ಗಳಿಕೆ ವಿಚಾರದಲ್ಲಿ ಎರಡನೇ ದಿನ ‘ಮಾರ್ಟಿನ್‌’ ಗೆದ್ದನಾ, ಸೋತನಾ? ಇಲ್ಲಿಯವರೆಗೂ ನಿರ್ಮಾಪಕರ ಬೊಕ್ಕಸಕ್ಕೆ ಬಂದಿದ್ದೆಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  ಗಳಿಕೆ ವಿಚಾರದಲ್ಲಿ ಎರಡನೇ ದಿನ ‘ಮಾರ್ಟಿನ್‌’ ಗೆದ್ದನಾ, ಸೋತನಾ? ಇಲ್ಲಿಯವರೆಗೂ ನಿರ್ಮಾಪಕರ ಬೊಕ್ಕಸಕ್ಕೆ ಬಂದಿದ್ದೆಷ್ಟು?

ಗಳಿಕೆ ವಿಚಾರದಲ್ಲಿ ಎರಡನೇ ದಿನ ‘ಮಾರ್ಟಿನ್‌’ ಗೆದ್ದನಾ, ಸೋತನಾ? ಇಲ್ಲಿಯವರೆಗೂ ನಿರ್ಮಾಪಕರ ಬೊಕ್ಕಸಕ್ಕೆ ಬಂದಿದ್ದೆಷ್ಟು?

ಧ್ರುವ ಸರ್ಜಾ ಅಭಿನಯದ ಪ್ಯಾನ್‌ ಇಂಡಿಯಾ ಮಾರ್ಟಿನ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಡಿಸೆಂಟ್‌ ಕಲೆಕ್ಷನ್‌ ಮುಂದುವರಿಸಿದೆ. ಅಕ್ಟೋಬರ್‌ 11ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ಎರಡು ದಿನ ಗಳಿಸಿದ್ದೆಷ್ಟು? ಇಲ್ಲಿದೆ ವಿವರ.

ಬಾಕ್ಸ್‌ ಆಫೀಸ್‌ನಲ್ಲಿ ‘ಮಾರ್ಟಿನ್‌’ ಗೆದ್ದನಾ, ಸೋತನಾ?
ಬಾಕ್ಸ್‌ ಆಫೀಸ್‌ನಲ್ಲಿ ‘ಮಾರ್ಟಿನ್‌’ ಗೆದ್ದನಾ, ಸೋತನಾ?

Martin Box Ofice Collection day 2: ಬಹು ನಿರೀಕ್ಷೆಯೊಂದಿಗೆ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಇನ್ನೂ ಹಲವು ಭಾಷೆಗಳಲ್ಲಿ ಅಕ್ಟೋಬರ್‌ 11ರಂದು ಬಿಡುಗಡೆ ಆಗಿತ್ತು ಮಾರ್ಟಿನ್‌ ಸಿನಿಮಾ. ಸದ್ಯ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತಮ್ಮ ಓಟವನ್ನು ಮುಂದುವರಿಸಿದೆ. ಕರ್ನಾಟಕ ಮಾತ್ರವಲ್ಲದೆ, ಪರಭಾಷಿಕರನ್ನು ಈ ಸಿನಿಮಾ ಸೆಳೆದುಕೊಂಡಿದೆ. ಮಿಶ್ರ ವಿಮರ್ಶೆ ಪಡೆದ ಮಾರ್ಟಿನ್‌ ಕಲೆಕ್ಷನ್‌ ವಿಚಾರದಲ್ಲಿ ಮುಂದಡಿ ಇರಿಸಿದನಾ? ಈ ಸಿನಿಮಾ ಎರಡು ದಿನಗಳ ಅವಧಿಯಲ್ಲಿ ಗಳಿಸಿದ್ದೆಷ್ಟು? ಬಾಕ್ಸ್‌ ಆಫೀಸ್‌ನಲ್ಲಿ ಮಾರ್ಟಿನ್‌ ಮೇನಿಯಾ ಹೇಗಿದೆ? ಇಲ್ಲಿದೆ ವಿವರ.

