Tatsama Tadbhava Review: ತನಿಖೆಯ ಹಾದಿಯಲ್ಲಿ ತಿರುಗುವ ತತ್ಸಮ ತದ್ಭವ; ಚಿತ್ರ ವಿಮರ್ಶೆ
ಪತಿ ಮಿಸ್ಸಿಂಗ್ ಅಂತ ಆರಿಕಾ ದೂರು ನೀಡುತ್ತಾಳೆ. ಇತ್ತ ಅದೇ ಪತಿಯ ಶವವೂ ಪತ್ತೆಯಾಗಿ ಇಡೀ ಕಥೆ ಮಹತ್ತರ ತಿರುವು ಪಡೆದುಕೊಳ್ಳುತ್ತದೆ. ಹಾಗಾದರೆ ಕೊಲೆ ಮಾಡಿದ್ದು ಯಾರು? ಹೀಗೆ ತತ್ಸಮ ತದ್ಭವ ಚಿತ್ರದ ಒಂದೊಂದೆ ಪದರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ.
Tatsama Tadbhava Review: ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ನಟನೆಯ ತತ್ಸಮ ತದ್ಭವ ಸಿನಿಮಾ ಚಿತ್ರಮಂದಿರಕ್ಕೆ ಆಗಮಿಸಿದೆ. ನಾಪತ್ತೆಯಾದ ಪತಿಯ ಹುಡುಕಾಟಕ್ಕಿಳಿಯುವ ಪತ್ನಿಗೆ ಎರದುರಾಗುವ ಒಂದಷ್ಟು ರೋಚಕ ತಿರುವುಗಳನ್ನೇ ಹದವಾಗಿ ಬೆರೆಸಿ, ನೋಡುಗರನ್ನು ಸೀಟಿನ ತುದಿಗೆ ತಂದು ಕೂರಿಸುವ ಗಟ್ಟಿತನ ಈ ಸಿನಿಮಾದಲ್ಲಿದೆ. ಚಿತ್ರ ನೋಡಿ ಹೊರ ಬಂದ ಪ್ರೇಕ್ಷಕ, ಹೊಸದೇನನ್ನೋ ನೋಡಿದ ಭಾವ ಮೂಡುವಂತೆ ಮಾಡಿಸುತ್ತದೆ ಈ ಚಿತ್ರ. ನೋಡುಗರಿಗೆ ಥ್ರಿಲ್ ಫೀಲ್ ಕೊಡಬೇಕೆಂಬ ನಿಟ್ಟಿನಲ್ಲಿಯೇ ನಿರ್ದೇಶಕರು ಕಥೆಯನ್ನು ಅಷ್ಟೇ ಕ್ಯೂರಿಯಸ್ ಆಗಿಯೇ ಪೋಣಿಸಿದ್ದಾರೆ.
ಇಡೀ ಸಿನಿಮಾ ಸಾಗುವುದು ಕಥಾನಾಯಕಿ ಆರಿಕಾ (ಮೇಘನಾ ರಾಜ್) ಮೇಲೆ. ಆಕೆಯ ಗಂಡ ಸಂಜಯ್ ನಾಪತ್ತೆ ಆಗಿರುತ್ತಾನೆ. ಆತನ ಹುಡುಕಾಟ, ಕೊಲೆ, ತನಿಖೆ ಹೀಗೆ ಹಲವು ವಿಚಾರಗಳು ಮುನ್ನೆಲೆಗೆ ಬಂದು ನಿಲ್ಲುತ್ತವೆ. ಸಿನಿಮಾ ಶುರುವಾದ ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೂ ಅಷ್ಟೇ ಬಿಗಿಯಾಗಿ ಸಿನಿಮಾ ಹೆಣೆದಿದ್ದಾರೆ ನಿರ್ದೇಶಕ ವಿಶಾಲ್ ಅತ್ರೇಯ. ಬೇಡದ ವಿಚಾರಗಳನ್ನು ಎಲ್ಲಿಯೂ ಹೆಚ್ಚುವರಿಯಾಗಿ ತುರುಕದೇ ನೋಡಿಸಿಕೊಂಡು ಹೋಗುತ್ತದೆ ತತ್ಸಮ ತದ್ಭವ ಸಿನಿಮಾ.
