ಮೈಸೂರಿನ ರಂಗಾಯಣದ ಗರಡಿಯಿಂದ ಚಿತ್ರರಂಗದವರೆಗೆ: ಮಂಡ್ಯ ರಮೇಶ್‌, ರಘು, ಅರುಣ್‌ ಸಾಗರ್‌ ಯಶಸ್ವಿ ಪಯಣ
ಕನ್ನಡ ಸುದ್ದಿ  /  ಮನರಂಜನೆ  /  ಮೈಸೂರಿನ ರಂಗಾಯಣದ ಗರಡಿಯಿಂದ ಚಿತ್ರರಂಗದವರೆಗೆ: ಮಂಡ್ಯ ರಮೇಶ್‌, ರಘು, ಅರುಣ್‌ ಸಾಗರ್‌ ಯಶಸ್ವಿ ಪಯಣ

ಮೈಸೂರಿನ ರಂಗಾಯಣದ ಗರಡಿಯಿಂದ ಚಿತ್ರರಂಗದವರೆಗೆ: ಮಂಡ್ಯ ರಮೇಶ್‌, ರಘು, ಅರುಣ್‌ ಸಾಗರ್‌ ಯಶಸ್ವಿ ಪಯಣ

ಮೈಸೂರಿನ( Mysuru) ರಂಗಾಯಣ(Rangayana) ಎಂದರೆ ಅದು ರಂಗಭೂಮಿಯ ವಿಶ್ವವಿದ್ಯಾನಿಲಯ. ಮೂರೂವರೆ ದಶಕದಲ್ಲಿ ರಂಗಾಯಣದಲ್ಲಿ ಏನೆಲ್ಲಾ ಆಗಿ ಹೋಗಿವೆ. ಅಲ್ಲಿ ಪ್ರಯೋಗಗಳೂ ನಡೆದಿವೆ. ಪ್ರತಿಭೆಗಳು ಬೆಳಗಿವೆ. ಅಂತಹ ಪ್ರತಿಭೆಗಳು ಹಲವು. ಮಂಡ್ಯ ರಮೇಶ್‌, ಅರುಣ್‌ ಸಾಗರ್‌, ರಂಗಾಯಣ ರಘು ಮೂವರೂ ರಂಗಾಯಣ ಗರಡಿಯಲ್ಲಿ ಬೆಳೆದು ಈಗ ದೊಡ್ಡ ಕಲಾವಿದರಾಗಿ ರೂಪುಗೊಂಡಿದ್ದಾರೆ.

ಮಂಡ್ಯ ರಮೇಶ್‌, ರಂಗಾಯಣ ರಘು, ಅರುಣ್‌ ಸಾಗರ್‌ ಮೈಸೂರಿನ ರಂಗಾಯಣದ ಪ್ರತಿಭೆಗಳು
ಮಂಡ್ಯ ರಮೇಶ್‌, ರಂಗಾಯಣ ರಘು, ಅರುಣ್‌ ಸಾಗರ್‌ ಮೈಸೂರಿನ ರಂಗಾಯಣದ ಪ್ರತಿಭೆಗಳು

ಮಂಡ್ಯ ರಮೇಶ್‌, ಅರುಣ್‌ ಸಾಗರ್‌, ರಂಗಾಯಣ ರಘು...

