ಕರ್ನಾಟಕ- ಕೇರಳ ಗಡಿಯ ಕಥೆ ಹೇಳುವ ಇದು ಎಂಥಾ ಲೋಕವಯ್ಯ ಚಿತ್ರಕ್ಕೆ ಖ್ಯಾತ ಮಲಯಾಳಿ ನಿರ್ದೇಶಕ ಸಾಥ್
ಮಲಯಾಳಂ ಖ್ಯಾತ ನಿರ್ದೇಶಕ ಜಿಯೋ ಬೇಬಿ ಪ್ರಸೆಂಟ್ ಮಾಡುತ್ತಿರುವ, ಸಿತೇಶ್ ಸಿ ಗೋವಿಂದ್ ನಿರ್ದೇಶನದ ಇದು ಎಂಥಾ ಲೋಕವಯ್ಯ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ದಿನಾಂಕವೂ ರಿವೀಲ್ ಆಗಿದೆ.

Idu Entha Lokavayya Official Trailer: ಸಿತೇಶ್ ಸಿ ಗೋವಿಂದ್ ನಿರ್ದೇಶನದ ಇದು ಎಂಥಾ ಲೋಕವಯ್ಯ ಸಿನಿಮಾ ಇದೀಗ ಕರ್ನಾಟಕ- ಕೇರಳ ಗಡಿ ಭಾಗದ ಕಥೆ ಹೇಳಲಿದೆ. ಈ ಕನ್ನಡ ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಪ್ರಸೆಂಟ್ ಮಾಡುತ್ತಿದ್ದಾರೆ. ಸಿತೇಶ್ ಸಿ ಗೋವಿಂದ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದೀಗ ಇದೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆ ದಿನಾಂಕವೂ ರಿವೀಲ್ ಆಗಿದೆ.
ಮಲಯಾಳಂನಲ್ಲಿ ದಿ ಗ್ರೇಟ್ ಇಂಡಿಯನ್ ಕಿಚನ್ ಮತ್ತು ಮಮ್ಮುಟ್ಟಿ ಜ್ಯೋತಿಕ ಅಭಿನಯದ ಕಾದಲ್ ದಿ ಕೋರ್ ನಂತಹ ಜನ ಮೆಚ್ಚುಗೆ ಪಡೆದ ಚಿತ್ರಗಳ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಹೆಸರುವಾಸಿಯಾದ ನಿರ್ದೇಶಕ ಜಿಯೋ ಬೇಬಿ ಇದು ಎಂಥಾ ಲೋಕವಯ್ಯ ಯೋಜನೆಯೊಂದಿಗೆ ಕನ್ನಡ ಚಿತ್ರರಂಗಕ್ಕೆ ಆಗಮಿಸುತ್ತಿದ್ದಾರೆ.
ಕರ್ನಾಟಕ- ಕೇರಳ ಗಡಿಯ ಕಥೆ
ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯೇ ಇದು ಎಂಥಾ ಲೋಕವಯ್ಯ ಸಿನಿಮಾ. ಕೇವಲ ಎರಡು ದಿನಗಳಲ್ಲಿ ನಡೆಯುವ ಘಟನೆಯೊಂದರ ಸುತ್ತ ಇಡೀ ಸಿನಿಮಾ ಸಾಗಲಿದೆ. ಕನ್ನಡ ಮತ್ತು ಮಲಯಾಂಳ ಮಾತ್ರವಲ್ಲದೆ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ವಿಶಿಷ್ಟಪೂರ್ಣ ಸಮ್ಮೇಳನವೂ ಈ ಸಿನಿಮಾದಲ್ಲಾಗಿದೆ. ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಕಟ್ಟಿಕೊಡುವ ಕೆಲಸವನ್ನೂ ನಿರ್ದೇಶಕರು ಮಾಡಿದ್ದಾರೆ.
ಮೂಡನಂಬಿಕೆ ಸುತ್ತ
ಈ ಅಪರೂಪದ ಹೈಪರ್‌ಲಿಂಕ್ ಚಿತ್ರದಲ್ಲಿ ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ತೋರಿಸಲಾಗುತ್ತಿದೆ. ಅವು ಹೇಗೆ ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತವೆ ಎಂಬುದೂ ಇಲ್ಲಿರಲಿದೆ. ಕರ್ನಾಟಕ- ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ಕಥೆಯ ಜತೆಗೆ ತಿಳಿಯಾದ ಹಾಸ್ಯವೂ ಈ ಸಿನಿಮಾದ ಹೈಲೈಟ್ ಎಂಬುದು ನಿರ್ದೇಶಕ ಸಿತೇಶ್ ಸಿ ಗೋವಿಂದ್ ಅವರ ಮಾತು.
ತಾರಾಗಣದಲ್ಲಿ ಯಾರೆಲ್ಲ ಇದ್ದಾರೆ..
ಅಂದಹಾಗೆ ಇದು ಎಂಥಾ ಲೋಕವಯ್ಯ ಸಿನಿಮಾ ಇದೇ ಆಗಸ್ಟ್ 9ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಪ್ರಕಾಶ್ ತುಮ್ಮಿನಾಡ್, ಸೇರಿ ಇನ್ನೂ ಹಲವು ಚಿತ್ರದ ತಾರಾಬಳಗದಲ್ಲಿದ್ದಾರೆ.
