ನನಗೂ ಒಬ್ಬಳು ಹೆಣ್ಣು ಮಗಳಿದ್ದಾಳೆ, ಅತ್ಯಾಚಾರಿಗಳನ್ನು ನಡು ರಸ್ತೆಯಲ್ಲಿ ಸುಟ್ಟರೂ ಕಡಿಮೆಯೇ- ನಟ ಧ್ರುವ ಸರ್ಜಾ ಆಕ್ರೋಶ
Actor Dhruva Sarja: ಭಾರತದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ವಿರುದ್ಧ ಕನ್ನಡ ನಟ ಧ್ರುವ ಸರ್ಜಾ ಧ್ವನಿ ಎತ್ತಿದ್ದಾರೆ. ಪ್ರತಿಮನೆಯಲ್ಲೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಕಲಿಸಿಕೊಡಬೇಕು, ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಲು ತಿಳಿಸಬೇಕು ಎಂದಿದ್ದಾರೆ.
ಬೆಂಗಳೂರು, ಕೊಲ್ಕೊತ್ತಾ, ಡೆಹಾಡ್ರೂನ್ ಮುಂತಾದ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೇ ಸಂದರ್ಭದಲ್ಲಿ ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾ ನಾಯಕ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. "ಇಂತಹ ಅತ್ಯಾಚಾರಿಗಳಿಗೆ ಯಾವುದೇ ಶಿಕ್ಷೆ ನೀಡಿದರೂ ಕಡಿಮೆಯೇ. ಇವರನ್ನು ನಡುರಸ್ತೆಯಲ್ಲಿ ಸುಟ್ಟರೂ ಕಡಿಮೆಯೇ. ನಾರಿಯರನ್ನು ಪೂಜ್ಯ ಸ್ಥಾನದಲ್ಲಿ ನೋಡುವಂತಹ ಭಾರತದಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಬೇಸರದ ಸಂಗತಿ" ಎಂದು ಆಕ್ಷನ್ ಫ್ರಿನ್ಸ್ ಧ್ರುವ ಸರ್ಜಾ ಹೇಳಿಕೆ ನೀಡಿದ್ದಾರೆ.
"ಹೌದು ನಾನು ಮಾರ್ಟಿನ್ ಪ್ರಮೋಷನ್‌ನಲ್ಲಿದ್ದೇನೆ. ಒಂದು ನಿಮಿಷ ಮಾರ್ಟಿನ್ ಪಕ್ಕದಲ್ಲಿ ಇಡೋಣ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಹದಿನಾರು ನಿಮಿಷಕ್ಕೊಂದು ರೇಪ್ ನಡೆಯುತ್ತಿದೆ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂದು ಹೇಳುತ್ತಾರೆ. ಎಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಇರೋದಿಲ್ಲ ಅಲ್ಲಿ ಭಗವಂತನೇ ಇರೋದಿಲ್ಲ ಅಂತೆ. ನಮ್ಮದು ರಾಮ ಭೂಮಿ. ಕೆಲವು ಬಾಸ್ಟರ್ಡ್ಸ್ ಮಾಡೋ ಕೆಲಸದಿಂದ ಭಾರತಕ್ಕೆ ಕೆಟ್ಟ ಹೆಸರು ಬರ್ತಿದೆ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.
"ಹೆಣ್ಣು ಮಕ್ಕಳಿಗೆ ಮಾತ್ರ ಹೀಗೆ ಇರಿ, ಹಾಗೇ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳ್ತಾರೆ. ಗಂಡು ಮಕ್ಕಳಿಗೂ ಕಂಪಲ್ಸರಿ ಮೂರು ವಿಷಯಗಳನ್ನು ಹೇಳಿಕೊಡಲೇಬೇಕು. ಹೇಗೆ ಹೆಣ್ಣುಮಕ್ಕಳನ್ನು ಪ್ರೊಟೆಕ್ಟ್ ಮಾಡಬೇಕು, ಹೇಗೆ ಹೆಣ್ಣು ಮಕ್ಕಳಿಗೆ ಸಪೋರ್ಟ್ ಮಾಡಬೇಕು ಮತ್ತು ಹೇಗೆ ಹೆಣ್ಣು ಮಕ್ಕಳಿಗೆ ಗೌರವ ನೀಡಬೇಕು ಎಂದು ಗಂಡುಮಕ್ಕಳಿಗೆ ಪ್ರತಿಮನೆಯಲ್ಲೂ ಹೇಳಿಕೊಡಲೇಬೇಕು" ಎಂದು ಧ್ರುವ ಸರ್ಜಾ ಅಭಿಪ್ರಾಯಪಟ್ಟಿದ್ದಾರೆ.
"ಪ್ರತಿಯೊಬ್ಬರ ಮನೆಯಲ್ಲೂ ಹೇಳಿಕೊಡಬೇಕು. ಇಂತಹ ರೇಪಿಸ್ಟ್‌ಗಳಿಗೆ ನಿಜವಾಗಿಯೂ ಸಿಕ್ಕಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆ ದೊರಕಬೇಕು ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಅವರಿಗೆ ಯಾವ ರೀತಿಯ ಶಿಕ್ಷೆ ಕೊಟ್ಟರೂ ಆ ಶಿಕ್ಷೆ ತೃಪ್ತಿ ತರುವಂತಹದ್ದಲ್ಲ. ಇಂತವರನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಜೀವಂತ ಸುಟ್ಟು ಹಾಕಿದ್ರೂ ಕಡಿಮೆಯೇ. ಇಂತಹ ಜನರಿಗೆ ಭಗವಂತ ಒಳ್ಳೆಯದು ಮಾಡದೆ ಇರಲಿ ಅಂತ ಕೇಳಿಕೊಳ್ತಿನಿ" ಎಂದರು.
"ನಾನು ವಿಡಿಯೋ ಮಾಡುವ ಉದ್ದೇಶ ಏನೆಂದರೆ, ನನಗೂ ಮನೆಯಲ್ಲಿ ಹೆಣ್ಣು ಮಗುವಿದೆ. ಯಾವುದೋ ಮನೆಯಲ್ಲಿ ಅನ್ಯಾಯವಾಗಿದೆ ಎಂದಾಗ ನಿಜವಾಗಿಯೂ ನಾವೆಲ್ಲರೂ ಅವರಿಗೆ ಬೆಂಬಲ ನೀಡಬೇಕು. ದಯವಿಟ್ಟು ಎಲ್ಲರೂ ಧ್ವನಿ ಎತ್ತಿ" ಎಂದು ನಟ ಧ್ರುವ ಸರ್ಜಾ ಕೇಳಿಕೊಂಡಿದ್ದಾರೆ.
ಅಭಿಮಾನಿಗಳ ಪ್ರತಿಕ್ರಿಯೆ
ಧ್ರುವ ಸರ್ಜಾ ವಿಡಿಯೋ ಸಂದೇಶಕ್ಕೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. "ಉತ್ತಮ ಸಂದೇಶ ಅಣ್ಣ" ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ನಾವು ಧ್ರುವ ಸರ್ಜಾ ಅಭಿಮಾನಿಗಳು ಅತ್ಯಾಚಾರಿಗಳ ವಿರುದ್ಧ ನಿಲ್ಲುತ್ತೇವೆ" "ಇಂತಹ ಕಾಮುಕರನ್ನು ಎನ್‌ಕೌಂಟರ್ ಮಾಡಬೇಕು" "ನಿಮ್ಮ ಬೆಂಬಲಕ್ಕೆ ನಾವಿದ್ದೇವೆ" ಎಂದೆಲ್ಲ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಿಭಾಗ