Matinee Movie: ಸದ್ಯದಲ್ಲೇ ಮ್ಯಾಟ್ನಿ ಸಿನಿಮಾ ರಿಲೀಸ್; ನೀನಾಸಂ ಸತೀಶ್- ರಚಿತಾ ರಾಮ್ ಜೋಡಿಯ ಚಿತ್ರ ಬಿಡುಗಡೆಗೆ ದಿನಗಣನೆ
Matinee Kannada Movie: ನೀನಾಸಂ ಸತೀಶ್, ರಚಿತಾ ರಾಮ್ ನಟನೆಯ ಮ್ಯಾಟ್ನಿ ಹೆಸರಿನ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಈ ಸಿನಿಮಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸೂಚನೆಯನ್ನು ಚಿತ್ರತಂಡ ನೀಡಿದೆ.

ಬೆಂಗಳೂರು: ನೀನಾಸಂ ಸತೀಶ್ ಎಂದಾಕ್ಷಣ ಅಯೋಗ್ಯ, ಕ್ವಾಟ್ಲೆ ಸತೀಶ, ಪೆಟ್ರೊಮ್ಯಾಕ್ಸ್, ಬ್ರಹ್ಮಚಾರಿ, ಲೂಸಿಯಾ, ಲವ್ ಇನ್ ಮಂಡ್ಯ ಮುಂತಾದ ಸಿನಿಮಾಗಳು ನೆನಪಿಗೆ ಬರಬಹುದು. 2018ರಲ್ಲಿ ಅಯೋಗ್ಯ ಸಿನಿಮಾ ತೆರೆಕಂಡ ಬಳಿಕ ಸತೀಶ್ ಎಲ್ಲೋದ್ರು ಎಂದು ಸಾಕಷ್ಟು ಜನರು ಕಾಯುತ್ತಿರಬಹುದು. ಇದೀಗ ನೀನಾಸಂ ಸತೀಶ್ ನಟನೆಯ ಚಿತ್ರವೊಂದು ತೆರೆ ಮೇಲೆ ಆಗಮಿಸಲು ಸಜ್ಜಾಗುತ್ತಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ನೀನಾಸಂ ಸತೀಶ್- ರಚಿತಾ ರಾಮ್ ನಟನೆಯ ಮ್ಯಾಟ್ನಿ ಸಿನಿಮಾ ರಿಲೀಸ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಯೋಗ್ಯ ಚಿತ್ರದ ತರುವಾಯ ಒಂದು ಸುದೀರ್ಘಾವಧಿಯ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ಚಿತ್ರ `ಮ್ಯಾಟ್ನಿ’. ಯಶಸ್ವೀ ಜೋಡಿಯಾಗಿ ಗುರುತಿಸಿಕೊಂಡಿರುವ ಸತೀಶ್ ಮತ್ತು ರಚಿತಾ ಮತ್ತೊಂದು ತೆರನಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿಯ ಬಿಡುಗಡೆ ದಿನಾಂಕದ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮ್ಯಾಟ್ನಿ ತೆರೆಗಾಣುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, ಎಫ್3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಆರಂಭದಿಂದ ಇಲ್ಲಿಯವರೆಗೂ ಪ್ರೇಕ್ಷಕರ ಆಸಕ್ತಿ ಸೆಳೆಯುತ್ತಾ ಸಾಗಿ ಬಂದಿದೆ. ಹಂತ ಹಂತವಾಗಿ ಒಂದಿಷ್ಟು ವಿಚಾರಗಳನ್ನು ತಲುಪಿಸುತ್ತಾ ಬಂದಿರುವ ಈ ಚಿತ್ರವೀಗ ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಸದ್ದೇ ಇಲ್ಲದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡಿರುವ ಮ್ಯಾಟ್ನಿಯ ಪ್ರಚಾರ ಕಾರ್ಯವೂ ಚಾಲೂ ಆಗುವ ಲಕ್ಷಣಗಳು ಕಾಣಿಸುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ವಿಶೇಷವಾದ, ಒಂದಕ್ಕೊಂದು ಭಿನ್ನವಾದ ಪಾತ್ರಗಳನ್ನೇ ನೀನಾಸಂ ಸತೀಶ್ ಒಪ್ಪಿಕೊಳ್ಳುತ್ತಾ ಬರುತ್ತಿದ್ದಾರೆ. ಅದರ ಭಾಗವೆಂಬಂತೆ ಕಾಣಿಸುತ್ತಿರುವ ಮ್ಯಾಟ್ನಿ ಮನಮೋಹಕ ಕಥೆಯ ಹೂರಣದೊಂದಿಗೆ ರೂಪಿಸಲ್ಪಟ್ಟಿದೆ ಎಂಬ ವಿಚಾರ ಕೂಡಾ ಈಗಾಗಲೇ ನಿಕ್ಕಿಯಾಗಿದೆ. ಒಂದು ಯಶಸ್ವೀ ಜೋಡಿ ಮತ್ತೊಂದು ಸಿನಿಮಾದಲ್ಲಿಯೂ ಜೊತೆಯಾದಾಗ ಸಹಜವಾಗಿಯೇ ಅದರತ್ತ ಒಂದಷ್ಟು ಕುತೂಹಲ ಮೂಡಿಕೊಳ್ಳುತ್ತೆ. ಅದರ ಜೊತೆ ಜೊತೆಗೇ ಮ್ಯಾಟ್ನಿ ತೆರೆಗಾಣೋದು ಯಾವಾಗ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಇದೀಗ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಮ್ಯಾಟ್ನಿ ಶೋ ನೋಡಬಹುದು.

ವಿಭಾಗ