ಲಾಫಿಂಗ್‌ ಬುದ್ಧ ಸಿನಿಮಾ ವಿಮರ್ಶೆ: ಪ್ರೇಕ್ಷಕರ ನಿರೀಕ್ಷೆಯೆಂಬ ದೊಡ್ಡಹೊಟ್ಟೆಗೆ ಅರೆಕಾಸಿನ ಮಜ್ಜಿಗೆ-sandalwood news laughing buddha kannada movie cretics review pramod shetty police story like and dislike pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಲಾಫಿಂಗ್‌ ಬುದ್ಧ ಸಿನಿಮಾ ವಿಮರ್ಶೆ: ಪ್ರೇಕ್ಷಕರ ನಿರೀಕ್ಷೆಯೆಂಬ ದೊಡ್ಡಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಲಾಫಿಂಗ್‌ ಬುದ್ಧ ಸಿನಿಮಾ ವಿಮರ್ಶೆ: ಪ್ರೇಕ್ಷಕರ ನಿರೀಕ್ಷೆಯೆಂಬ ದೊಡ್ಡಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

Laughing buddha Kannada Movie: ರಿಷಬ್‌ ಶೆಟ್ಟಿ ನಿರ್ಮಾಣದ, ಪ್ರಮೋದ್‌ ಶೆಟ್ಟಿ ನಿರ್ದೇಶನದ, ಭರತ್‌ ರಾಜ್‌ ಕಥೆಯ ಲಾಫಿಂಗ್‌ ಬುದ್ಧ ಕನ್ನಡ ಸಿನಿಮಾವು ತನ್ನ ಸಹಜ ಕಥನ ಶೈಲಿಯಿಂದ ಇಷ್ಟವಾಗುತ್ತದೆ. ಸಿನಿಮಾ ಮುಗಿದು ಹೊರಬಂದಾಗ “ಇಷ್ಟೇನಾ?” ಎಂಬ ಭಾವ ಪ್ರೇಕ್ಷಕರಲ್ಲಿ ಮೂಡುತ್ತದೆ.

ಲಾಫಿಂಗ್‌ ಬುದ್ಧ ಕನ್ನಡ ಸಿನಿಮಾ ವಿಮರ್ಶೆ
ಲಾಫಿಂಗ್‌ ಬುದ್ಧ ಕನ್ನಡ ಸಿನಿಮಾ ವಿಮರ್ಶೆ

ಲಾಫಿಂಗ್‌ ಬುದ್ಧ ಸಿನಿಮಾ ವಿಮರ್ಶೆ: ನಮ್ಮ ಸುತ್ತಮುತ್ತ ನಡೆಯುವ ಘಟನೆಯನ್ನು ಸಹಜವಾಗಿ ಕಟ್ಟಿಕೊಡುವ ಸಿನಿಮಾಗಳು ಕನ್ನಡದಲ್ಲಿ ಅಪರೂಪಕ್ಕೆ ಎಂಬಂತೆ ಅಲ್ಲೊಂದು ಇಲ್ಲೊಂದು ಬರುತ್ತಿವೆ. ಪಕ್ಕದ ಮಲಯಾಳಂನಲ್ಲಿ ಬಹುತೇಕ ಸಿನಿಮಾಗಳು ಇಂತಹದ್ದೇ ಶೈಲಿಯಿಂದ ಪ್ರೇಕ್ಷಕರನ್ನು ಗೆದ್ದಿವೆ. ಕಾಂತಾರ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ವಿಶೇಷ ಸಿನಿಮ್ಯಾಟಿಕ್‌ ಎಕ್ಸ್‌ಪಿರೆಯನ್ಸ್‌ ನೀಡಿರುವ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧವೂ "ಸಹಜ ಕಥನ ಶೈಲಿಯಿಂದ" ಇಷ್ಟವಾಗುತ್ತದೆ. ಅದೇ ಸಮಯದಲ್ಲಿ ಪ್ರೇಕ್ಷಕರಿಗೆ ಸಹಜ ಕಥನ ಶೈಲಿಯಲ್ಲಿಯೇ ಇನ್ನಷ್ಟು ಒಳ್ಳೆಯ ಅನುಭವ ನೀಡುವ ಅವಕಾಶವನ್ನು "ಲಾಫಿಂಗ್‌ ಬುದ್ಧ" ಕಳೆದುಕೊಂಡಿತೇ ಎಂಬ ಪ್ರಶ್ನೆಯನ್ನೂ ಮೂಡಿಸುತ್ತದೆ.

