ಕನ್ನಡ ಸುದ್ದಿ  /  Entertainment  /  Sandalwood News Loksabha Election 2024 Mandya Kaatera Darshan Campaign For Sumalatha What About Toxic Yash Pcp

ಮಂಡ್ಯ ಅಖಾಡದಲ್ಲಿ ಮತ್ತೆ ಜೋಡೆತ್ತುಗಳ ರಥಯಾತ್ರೆ? ದರ್ಶನ್ ಓಕೆ ಅಂದ್ರು, ಯಶ್ ಬರ್ತಾರ? ಇಲ್ಲಿದೆ ವಿವರ

ಲೋಕಸಭೆ ಚುನಾವಣೆ 2024 ಹತ್ತಿರದಲ್ಲಿದೆ. 2019ರಲ್ಲಿ ಸುಮಲತಾ ಪರವಾಗಿ ದರ್ಶನ್‌ ಮತ್ತು ಯಶ್‌ ಪ್ರಚಾರ ಮಾಡಿದ್ದರು. ಈ ಬಾರಿಯೂ ಜೋಡೆತ್ತುಗಳ ರಥಯಾತ್ರೆ ಇದೆಯೇ? ಈಗಾಗಲೇ ಪ್ರಚಾರಕ್ಕೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಮ್ಮತಿ ನೀಡಿದ್ದಾರೆ.

ಮಂಡ್ಯ ಅಖಾಡದಲ್ಲಿ ಮತ್ತೆ ಜೋಡೆತ್ತುಗಳ ರಥಯಾತ್ರೆ
ಮಂಡ್ಯ ಅಖಾಡದಲ್ಲಿ ಮತ್ತೆ ಜೋಡೆತ್ತುಗಳ ರಥಯಾತ್ರೆ

ಬೆಂಗಳೂರು: ಮತ್ತೆ ಮಂಡ್ಯ ಲೋಕಸಭೆ ಚುನಾವಣ ಅಖಾಡ ರಂಗೇರುತ್ತಿದೆ. 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನಿ ಅಸ್ತ್ರವನ್ನ ಬಳಸಿ ಸುಮಲತಾ ಅಂಬರೀಶ್ ಚುನಾವಣೆ ಎದುರಿಸಿದ್ದರು. ಜೆಡಿಎಸ್ ಅಭ್ಯರ್ಥಿ ನಟ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಗೆದ್ದು ಬೀಗಿದ್ದರು. ಆಗ ಸುಮಲತಾ ಪರ ಪ್ರತೀದಿನ ನಟ ದರ್ಶನ್ ಹಾಗೂ ಯಶ್ ಭರ್ಜರಿ ಪ್ರಚಾರ ನಡೆಸಿದ್ದರು. ಅದು ಸುಮಲತಾ ಗೆಲವುವಿಗೆ ಪ್ರಮುಖ ಕಾರಣ ಕೂಡ ಆಗಿತ್ತು ಅಂದ್ರೇ ತಪ್ಪಾಗೋದಿಲ್ಲ .‌‌

ಸಂಪೂರ್ಣ ಬದಲಾದ ಮಂಡ್ಯ ಲೋಕಸಭಾ ಚಿತ್ರಣ

ಆದರೆ .ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಯ ಸಂಪೂರ್ಣ ಚಿತ್ರಣ ಬದಲಾಗಿದೆ. ಕಾರಣ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಮತ್ತೊಂದು ಕಡೆ ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಬಿಜೆಪಿ ಹೈಕಮಾಂಡ್ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಹುತೇಕ ಬಿಟ್ಟು ಕೊಟ್ಟಿದೆ.. ಈ ಬಾರಿಯೂ ಸಂಸದೆ ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ.‌

ಶತಾಯಗತಾಯ ಮಂಡ್ಯ ಕ್ಷೇತ್ರವನ್ನು ಉಳಿಸಿಕೊಂಡು ಅಲ್ಲೇ ಚುನಾವಣೆಗೆ ಸ್ಪರ್ಧಿಸಲು ಸುಮಲತಾ ಕಸರತ್ತು ನಡೆಸುತ್ತಿದ್ದಾರೆ. ಈ ಸಂಭಂದ ನಿನ್ನೆ ತಮ್ಮ ನಿವಾಸದಲ್ಲಿ ಮಂಡ್ಯ ರಾಜಕೀಯ ಮುಖಂಡರ ಸಭೆ ನಡೆಸಿದರು. ನಟ ದರ್ಶನ್ ಸಹ ಭಾಗಿ ಆಗಿದ್ದರು.

