ಸತ್ತು ಹೋಗುತ್ತಿದ್ದೇವೆ ಎಂದು ತಂದೆತಾಯಿಗೆ ಸಂದೇಶ ಕಳುಹಿಸಿದ್ರು ನಟಿ ವೈಭವಿ ಶಾಂಡಿಲ್ಯ; ವಿಮಾನದ ಆ ಘಟನೆ ನೆನಪಿಸಿಕೊಂಡ ಮಾರ್ಟಿನ್ ಟೀಮ್
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಮಾರ್ಟಿನ್ ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮತ್ತು ಇತ್ತೀಚೆಗೆ ವಿಮಾನದ ತಾಂತ್ರಿಕ ತೊಂದರೆಯ ಸಮಯದಲ್ಲಿ ಉಂಟಾದ ಭಯವನ್ನು ನೆನಪಿಸಿಕೊಂಡಿದೆ.
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಚಿತ್ರತಂಡ ಕಳೆದ ತಿಂಗಳು ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಕರಾಳ ಅನುಭವಕ್ಕೆ ಒಳಗಾಗಿತ್ತು. ಮಾರ್ಟಿನ್ ಶೂಟಿಂಗ್ ಮುಗಿಸಿಕೊಂಡು ಜಮ್ಮು ಕಾಶ್ಮೀರದ ಶ್ರೀನಗರದಿಂದ ಬೆಂಗಳೂರಿಗೆ ವಾಪಸ್ ಬರುವ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ತಾಂತ್ರಿಕ ಸಮಸ್ಯೆ ತಿಳಿದ ತಕ್ಷಣ ಜಾಗೃತಗೊಂಡ ಪೈಲೆಟ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ್ದರು. ಬುಧವಾರ ನಡೆದ ಸುದ್ದಿಗೋಷ್ಠಿಯ ವೇಳೆ ಮಾರ್ಟಿನ್ ಚಿತ್ರತಂಡವು ಈ ಕರಾಳ ನೆನಪನ್ನು ನೆನಪಿಸಿಕೊಂಡಿದೆ. ಮಾರ್ಟಿ ನ್ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರ ಬಿಡುಗಡೆ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ.
ನಟಿ ವೈಭವಿ ಜೋರಾಗಿ ಅಳುತ್ತಿದ್ದರು
ವಿಮಾನ ತುರ್ತು ಭೂಸ್ಪರ್ಶ ಮಾಡಿದ ಸಂದರ್ಭ ಹೇಗಿತ್ತೆಂದು ಎಪಿ ಅರ್ಜುನ್ ಸ್ಮರಿಸಿದ್ದಾರೆ. ನಾವು ಹದಿನಾರು ಜನ 6.30 ಗಂಟೆಗೆ ಹೊರಟ ಫ್ಲೈಟ್‌ನಲ್ಲಿದ್ದೇವು. ನಾವು ಯಾರೂ ಅಂತಹ ಘಟನೆಯನ್ನು ಜೀವನದಲ್ಲಿ ನೋಡಿಲ್ಲ. ಸುಮಾರು 28 ನಿಮಿಷಕ್ಕೂ ಹೆಚ್ಚು ಸಮಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿದ್ದೇವು. ಅ ಅನುಭವ ಹೇಳಲು ಸಾಧ್ಯವಿಲ್ಲ. ಗಾಳಿಪಟದಂತೆ ವಿಮಾನ ಒಮ್ಮೊಮ್ಮೆ ಸಾವಿರಾರು ಅಡಿ ಕೆಳಕ್ಕೆ ಮೇಲಕ್ಕೆ ಹೋಗುತ್ತಿತ್ತು.