ಧ್ರುವ ಸರ್ಜಾ ಮಾರ್ಟಿನ್‌ ಸಿನಿಮಾ ಬಿಡುಗಡೆಯಾದಾಗಿನಿಂದ ಮುಂಗಡ ಟಿಕೆಟ್‌ ಬುಕಿಂಗ್‌ನಲ್ಲಿ ಹೊಸ ಅಲೆಗಳನ್ನು ಎಬ್ಬಿಸುತ್ತಿದೆ. ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ, ಅಕ್ಟೋಬರ್‌ 11ರಂದು ಬಾಲಿವುಡ್‌ನ ಜಿಗ್ರಾ ಮತ್ತು ತಮಿಳಿನ ವೆಟ್ಟೈಯನ್‌ ಸಿನಿಮಾಗಳಿಗೆ ಕಠಿಣ ಸ್ಪರ್ಧೆಯೊಡ್ಡಿತ್ತು. ಆ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ, ಕಲೆಕ್ಷನ್‌ ವಿಚಾರದಲ್ಲಿ ಧ್ರುವ ಸಿನಿಮಾ ಹಿಂದೆ ಉಳಿದಿದೆ. ಮೊದಲ ದಿನ Sacnilk ವರದಿ ಪ್ರಕಾರ 6.70 ಕೋಟಿ ಕಲೆಕ್ಷನ್‌ ಮಾಡಿತ್ತು. ನಿರೀಕ್ಷೆ ಆಕಾಶದೆತ್ತರಕ್ಕಿದ್ದ ಈ ಸಿನಿಮಾ ಮೊದಲ ದಿನವೇ ಹೇಳಿಕೊಳ್ಳುವ ಗಳಿಕೆ ಕಾಣಲಿಲ್ಲ. ಹಾಗಾದರೆ, ಎರಡನೇ ದಿನದ ಕಥೆ ಏನು?‌

ಮೊದಲ ದಿನ 6 ಪ್ಲಸ್‌ ಕೋಟಿ

ಮೊದಲ ದಿನ 6 ಕೋಟಿಗೂ ಅಧಿಕ ಗಳಿಕೆ ಕಂಡಿದ್ದ ಈ ಸಿನಿಮಾ ಎರಡನೇ ದಿನವಾದ ಶನಿವಾರ ಹೆಚ್ಚಿನ ಕಲೆಕ್ಷನ್‌ ಮಾಡಿತೇ? ಬಾಕ್ಸ್‌ ಆಫೀಸ್‌ನಲ್ಲಿ ಮಾರ್ಟಿನ್‌ ಅಬ್ಬರಿಸಿತೇ? ಈ ಪ್ರಶ್ನೆಗೆ ಉತ್ತರ ಕೊಂಚ ಬೇಸರ ತರಿಸಬಹುದು. ಶುಕ್ರವಾರಕ್ಕಿಂತ ಹೆಚ್ಚಿನ ಕಲೆಕ್ಷನ್‌ ಶನಿವಾರ ಆಗಬೇಕಿತ್ತು. ವಾರಾಂತ್ಯದ ಹಿನ್ನೆಲೆಯಲ್ಲಿ ದುಪ್ಪಟ್ಟು ಗಳಿಕೆ ಕಾಣಬೇಕಿತ್ತು ಮಾರ್ಟಿನ್‌. ಆದರೆ, ಎರಡನೇ ದಿನ ಕೇವಲ 5 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಗಳಿಕೆಯಲ್ಲಿ ಇಳಿಕೆ ಕಂಡಿದೆ ಈ ಸಿನಿಮಾ!

ಎರಡು ದಿನದಲ್ಲಿ 10 ಕೋಟಿ ದಾಟಿದ ಮಾರ್ಟಿನ್

ಕನ್ನಡ, ಬೆಂಗಾಲಿ, ಹಿಂದಿ, ತಮಿಳು, ತೆಲುಗು, ಕೊರಿಯನ್, ಅರೇಬಿಕ್, ಚೈನೀಸ್, ಸ್ಪ್ಯಾನಿಷ್, ರಷ್ಯನ್, ಜಪಾನೀಸ್ ಮತ್ತು ಮಲಯಾಳಂ ಭಾಷೆಗಳಿಂದ ಒಟ್ಟಾರೆಯಾಗಿ 11.70 ಕೋಟಿ ರೂ. ಗಳಿಸಿದೆ ಮಾರ್ಟಿನ್‌ ಸಿನಿಮಾ. ಈ ಸಿನಿಮಾಕ್ಕೆ ಪ್ರೇಕ್ಷಕರ ಆಗಮನ ಯಾವ ಭಾಷೆಯಲ್ಲಿ ಹೇಗಿದೆ ಎಂಬುದನ್ನು ನೋಡಿದರೆ, ಎರಡನೇ ದಿನದಲ್ಲಿ ಕನ್ನಡದಲ್ಲಿ 49.28ರಷ್ಟು ಆಕ್ಯುಪೆನ್ಸೀ ಹೊಂದಿದರೆ, ಹಿಂದಿಯಲ್ಲಿ 20.09, ತೆಲುಗಿನಲ್ಲಿ 18.77 ಆಕ್ಯುಪೆನ್ಸೀ ಪಡೆದಿದೆ.

ವೆಟ್ಟೈಯನ್‌, ಜಿಗ್ರಾ ಗಳಿಕೆ ಹೇಗಿದೆ?

ಅಕ್ಟೋಬರ್‌ 11ರಂದು ಆಲಿಯಾ ಭಟ್‌ ನಟನೆಯ ಜಿಗ್ರಾ ಸಿನಿಮಾ ಸಹ ತೆರೆಕಂಡಿದೆ. ಅದಕ್ಕೂ ಒಂದು ದಿನದ ಮೊದಲು ರಜನಿಕಾಂತ್‌ ವೆಟ್ಟೈಯನ್‌ ಸಿನಿಮಾ ಕೂಡ ರಿಲೀಸ್‌ ಆಗಿತ್ತು. ಇದೀಗ ಆಲಿಯಾ ಭಟ್‌ ನಟನೆಯ ಜಿಗ್ರಾ ಸಿನಿಮಾ ಮೊದಲ ಎರಡು ದಿನಗಳ ಅವಧಿಯಲ್ಲಿ 11.30 ಕೋಟಿ ಗಳಿಕೆ ಕಂಡಿದೆ. ವಾಸನ್‌ ಬಾಲ ನಿರ್ದೇಶನದ ಈ ಸಿನಿಮಾದಲ್ಲಿ ಆಲಿಯಾ ಭಟ್‌ ಜತೆಗೆ ವೇದಾಂಗ್‌ ರೈನಾ, ಆದಿತ್ಯ ನಂದಾ, ರಾಹುಲ್‌ ರವೀಂದ್ರನ್‌, ಮನೋಜ್ ಪವಾ ಸೇರಿ ಇನ್ನೂ ಹಲವರು ನಟಿಸಿದ್ದಾರೆ. ಅದೇ ರೀತಿ, ರಜನಿಕಾಂತ್‌ ವೆಟ್ಟೈಯನ್‌ ಸಿನಿಮಾ ಸಹ 100 ಕೋಟಿಯ ಸನಿಹಕೆ ಬಂದಿದೆ. ಮೊದಲ ದಿನ 31 ಕೋಟಿ, ಎರಡನೇ ದಿನ 24 ಕೋಟಿ ಮತ್ತು ಶನಿವಾರ 26 ಕೋಟಿ ಕಲೆಕ್ಷನ್‌ ಮಾಡಿದೆ. ಈ ಮೂಲಕ ಕೇವಲ ಮೂರೇ ದಿನದ ಅವಧಿಯಲ್ಲಿ 81.8 ಕೋಟಿ ಕಲೆಕ್ಷನ್‌ ಮಾಡಿದೆ.