ಕನ್ನಡ ಚಿತ್ರರಂಗದ ಈ ಮೂವರು ವಿಭಿನ್ನ ಮ್ಯಾನರಿಸಂ ಮೂಲಕವೇ ಜನ ಮನಸು ಗೆದ್ದವರು. ಗಹಗಹಿಸಿ ನಗುತ್ತಿದ್ದರೆ ಮೂವರನ್ನು ನೋಡುವುದೇ ಚೆಂದ. ಕನ್ನಡದಲ್ಲಿ ಅವರು ಅಭಿನಯಿಸಿದ ಚಿತ್ರಗಳಲ್ಲಿ ಹಲವು. ನೆನಪುಳಿಯುವಂತಹ ಪಾತ್ರಗಳೂ ಕೂಡ. ಆ ಮೂವರೂ ಬೆಳೆದುಬಂದಿದ್ದು ರಂಗಭೂಮಿಯಿಂದ. ಅದೇ ಅವರಿಗೆ ಮೂಲ ಬೇರು. ಅಲ್ಲಿಂದ ಚಿತ್ರರಂಗದಲ್ಲೂ ಗಟ್ಟಿ ನೆಲೆ ಕಂಡುಕೊಳ್ಳಲು ರಂಗಭೂಮಿಯೇ ಅಡಿಪಾಯ.

ರಂಗಾಯಣದ ಗರಡಿಯಲ್ಲಿ

ಮೈಸೂರಿನ ರಂಗಾಯಣ ಎನ್ನುವ ರೆಪರ್ಟರಿ ರಂಗಭೂಮಿ ಕ್ಷೇತ್ರದ ಆಲದ ಮರ. ಇಲ್ಲಿ ಬೆಳೆದ ಪ್ರತಿಭೆಗಳು, ನಡೆದ ಪ್ರಯೋಗಗಳು ಅನನ್ಯ. ಎಂಬತ್ತರ ದಶಕದಲ್ಲಿ ರಂಗದಿಗ್ಗಜ ಬಿ.ವಿ.ಕಾರಂತರು ರಂಗಭೂಮಿಯ ಹೊಸ ಪ್ರಯೋಗಕ್ಕೆ ಮುಂದಾದರು. ಅದೇ ರಂಗಾಯಣ. ನಾಡಿನ ನಾನಾ ಭಾಗಗಳ, ಸಾಮಾಜಿಕ ಹಿನ್ನೆಲೆಯ 34 ಪ್ರತಿಭೆಗಳನ್ನು ಹೆಕ್ಕಿ ತೆಗೆದು ರೂಪಿಸಿದ ರಂಗ ಪ್ರಯೋಗಾಲಯವಿದು. ಒಬ್ಬರಿಂದ ಒಬ್ಬರು ಪ್ರತಿಭಾವಂತ ಕಲಾವಿದರು. ಅಭಿನಯ, ನಿರ್ದೇಶನ, ಸಂಗೀತ, ಗಾಯನ, ವಸ್ತ್ರಾಲಂಕಾರ, ಸಂಘಟನೆ, ಕಾರ್ಯಕ್ರಮಗಳ ಆಯೋಜನೆ, ರಂಗ ಪ್ರವಾಸ ಸಹಿತ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮಾಡಬಲ್ಲ ಸಾಮರ್ಥ್ಯ ಇರುವವರು. ಅಂತವರ ಪಡೆಯೊಂದಿಗೆ ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ರಂಗಾಯಣ 1989ರಲ್ಲಿ ಆರಂಭಗೊಂಡು ಈಗಲೂ ಇನ್ನಷ್ಟು ಹೊಸ ಪ್ರಯೋಗ, ಪ್ರತಿಭೆಗಳ ಮೂಲಕ ಗಮನ ಸೆಳೆದಿದೆ. 34 ಕಲಾವಿದರಲ್ಲಿ ಕೆಲವರು ಕಾಲವಾಗಿದ್ದರೆ, ಬಹುತೇಕರು ನಿವೃತ್ತರಾಗಿದ್ದಾರೆ. ಇನ್ನು ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಚಿತ್ರರಂಗದಲ್ಲಿ ಈಗಲೂ ಸಕ್ರಿಯವಾಗಿದ್ದಾರೆ.