"ವಿಮಾನದಲ್ಲಿ ನನ್ನ ಪಕ್ಕ ಸ್ವಾಮಿ ಕುಳಿತಿದ್ದರು. ಪಕ್ಕದಲ್ಲಿ ನಾಯಕಿ ವೈಭವಿ ಇದ್ರು. ಎಲ್ಲರ ಕಣ್ಣಲ್ಲಿ ನೀರಿತ್ತು. ಎಲ್ಲರೂ ಭಯಗೊಂಡಿದ್ದರು. ತಾಂತ್ರಿಕ ತೊಂದರೆ ಕಾಣಿಸಿಕೊಂಡು ವಿಮಾನದಲ್ಲಿ ಏರುಪೇರು ಕಾಣಿಸಿಕೊಂಡಾಗ ಎಲ್ಲರಿಗೂ ಜೀವ ಭಯ ಕಾಡಿತ್ತು. ತಂದೆ ತಾಯಿಗೆ ನಟಿ ವೈಭವಿ "ನಾವು ಸತ್ತು ಹೋಗುತ್ತಿದ್ದೇವೆ. ಏನಾದರೂ ತಪ್ಪು ಮಾಡಿದ್ದರೆ ಕ್ಷಮಿಸಿ" ಎಂದು ಸಂದೇಶ ಕಳುಹಿಸಿ ಜೋರಾಗಿ ಅಳ್ತಾ ಇದ್ರು. ದೇವರ ದಯೆಯಿಂದ ನಾವು ಸುರಕ್ಷಿತವಾಗಿ ವಿಮಾನದಿಂದ ಇಳಿದೆವು. ನಮಗೆ ಇದು ಮರುಜನ್ಮ" ಎಂದು ಚಿತ್ರತಂಡ ಮಾಹಿತಿ ನೀಡಿದೆ.
ಪ್ರಚಾರಕ್ಕಾಗಿ ಹೇಳುತ್ತಿಲ್ಲ
ವಿಮಾನದ ತಾಂತ್ರಿಕ ತೊಂದರೆಯನ್ನು ಹೇಳಿ ಸಿನಿಮಾ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳುವ ವರ್ಗ ಆರಂಭವಾಗಿದೆ. ಆದರೆ, ನಮಗೆ ಅದರ ಅಗತ್ಯವಿಲ್ಲ ಎಂದು ಚಿತ್ರತಂಡ ತಿಳಿಸಿದೆ. "ನಮ್ಮ ಜೀವ ಕಳೆದುಕೊಳ್ಳೊತ್ತೇವೋ, ಬದುಕಿಸಿಕೊಳ್ಳುತ್ತೇವೋ ಎನ್ನುವುದನ್ನು ಪ್ರಚಾರ ಮಾಡಿ ಸಿನಿಮಾ ಪ್ರಮೋಷನ್ ಮಾಡುವ ಅಗತ್ಯ ಮಾರ್ಟಿನ್ ಸಿನಿಮಾಕ್ಕೆ ಇಲ್ಲ. ಏಕೆಂದರೆ, ನಮ್ಮ ತಂದೆತಾಯಿ ನಾವು ಮನೆಯಿಂದ ಹೊರಟಾಗ ಕ್ಷೇಮವಾಗಿ ಬರುತ್ತಾರೆ ಎಂದು ಕಾಯುತ್ತಾರೆ. ನಾವು ಸತ್ತೋಗ್ತ ಇದ್ದೀವಿ, ಬದುಕಿದ್ದೀವಿ ಎಂದೆಲ್ಲ ಪ್ರಚಾರ ಮಾಡುವ ಅಗತ್ಯ ಮಾರ್ಟಿನ್ ಸಿನಿಮಾಕ್ಕೆ ಇಲ್ಲ" ಎಂದು ಎಪಿ ಅರ್ಜುನ್ ಹೇಳಿದ್ದಾರೆ.
ಮಾರ್ಟಿನ್ ಸಿನಿಮಾಗೆ ಉದಯ್ ಮೆಹ್ತಾ ಬಂಡವಾಳ ಹೂಡಿದ್ದು ಎಪಿ ಅರ್ಜುನ್ ಆಕ್ಷನ್ ಕಟ್ ಹೇಳಿದ್ದಾರೆ. ರವಿವರ್ಮಾ, ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ನವಾಬ್ ಷಾ ಹಾಗೂ ಇನ್ನಿತರರು ನಟಿಸಿದ್ದಾರೆ. ಹೀಗಾಗಲೇ ಮಾರ್ಟಿನ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಿಸಿದೆ.