ಒಟಿಟಿಗೆ ಬಂತು ನೈಜ ಘಟನೆ ಆಧಾರಿತ ಮಂಸೋರೆ ನಿರ್ದೇಶನದ 19.20.21 ಸಿನಿಮಾ; ಆದ್ರೆ ಅದೊಂದು ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ ಸಿನಿಮಾಭಿಮಾನಿಗಳು
2023 ರಲ್ಲಿ ತೆರೆ ಕಂಡಿದ್ದ ಮಂಸೋರೆ ನಿರ್ದೇಶನದ 19.20.21 ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ನೈಜ ಘಟನೆ ಆಧಾರಿತ ಈ ಸಿನಿಮಾ ನೋಡಲು ಒಟಿಟಿ ಬಳಕೆದಾರರು 99 ರೂ. ಪಾವತಿಸಬೇಕಿದೆ. ನಕ್ಸಲರ ಜೊತೆ ಸಂಬಂಧ ಹೊಂದಿರುವ ಆರೋಪ ಹೊತ್ತು ಬಂಧನಕ್ಕೊಳಗಾದ ವಿದ್ಯಾರ್ಥಿಯ ಜೀವನದ ಕಥೆ ಈ ಚಿತ್ರದಲ್ಲಿದೆ.
ಊರಿಗೆ ಬಂದವಳು ನೀರಿಗೆ ಬಾರದೆ ಇರುವಳಾ? ಎಂಬ ಗಾದೆ ಮಾತಿನಂತೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗದೆ ಇರುವುದಾ ಎನ್ನುವಂತಾಗಿದೆ. ಚಿತ್ರಮಂದಿರದಲ್ಲಿ ಕುಳಿತು ಬೆಳ್ಳಿ ತೆರೆಯಲ್ಲಿ ಸಿನಿಮಾ ನೋಡುವ ಮಜಾವೇ ಬೇರೆ ಅನ್ನೋದು ಬಹಳ ಜನರ ಅಭಿಪ್ರಾಯ, ಆದರೆ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಇಷ್ಟಪಡುವವರೂ ಇದ್ದಾರೆ.
2023 ಮಾರ್ಚ್‌ನಲ್ಲಿ ತೆರೆ ಕಂಡಿದ್ದ ಸಿನಿಮಾ
ಇದೀಗ ಕನ್ನಡದ ಮತ್ತೊಂದು ಸೂಪರ್ ಹಿಟ್ ಸಿನಿಮಾ ಒಟಿಟಿಗೆ ಬಂದಿದೆ. ಒಂದೂವರೆ ವರ್ಷದ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದರೂ ಕಮರ್ಷಿಯಲ್ ಆಗಿ ಯಶಸ್ಸು ಕಾಣದ 19.20.21 ಸಿನಿಮಾ ಈಗ ಮನೆಯಲ್ಲೇ ಕುಳಿತು ನೋಡಲು ಲಭ್ಯವಿದೆ. ಮಂಸೋರೆ ನಿರ್ದೇಶನದ ಈ ಸಿನಿಮಾ ನೋಡಲು ಒಟಿಟಿ ಬಳಕೆದಾರರು ಕಾಯುತ್ತಿದ್ದಾರೆ. ಆದರೆ ಸಿನಿಮಾ ನೋಡಲು 99 ರೂ. ಪಾವತಿಸಬೇಕಾಗಿರುವುದರಿಂದ ಎಲ್ಲರೂ ಈ ಸಿನಿಮಾ ನೋಡಲು ಸಾಧ್ಯವಿಲ್ಲ.
ಕನ್ನಡ ಕ್ರೈಂ ಡ್ರಾಮಾ ಕಥೆ ಆಧರಿಸಿದ 19.20.21 ಸಿನಿಮಾ ವರ್ಷ ಮಾರ್ಚ್ 3 ರಂದು ಬಿಡುಗಡೆಯಾಯಿತು. ಈ ಚಿತ್ರವು IMDb ನಲ್ಲಿ 9.2 ರೇಟಿಂಗ್ ಪಡೆದುಕೊಂಡಿದೆ. ಆಗಸ್ಟ್ 27ರಿಂದ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆಗುತ್ತಿದೆ. 19.20.21 ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ಈ ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದ ಭಾರೀ ಕುತೂಹಲ ಕೆರಳಿಸಿತ್ತು. ಪೋಸ್ಟರ್‌ಗಳು, ಟ್ರೇಲರ್ ಕೂಡಾ ಸಾಕಷ್ಟು ಗಮನ ಸೆಳೆದಿತ್ತು.
ನೈಜ ಘಟನೆ ಆಧಾರಿತ 19.20.21 ಚಿತ್ರ
ಸುಮಾರು ಎರಡು ದಶಕಗಳ ಕಾಲ ಕರಾವಳಿಯ ಸಮುದಾಯವೊಂದು ಅನುಭವಿಸಿದ ಕಷ್ಟ ಹಾಗೂ ಅದರಿಂದ ಹೊರ ಬರಲು ನಡೆಸಿದ ಹೋರಾಟವೇ ಈ ಸಿನಿಮಾ ಕಥೆಗೆ ಸ್ಪೂರ್ತಿಯಾಗಿದೆ. ದೌರ್ಜನ್ಯ ಅನುಭವಿಸುತ್ತಾ, ನ್ಯಾಯಯುತ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ಮಲೆಕುಡಿಯರ ಕಥೆಯನ್ನು ನಿರ್ದೇಶಕ ಮಂಸೋರೆ ಸಿನಿಮಾ ರೂಪದಲ್ಲಿ ತೆರೆಗೆ ತಂದಿದ್ದಾರೆ. ಒಟ್ಟಾರೆ ಹೇಳುವುದಾದರೆ ಕನ್ನಡದ ಈ ಕ್ರೈಂ ಡ್ರಾಮಾ, ನಕ್ಸಲರ ಜೊತೆ ಸಂಬಂಧ ಹೊಂದಿರುವ ಆರೋಪ ಹೊತ್ತು ಬಂಧನಕ್ಕೊಳಗಾದ ವಿದ್ಯಾರ್ಥಿಯ ಜೀವನದ ಕಥೆಯೊಂದಿಗೆ ಆರಂಭವಾಗುತ್ತದೆ.
19.20.21 ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಂಡಿರಲಿಲ್ಲ. ಇದೀಗ ಒಟಿಟಿಯಲ್ಲಿ ಈ ಸಿನಿಮಾ ಯಾವ ರೀತಿ ಪ್ರತಿಕ್ರಿಯೆ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು. ಚಿತ್ರವನ್ನು ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿ, ದೇವರಾಜ್ ಆರ್ ನಿರ್ಮಾಣ ಮಾಡಿದ್ದಾರೆ. ಮಂಸೋರೆ, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಶೃಂಗ ಬಿವಿ, ರಾಜೇಶ್ ನಟರಂಗ, ಬಾಲಾಜಿ ಮನೋಹರ್, ಅವಿನಾಶ್, ಕೃಷ್ಣ ಹೆಬ್ಬಾಳೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.