ಮೂವರ ಹಾದಿ ಹೀಗಿದೆ

ಮಂಡ್ಯ ಜಿಲ್ಲೆಯವರಾದ ರಮೇಶ್‌, ತುಮಕೂರು ಜಿಲ್ಲೆಯ ಕೆ.ಸಿ.ರಘುನಾಥ್, ಸಾಗರದ ಅರುಣ್‌ ಮೂವರೂ ಇದೇ ರಂಗಾಯಣದಿಂದ ಬಂದವರು. ರಂಗಾಯಣ ಆರಂಭಗೊಂಡು ಆರೇಳು ವರ್ಷಗಳಲ್ಲೇ ತಮ್ಮ ಪ್ರತಿಭೆ ಮೂಲಕ ಚಿತ್ರರಂಗ ಪ್ರವೇಶಿಸಿದವರು. ಅದರಲ್ಲಿ ಮಂಡ್ಯ ರಮೇಶ್‌ ಹಾಗೂ ಅರುಣ್‌ ಸಾಗರ್‌ ಅವರು ಜನುಮದ ಜೋಡಿ ಚಿತ್ರದ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡವರು. ಆನಂತರ ರಘು ಕೂಡ ಚಿತ್ರರಂಗದತ್ತ ಮುಖ ಮಾಡಿ ರಂಗಾಯಣ ರಘು ಆಗಿ ಈಗ ದೊಡ್ಡ ಹೆಸರು ಮಾಡಿದ್ದಾರೆ. ಹುಲುಗಪ್ಪ ಕಟ್ಟಿಮನಿ, ಶಶಿಕಲಾ, ಜಗದೀಶ್‌ ಮನೆವಾರ್ತೆ, ರಾಮು ಸಹಿತ ಹಲವರೂ ಚಿತ್ರರಂಗದಲ್ಲಿ ಕಾಣಿಸಿಕೊಂಡರೂ ಬಹಳ ದಿನ ಉಳಿಯಲಿಲ್ಲ. ಮೂವರು ಮಾತ್ರ ಗಟ್ಟಿ ನೆಲೆ ಕಂಡುಕೊಂಡವರು.

ಮಂಡ್ಯ ರಮೇಶ್‌, ರಘು ಹಾಗೂ ಅರುಣ್‌ ಸಾಗರ್‌ ಮೂವರು ಕಾರಂತರ ಗರಡಿಯಲ್ಲಿಯೇ ಪಳಗಿದವರು. ವಿಭಿನ್ನ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದವರು. ನವಿರಾದ ಹಾಸ್ಯದ ಜತೆಗೆ ವಿಲನ್‌ ಪಾತ್ರಗಳಲ್ಲೂ ಕಾಣಿಸಿಕೊಂಡು ಸೈ ಎನ್ನಿಸಿಕೊಂಡವರು. ನಾಯಕನಾಗುವ ಅವಕಾಶ ಬಂದರೂ ಮೂವರೂ ಪೋಷಕ ಪಾತ್ರಗಳಲ್ಲಿಯೇ ಗಟ್ಟಿಯಾಗಿ ಉಳಿದವರು.

ಮಂಡ್ಯ ರಮೇಶ್‌ ಈವರೆಗೂ 345ಕ್ಕೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಧಾರಾವಾಹಿಗಳಲ್ಲೂ ಅಭಿನಯಿಸುತ್ತಾರೆ. ಹಿರಿ- ಕಿರಿ ತೆರೆಗಳ ಜತೆಯಲ್ಲಿಯೇ ಅವರಿಗೆ ಈಗಲೂ ರಂಗಭೂಮಿಯೇ ಕಾಯಕ. ಅಲ್ಲಿ ದುಡಿದಿದ್ದನ್ನು ನಟನ ಎನ್ನುವ ರಂಗಸಂಸ್ಥೆ ಬೆಳೆಸಲು ಬಳಸಿದ್ದಾರೆ. ಕಲಾವಿದರಾಗಿರುವ ಪತ್ನಿ ಸರೋಜ ಹೆಗಡೆ, ಪುತ್ರಿ ದಿಶಾ ಹಾಗೂ ತಂಡದೊಂದಿಗೆ ನಟನ ಶಾಲೆ, ದೊಡ್ಡ ರಂಗಮಂದಿರವನ್ನೂ ನಿರ್ಮಿಸಿ ನಿರಂತರ ಚಟುವಟಿಕೆಗಳನ್ನು ರಮೇಶ್‌ ನಡೆಸಿಕೊಂಡು ಬಂದಿದ್ದಾರೆ.

ಸಕ್ರಿಯ ರಂಗಾಯಣ ರಘು

200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಂಗಾಯಣ ರಘು ಈಗಲೂ ಚಿತ್ರರಂಗದಲ್ಲಿ ಸಕ್ರಿಯರು. ಪತ್ನಿ ಮಂಗಳಾ ಅವರ ಜತೆಗೆ ರಂಗ, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ರಂಗಚಟುವಟಿಕೆಗಳಲ್ಲೂ ಕಾಣಿಸಿಕೊಳ್ಳುತ್ತಾರೆ.

ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡ ಅರುಣ್‌ ಸಾಗರ್‌ ಕಲಾ ನಿರ್ದೇಶಕರಾಗಿ ಜನಪ್ರಿಯರು. ಬಿಗ್‌ ಬಾಸ್‌ ಸಹಿತ ಹಲವು ಟಿವಿ ಶೋಗಳಲ್ಲೂಗಮನ ಸೆಳೆದಿದ್ದಾರೆ. ಚಿತ್ರರಂಗದ ನಂಟು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದಾರೆ ಅರುಣ್‌ ಸಾಗರ್.‌

ಅವಕಾಶಗಳನ್ನು ಬಳಸಿಕೊಂಡೆವು..

ಕಲಾವಿದರಾಗುವ ಅವಕಾಶ ನಮಗೆ ಸಿಕ್ಕಿತು. ಅದೂ ಬಿ.ವಿ.ಕಾರಂತರ ಗರಡಿಯಲ್ಲಿ ಪಳಗಿದ ನಾವು ನಿಜಕ್ಕೂ ಅದೃಷ್ಟವಂತರು. ಮುಂದೆ ಚಿತ್ರರಂಗ ಸೇರುವ ಅವಕಾಶ ಬಂದಿತು. ಮೂರು ದಶಕಕ್ಕೂ ಮಿಗಿಲಾಗಿ ಕಲಾವಿದರಾಗಿ ಈಗಲೂ ಭಿನ್ನ ಆಯಾಮಗಳಲ್ಲಿ ಕಾಯಕಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ರಂಗಾಯಣ ರಘು, ಅರುಣ್‌ ಸಾಗರ್‌ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ರಂಗಾಯಣದಲ್ಲಿ ಕೆಲಸ ಮಾಡಿರುವ ಎಲ್ಲಾ ಕಲಾವಿದರು ಹಾಗೆಯೇ. ನಮ್ಮೆಲ್ಲರಿಗೂ ಚಿತ್ರರಂಗ, ಕಿರುತೆರೆ, ರಂಗಭೂಮಿ ಎಲ್ಲೆಡೆಯೂ ಅವಕಾಶಗಳು ಇದ್ದೇ ಇದೆ. ಅದನ್ನು ಬಳಸಿಕೊಂಡಿದ್ದೇವೆ. ಈ ಪಯಣದಲ್ಲಿ ಹಿಂದಿರುಗಿ ನೋಡಿದಾಗ ಇಷ್ಟೆಲ್ಲಾ ಸಾಧ್ಯವಾಯಿತೇ ಎನ್ನುವ ಭಾವ ಮೂಡುತ್ತದೆ ಎಂದು ತಮ್ಮ ದಿನಗಳನ್ನು ಮಂಡ್ಯ ರಮೇಶ್‌ ನೆನಪಿಸಿಕೊಳ್ಳುತ್ತಾರೆ.

Whats_app_banner