿದ್ದಾರೆ.
  5. ದಿ. ಪುನೀತ್‌ ರಾಜ್‌ ಕುಮಾರ್‌ಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್‌ ಪದವಿ ನೀಡಿದೆ. ಕರ್ನಾಟಕ ಸರಕಾರವು ಪುನೀತ್‌ ರಾಜ್‌ಕುಮಾರ್‌ಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನ ನೀಡಿ ಗೌರವಿಸಿದೆ. ಅಂದರೆ, ಈ ಪ್ರಶಸ್ತಿಯನ್ನು ಅಪ್ಪು ನಿಧನದ ನಂತರ ನವೆಂಬರ್‌ 1, 2022ರಲ್ಲಿ ನೀಡಲಾಗಿತ್ತು. ಪುನೀತ್‌ ರಾಜ್‌ಕುಮಾರ್‌ಗೆ ಅಭಿಮಾನಿಗಳು ಅಪ್ಪ, ಪವರ್‌ ಸ್ಟಾರ್‌ ಎಂದೆಲ್ಲ ಕರೆಯುತ್ತಾರೆ.
  6. ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್‌, ಅಜಯ್‌, ಅರಸು, ಮಿಲನ, ವಂಶಿ, ರಾಮ್‌, ಜಾಕಿ, ಹುಡುಗರು, ಪವರ್‌, ರಣವಿಕ್ರಮ ಮುಂತಾದ ಸಿನಿಮಾಗಳಲ್ಲಿ ಅಪ್ಪು ನಟಿಸಿದ್ದರು. ರಾಜಕುಮಾರ, ಅಂಜನಿ ಪುತ್ರ, ನಟ ಸಾರ್ವಭೌಮ, ಯುವರತ್ನ, ಜೇಮ್ಸ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಂಧದ ಗುಡಿ ಡಾಕ್ಯುಮೆಂಟರಿಯಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಪ್ಪು ಮೊದಲ ಡೆತ್‌ ಅನಿವರ್ಸರಿಗೆ ಈ ಡಾಕ್ಯುಮೆಂಟರಿ ಬಿಡುಗಡೆ ಮಾಡಲಾಗಿತ್ತು.
  7. ಹೃದಯಾಘಾತದಿಂದ ಹಠಾತ್‌ ಆಗಿ ಕಣ್ಮರೆಯಾದ ಅಪ್ಪುವಿನ ಕಣ್ಣುಗಳನ್ನು ದಾನ ಮಾಡಲಾಗಿದೆ. ಪುನೀತ್‌ ರಾಜ್‌ಕುಮಾರ್‌ ನೇತ್ರದಾನದ ಬಳಿಕ ಒಂದೇ ವರ್ಷದಲ್ಲಿ ಸುಮಾರು 85,000 ಅಭಿಮಾನಿಗಳು ನಾರಾಯಣ ನೇತ್ರಾಲಯದಲ್ಲಿ ನೇತ್ರದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದಕ್ಕೂ ಮೊದಲು 28 ವರ್ಷಗಳಲ್ಲಿ 65,000 ಜನರು ನೇತ್ರದಾನ ಮಾಡಿದ್ದರು.
  8. ಪುನೀತ್‌ ರಾಜ್‌ಕುಮಾರ್‌ ಹೆಸರಿನಲ್ಲಿ ಹಲವು ಯೋಜನೆಗಳನ್ನು ಕರ್ನಾಟಕ ಸರಕಾರ ಆರಂಭಿಸಿದೆ. ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು, ಸಂಘಸಂಸ್ಥೆಗಳು, ಅಭಿಮಾನಿ ಬಳಗಗಳು ಅಪ್ಪು ಹೆಸರಿನಲ್ಲಿ ಪ್ರತಿವರ್ಷ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಈಗ ಎರಡನೇ ಹಂತಕ್ಕೆ ತಲುಪಿದೆ. ಈ ಕುರಿತ ವರದಿ ಇಲ್ಲಿದೆ ಓದಿ.