ಸಂಸದೆ ಸುಮಲತಾಗೆ ದೊಡ್ಡಮಗ ದಚ್ಚು ಸಾಥ್

ಸಭೆಯ ಬಳಿಕ ಮಾಧ್ಯಮದವರ ಜೊತೆ ಮಾತಾಡಿದ ಸುಮಲತಾ ಅಂಬರೀಶ್ ,ಈ ಬಾರಿ ದರ್ಶನ್ ನಿಮ್ಮ ಪ್ರಚಾರ ಮಾಡುತ್ತಾರಾ ಎನ್ನುವ ಪ್ರಶ್ನೆಗೆ ಸುಮಲತಾ ಪ್ರತಿಕ್ರಿಯಿಸಿದರು. "ದರ್ಶನ್‌​ಗೆ ಯಾವುದೇ ಪಕ್ಷದ ಹಂಗಿಲ್ಲ, ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಹೀಗೆ ವಿವಿಧ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಈ ಬಾರಿಯೂ ಸಹ ಅವರು ನನ್ನ ಪರವಾಗಿ ಪ್ರಚಾರಕ್ಕೆ ಬರ್ತಾರೆ. ಪಕ್ಷ ಯಾವುದಾದರೂ ಸರಿಯೇ ನೀವು ಮುಖ್ಯ ನಿಮ್ಮ ಪರವಾಗಿ ಪ್ರಚಾರಕ್ಕೆ ಬರುತ್ತೀನಿ ಎಂದು ಸ್ಪಷ್ಟವಾಗಿ ಹೇಳಿರುವುದಾಗಿ ಸುಮಲತಾ ತಿಳಿಸಿದ್ದಾರೆ

ಯಶ್ ಜೊತೆ‌ ಇನ್ನೂ ಮಾತಾಡಿಲ್ಲ, ಕಿಚ್ಚನ ಬಗ್ಗೆ ಕೇಳಿದ್ದಕ್ಕೆ ನಕ್ಕ ಸುಮಕ್ಕ

ಇನ್ನು ದರ್ಶನ್ ಜೊತೆ ಯಶ್ ಕೂಡ ಪ್ರಚಾರದ ಕಣಕ್ಕೆ ಇಳಿಯುತ್ತಾರಾ? ಎನ್ನುವ ಪ್ರಶ್ನೆಗೆ "ಯಶ್​ಬಳಿ ಈ ಬಗ್ಗೆ ನಾನಿನ್ನೂ ಮಾತನಾಡಿಲ್ಲ. ಯಶ್ ಲಂಡನ್‌ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಅವರ ಜೊತೆ ಈ ಬಗ್ಗೆ ಚರ್ಚಿಸಲು ಸಾಧ್ಯವಾಗಿಲ್ಲ. ಮುಂದೆ ಚರ್ಚಿಸುತ್ತೇನೆ" ಎಂದರು. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಟ ಕಿಚ್ಚ ಸುದೀಪ್ ಬಿಜೆಪಿ ಬೆಂಬಲಿಸಿದ್ದರು. ಈ ಬಾರಿ ಪಕ್ಷೇತರವಾಗಿ ನೀವು ಸ್ಪರ್ಧಿಸಿದರೆ ಸುದೀಪ್ ಅವರು ನಿಮ್ಮ ಪರ ಪ್ರಚಾರ ಮಾಡುತ್ತಾರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸುಮಲತಾ ನಕ್ಕು ಸುಮ್ಮನಾದರು.

ನನ್ನ ಗಮನ ಸಂಪೂರ್ಣ ಸಿನಿಮಾ ಮೇಲಿದೆ: ಯಶ್

ಇತ್ತೀಚೆಗೆ ಪಾನಿಪುರಿ ಕಿಟ್ಟಿ ಜಿಮ್ ಉದ್ಘಾಟನೆ ಸಮಾರಂಭಕ್ಕೆ ನಟ ಯಶ್ ಬಂದಿದ್ದರು. ಈ ವೇಳೆ ಸುಮಲತಾ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಯಶ್ ಉತ್ತರ ನೀಡಿರಲಿಲ್ಲ. ನನ್ನ ಸಂಪೂರ್ಣ ಗಮನ ಸಿನಿಮಾ ಕಡೆ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಪ್ರಚಾರಕ್ಕೆ ಹೋಗುವಂತಿದ್ದರೆ ಪ್ರತಿಕ್ರಿಯಿಸುತ್ತಿದ್ದರು ಎನ್ನುವ ಚರ್ಚೆ ಶುರುವಾಗಿದೆ.

ಒಟ್ಟಾರೆಯಾಗಿ ಮಂಡ್ಯ ಅಖಾಡ ಮತ್ತೆ ರಂಗೇರುತ್ತಿದೆ. ಕಳೆದ ಬಾರಿ ಜೋಡೆತ್ತುಗಳ ಹಾಗೆ ನಿಂತು ಸುಮಲತಾ ಗೆಲವಿನ ತೇರನ್ನ ಎಳೆದಿದ್ದ ದಚ್ಚು ಹಾಗೂ ರಾಕೀ ಭಾಯ್ ಈ ಬಾರಿಯೂ ಸುಮಕ್ಕನ ಜೊತೆ ಸಾರಥಿಯಾಗ್ತಾರಾ? ಈಗಾಗಲೇ ಡಿ ಬಾಸ್ ಸುಮಲತಾ ಪರ ನಿಂತಾಗಿದೆ.‌ಇನ್ನೂ ಯಶ್ ಅವರಿಂದ ಉತ್ತರ ಸಿಗಬೇಕಿದೆ

  • ವರದಿ: ಮನೋಜ್ ವಿಜಯೀಂದ್ರ

IPL_Entry_Point