ಲಾಫಿಂಗ್‌ ಬುದ್ಧ ಎಂದಾಕ್ಷಣ ನೆನಪಿಗೆ ಬರುವುದು ಸಂತೋಷ, ಸಮೃದ್ಧಿಯ ಸಂಕೇತವಾದ ಚೀನಿ ಸನ್ಯಾಸಿ. ಬಹುತೇಕರ ಮನೆಯಲ್ಲಿ ಅದೃಷ್ಟದ ಸಂಕೇತವಾಗಿ ಲಾಫಿಂಗ್‌ ಬುದ್ಧನ ಮೂರ್ತಿ ಇದ್ದೇ ಇರುತ್ತದೆ. ಇದೇ ಸಮಯದಲ್ಲಿ ಲಾಫಿಂಗ್‌ ಬುದ್ಧನ ದೊಡ್ಡ ಹೊಟ್ಟೆಯೂ ಗಮನ ಸೆಳೆಯುತ್ತದೆ. ಲಾಫಿಂಗ್‌ ಬುದ್ಧ ನಗು ಹಾಸ್ಯದ ಸಂಕೇತವೂ ಹೌದು. ಪ್ರಮೋದ್‌ ಶೆಟ್ಟಿ ನಟನೆಯ ಲಾಫಿಂಗ್‌ ಬುದ್ಧದಲ್ಲಿಯೂ ಪ್ರೇಕ್ಷಕರು ಹೊಟ್ಟೆ ತುಂಬಾ ನಗು ನಿರೀಕ್ಷಿಸಿದ್ದರು.

ಲಾಫಿಂಗ್‌ ಬುದ್ಧ ಪೊಲೀಸರ ಬದುಕಿನ ಕಷ್ಟಗಳಿಗೆ ಕನ್ನಡಿ ಹಿಡಿದ ಸಿನಿಮಾ. ಗ್ರಾಮೀಣ ಅಥವಾ ಸಣ್ಣ ಪಟ್ಟಣದಲ್ಲಿ ನಮ್ಮ ಸುತ್ತಮುತ್ತ ಇರಬಹುದಾದ ಸಾಮಾನ್ಯ ಪೊಲೀಸ್‌ ಸ್ಟೇಷನ್‌.  ಅಲ್ಲಿನವರ ದಿನನಿತ್ಯದ ಕೆಲಸ ಮತ್ತು ಕೆಲಸದ ಒತ್ತಡ. ಕುಟುಂಬಕ್ಕೆ ಸಮಯ ಕೊಡಲಾಗದ ಸಂಕಟ. ಆ ನೀರೂರು ಪೊಲೀಸ್‌ ಠಾಣೆಯಲ್ಲಿ ಗೋವರ್ಧನ ಎಂಬ ಪೊಲೀಸ್‌ ಪೇದೆಯ ಕಥೆ ಇದಾಗಿದೆ. ಆತನಿಗೆ ತಿನ್ನೋದು ಇಷ್ಟ. ಇದೇ ಸಮಯದಲ್ಲಿ ಎಂತಹ ಪ್ರಕರಣವನ್ನೂ ತನ್ನದೇ ಶೈಲಿಯಲ್ಲಿ ಬಗೆಹರಿಸುವ ಕೌಶಲ ಆತನಿಗಿದೆ. ಆದರೆ, ಆತನ ಹೊಟ್ಟೆಯೇ ದೊಡ್ಡ ಸಮಸ್ಯೆ. ಪೊಲೀಸರೆಂದರೆ ಹೊಟ್ಟೆ ಬೆಳೆಸಿಕೊಂಡಿರುವವರು ಎಂಬ ಕಲ್ಪನೆಯೇ ಎಲ್ಲರಲ್ಲಿ ಇರುತ್ತದೆ. ಆದರೆ, ಅವರ ಬದುಕಿನ ಕಷ್ಟ ಯಾರಿಗೂ ಅರಿವು ಇರುವುದಿಲ್ಲ. ಈ ಕಷ್ಟವನ್ನು ನವಿರಾದ ಹಾಸ್ಯದ ಮೂಲಕ ಕಟ್ಟಿಕೊಡುವ ಪ್ರಯತ್ನ ಇಷ್ಟವಾಗುತ್ತದೆ.

ಚಿತ್ರದಲ್ಲಿ ಈ ಪೊಲೀಸರಿಗೆ ಒಂದು ಸವಾಲು ಎದುರಾಗುತ್ತದೆ. ಈ ಸವಾಲಿನ ಕಥೆ ಅಷ್ಟು ಗಟ್ಟಿ ಇಲ್ಲದೆ ಇರುವುದೇ ಈ ಚಿತ್ರದ ಸೋಲು. ಜತೆಗೆ, ಚಿತ್ರದ ಅಂತ್ಯದಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಈ ರೀತಿ ಮಾಡಬಹುದು ಎಂಬ ಸಂದೇಶ ಇದೆ. ಆದರೆ, ಪ್ರೇಕ್ಷಕರ ಮನಸ್ಸಿಗೆ ಅದು ಅಷ್ಟು ವರ್ಕೌಟ್‌ ಆಗದು. ಆರಂಭದಲ್ಲಿ ಚಿತ್ರ ಸಾಗುವ ರೀತಿ ನೋಡಿದರೆ ಇದು ಮುಂದೆ ಹೋಗುತ್ತಾ ಹೋಗುತ್ತಾ ರೋಚಕವಾಗುವ ನಿರೀಕ್ಷೆಯಲ್ಲಿ ಪ್ರೇಕ್ಷಕರು ಕಾಯುತ್ತಾರೆ. ಚಿತ್ರ ಮುಗಿದಾಗ "ಇಷ್ಟೇನಾ?" ಎಂಬ ಪ್ರಶ್ನೆ ಮೂಡದೆ ಇರದು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಂತಾರ ಖ್ಯಾತಿಯ ರಿಷಬ್‌ ಶೆಟ್ಟಿ ಸಿನಿಮಾ ಪ್ರೇಕ್ಷಕರು ಥಿಯೇಟರ್‌ಗೆ ಯಾಕೆ ಬರುವುದಿಲ್ಲವೆಂದು ಕಾರಣ ಹೇಳಿದ್ದರು. "ಈಗ ಮನೆಮನೆಯಲ್ಲಿ ಎಲ್ಲರೂ ವಿಡಿಯೋ ಮಾಡುತ್ತಾರೆ. ಎಡಿಟಿಂಗ್‌ ಮಾಡುತ್ತಾರೆ. ಒಟಿಟಿ, ಯೂಟ್ಯೂಬ್‌ ನೋಡುತ್ತಾರೆ. ಅದಕ್ಕಿಂತ ಹೆಚ್ಚಿನ ಅನುಭವ ಪ್ರೇಕ್ಷಕರಿಗೆ ಥಿಯೇಟರ್‌ನಲ್ಲಿ ದೊರಕಬೇಕು. ಆಗ ಚಿತ್ರಮಂದಿರಕ್ಕೆ ಜನ ಬರುತ್ತಾರೆ" ಎಂದು ಹೇಳಿದ್ದರು. ಆದರೆ, ಲಾಫಿಂಗ್‌ ಬುದ್ಧದಲ್ಲಿ ರಿಷಬ್‌ ಶೆಟ್ಟಿ ಹೇಳಿದ "ಆ ಅನುಭವ" ಮಿಸ್‌ ಆಗಿದೆ.

ಲಾಫಿಂಗ್‌ ಬುದ್ಧದಲ್ಲಿ ಪ್ರಮೋದ್‌ ಶೆಟ್ಟಿ ನಟನೆ ಇಷ್ಟವಾಗುತ್ತದೆ. ದೇಹದ ಆಕಾರದ ಜತೆಗೆ ಅಭಿನಯವೂ ಇಷ್ಟವಾಗುತ್ತದೆ. ಒಬ್ಬ ಪಾಪದ ಪೋಲಿಸಪ್ಪನಂತೆ ಸಹಜವಾಗಿ ನಟಿಸಿದ್ದಾರೆ. ಪೊಲೀಸ್‌ ಸ್ಟೇಷನ್‌ನಲ್ಲಿ ಪುನರ್‌ ಮಿಲನ ಸಮಯದಲ್ಲಿ ತೇಜು ಬೆಳವಾಡಿ ಕ್ಯೂಟ್‌ ಆಗಿ ಸೆಳೆಯುತ್ತಾರೆ. ಎಲ್ಲರ ಮನದಲ್ಲಿಯೂ ಎಂಥಾ ಚೆಂದಾನೆ ಇವಳು ಎಂಬ ಭಾವ ಮೂಡಿಸುತ್ತಾರೆ. ಇದಾದ ಬಳಿಕ ಪೊಲೀಸ್‌ ಪೇದೆಯ ಹೆಂಡತಿಯಂತೆ ಗೃಹಿಣಿಯಾಗಿ ಸಹಜವಾಗಿ ನಟಿಸಿದ್ದಾರೆ. ಗೋವರ್ಧನ್‌ ಮಗಳು ಕೂಡ ಇಷ್ಟವಾಗುತ್ತಾಳೆ. ಪ್ರೇಕ್ಷಕರ ಮನಸ್ಸಲ್ಲಿ ಅಚ್ಚೊತ್ತುವಂತೆ (ಚಾರ್ಲಿ 777ನಲ್ಲಿದ್ದ ಪುಟಾಣಿಯಂತೆ) ಕೆಲವು ದೃಶ್ಯಗಳನ್ನು ಇವಳಿಗೆ ಸೃಷ್ಟಿಸಬಹುದಿತ್ತು. ಸುಂದರ್‌ ರಾಜ್‌, ದಿಗಂತ್‌ ಎಲ್ಲರದ್ದೂ ಸಹಜ ಅಭಿನಯ. ಎಲ್ಲಾ ಪೊಲೀಸ್‌ ಪಾತ್ರಗಳು ಸ್ಟೇಷನ್‌ನಲ್ಲಿ ಕಾಣಿಸುವ ನಿಜವಾದ ಪೊಲೀಸರಂತೆ ಸಹಜವಾಗಿಯೇ ನಟಿಸಿದ್ದಾರೆ.

ಲಾಫಿಂಗ್‌ ಬುದ್ಧ ಸಿನಿಮಾ ಸಹಜ ಲಯದಿಂದ ಇಷ್ಟವಾಗುತ್ತದೆ ನಿಜ. ಆದರೆ, ಚಿತ್ರಮಂದಿರದಲ್ಲಿ ವಿಶೇಷವಾಗಿ ಮಲ್ಟಿಫ್ಲೆಕ್ಸ್‌ಗಳಲ್ಲಿ 50- 100 ರೂಪಾಯಿ ಮೌಲ್ಯದ ಪಾಪ್‌ಕಾರ್ನ್‌ಗೆ 300 ರೂಪಾಯಿ ನೀಡಿ ಅನಿವಾರ್ಯವಾಗಿ (ಅಲ್ಲಿ ಬೇರೆ ಉತ್ತಮ ಆಯ್ಕೆ ಇಲ್ಲದೆ ಇರುವಾಗ) ಖರೀದಿಸುತ್ತೇವೆ ಅಲ್ವ. ಆಗ ಮನಸ್ಸಲ್ಲಿ ಮೂಡುವ ಸಣ್ಣ ನಿರಾಶೆ ಲಾಫಿಂಗ್‌ ಬುದ್ಧ ಸಿನಿಮಾ ನೋಡಿ ಹೊರಬಂದಾಗ ಉಂಟಾಗುತ್ತದೆ.

ಸಿನಿಮಾದ ಹೆಸರು: ಲಾಫಿಂಗ್‌ ಬುದ್ಧ
ಭಾಷೆ: ಕನ್ನಡ
ತಾರಾಗಣ: ಪ್ರಮೋದ್‌ ಶೆಟ್ಟಿ (ಗೋವರ್ಧನ್‌), ತೇಜು ಬೆಳವಾಡಿ (ಸತ್ಯವತಿ), ಸುಂದರ್‌ ರಾಜ್‌, ದಿಗಂತ್‌ ಮತ್ತು ಇತರರು
ನಿರ್ಮಾಣ: ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಬ್ಯಾನರ್‌ನಡಿ ರಿಷಬ್‌ ಶೆಟ್ಟಿ
ಕಥೆ: ಎಂ ಭರತ್‌ ರಾಜ್‌
ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು
ಎಚ್‌ಟಿ ಕನ್ನಡ ರೇಟಿಂಗ್‌: 3.5/5

ಲಾಫಿಂಗ್‌ ಬುದ್ಧ ಟ್ರೇಲರ್‌