ಮನದ ಕಡಲು ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಲೈಟ್‌ ಮ್ಯಾನ್‌ ಸಾವು; ನಿರ್ದೇಶಕ ಯೋಗರಾಜ್‌ ಭಟ್‌ ಸೇರಿ ಹಲವರ ವಿರುದ್ಧ ಕೇಸ್‌
ಕನ್ನಡ ಸುದ್ದಿ  /  ಮನರಂಜನೆ  /  ಮನದ ಕಡಲು ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಲೈಟ್‌ ಮ್ಯಾನ್‌ ಸಾವು; ನಿರ್ದೇಶಕ ಯೋಗರಾಜ್‌ ಭಟ್‌ ಸೇರಿ ಹಲವರ ವಿರುದ್ಧ ಕೇಸ್‌

ಮನದ ಕಡಲು ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿ ಲೈಟ್‌ ಮ್ಯಾನ್‌ ಸಾವು; ನಿರ್ದೇಶಕ ಯೋಗರಾಜ್‌ ಭಟ್‌ ಸೇರಿ ಹಲವರ ವಿರುದ್ಧ ಕೇಸ್‌

ಮನದ ಕಡಲು ಸಿನಿಮಾ ಶೂಟಿಂಗ್‌ ವೇಳೆ ಲೈಟ್‌ ಮ್ಯಾನ್‌ ಮೋಹನ್‌ ಕುಮಾರ್‌ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಿರ್ದೇಶಕರಾಗಿರುವ ಯೋಗರಾಜ್‌ ಭಟ್‌ ಮತ್ತು ನಿರ್ಮಾಪಕರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ನಿರ್ದೇಶಕ ಯೋಗರಾಜ್‌ ಭಟ್
ನಿರ್ದೇಶಕ ಯೋಗರಾಜ್‌ ಭಟ್ (‌instagram\ Yogaraj Bhat)

Yogaraj Bhat: ಸ್ಯಾಂಡಲ್‌ವುಡ್‌ ನಿರ್ದೇಶಕ ಯೋಗರಾಜ್‌ ಭಟ್‌ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಮನದ ಕಡಲು ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದಿಂದ ಲೈಟ್‌ಮ್ಯಾನ್‌ ಮೋಹನ್‌ ಎಂಬುವವರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ತಲೆಗೆ ತೀವ್ರ ತರದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ರಕ್ತಸ್ತ್ರಾವವಾಗಿ ಮಂಗಳವಾರ ಕೊನೆಯುಸಿರೆಳೆದಿದ್ದರು.

ಸೆ. 3ರಂದು ಸಂಜೆ 5 ಗಂಟೆ ಸುಮಾರಿಗೆ ಮನದ ಕಡಲು ಚಿತ್ರದ ಶೂಟಿಂಗ್‌ನಲ್ಲಿ 30ಕ್ಕೂ ಅಡಿ ಎತ್ತರದ ಅಲ್ಯುಮಿನಿಯಮ್‌ ಏಣಿ ಮೇಲೆ ಹತ್ತಿದ್ದ ಮೋಹನ್‌ ಕುಮಾರ್‌, ಲೈಟ್‌ಗಳನ್ನು ಬಿಚ್ಚುತ್ತಿದ್ದಾಗ, ಆಯ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ರಕ್ತಸ್ತ್ರಾವವಾಗಿತ್ತು. ಚಿಕಿತ್ಸೆ ಫಲಿಸದೇ ಮೋಹನ್‌ಕುಮಾರ್‌ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದರು.

ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ಮನದ ಕಡಲು ಚಿತ್ರತಂಡ ಸೇರಿ ಚಿತ್ರದ ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಚಿತ್ರದ ಮ್ಯಾನೇಜರ್ ಸುರೇಶ್, ಸಹಾಯಕ ಮ್ಯಾನೇಜರ್ ಮನೋಹರ್ ವಿರುದ್ಧ ದೂರು ದಾಖಲಾಗಿದೆ. ಶೂಟಿಂಗ್‌ ಸೆಟ್‌ನಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಇದ್ದುದ್ದರಿಂದ ಈ ಸಾವು ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ.

Whats_app_banner