ಪತಿ ಮಿಸ್ಸಿಂಗ್ ಅಂತ ನಾಯಕಿ ದೂರು ನೀಡುತ್ತಾಳೆ. ಇತ್ತ ಅದೇ ಪತಿಯ ಶವವೂ ಪತ್ತೆಯಾಗಿ ಇಡೀ ಕಥೆ ಮಹತ್ತರ ತಿರುವು ಪಡೆದುಕೊಳ್ಳುತ್ತದೆ. ಹಾಗಾದರೆ ಕೊಲೆ ಮಾಡಿದ್ದು ಯಾರು? ಹೀಗೆ ಚಿತ್ರದ ಒಂದೊಂದೆ ಪದರಗಳು ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಆಯ್ದ ಕೆಲ ಸೀಮಿತ ಪಾತ್ರಗಳ ಮುಖಾಮುಖಿಯ ಜತೆಗೆ ಮಾತ್ರ ಸಿನಿಮಾ ಸಾಗುತ್ತದೆ. ತನಿಖೆ ಹಿನ್ನೆಲೆಯಲ್ಲಿ ಸಿನಿಮಾ ಮೂವ್ ಆಗುತ್ತಿರುವುದರಿಂದ, ಕ್ಷಣ ಕ್ಷಣಕ್ಕೂ ಒಂದಷ್ಟು ರೋಷಕತೆಯನ್ನು ನೋಡುಗನಿಗೆ ನೀಡುತ್ತ ಹೋಗುತ್ತದೆ. ಕಮರ್ಷಿಯಲ್ ಅಂಶಗಳ ಆಚೆಗೂ ಒಂದು ಕಥೆಯನ್ನೂ ಹೀಗೂ ಪ್ರಸೆಂಟ್ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಚಿತ್ರದ ನಿರ್ದೇಶಕ ವಿಶಾಲ್.
ಹಾಗಾದರೆ, ತತ್ಸಮ ತದ್ಭವ ಈ ಶೀರ್ಷಿಕೆಯ ಮರ್ಮವೇನು? ಈ ಪ್ರಶ್ನೆ ನಿಮ್ಮನ್ನು ಕಾಡಿದರೆ ಅದಕ್ಕೂ ಸಿನಿಮಾದಲ್ಲಿ ಉತ್ತರ ಒದಗಿಸಿದ್ದಾರೆ ನಿರ್ದೇಶಕರು. ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ನಟಿಸಿದ ಮೊದಲ ಚಿತ್ರವಿದು. ಎಂದಿನಂತೆ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾಕ್ಕೆ ಬೇಕಾದ ಗಾಂಭೀರ್ಯದ ನಟನೆಯನ್ನೇ ಮೇಘನಾ ನೀಡಿದ್ದಾರೆ. ಪೊಲೀಸ್ ಅಧಿಕಾರಿ ಅರವಿಂದ್ ಅಶ್ವತ್ಥಾಮನಾಗಿ ಪ್ರಜ್ವಲ್ ದೇವರಾಜ್ ಹೊಡಿ ಬಡಿ ಬಿಟ್ಟಾಕಿ, ಕ್ಲಾಸ್ ನಟನೆ ಮೂಲಕವೇ ಗಮನ ಸೆಳೆಯುತ್ತಾರೆ.
ಚಿತ್ರದ ಮತ್ತೊಂದು ಹೈಲೈಟ್ ಏನೆಂದರೆ, ನಿರ್ದೇಶಕರ ಗ್ರಿಪ್ಪಿಂಗ್ ನಿರೂಪಣೆ. ನೋಡುಗನಿಗೆ ಬೋರ್ ಹೊಡೆಸದಂತೆ, ಪ್ರತಿ ಅಂಶವನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಕಥೆಯ ಓಟಕ್ಕೆ ತಕ್ಕಂತೆ, ಪಾತ್ರಧಾರಿಗಳ ತಲ್ಲೀನತೆ, ಗುಂಗು ಹಿಡಿಸುವ ಹಿನ್ನೆಲೆ ಸಂಗೀತ, ಒಂದೇ ಸ್ಥಳದಲ್ಲಿಯೇ ಹೆಚ್ಚು ಚಿತ್ರೀಕರಣವಾದರೂ, ಫ್ರೆಶ್ ಫೀಲ್ ನೀಡುವ ಕ್ಯಾಮರಾ ವರ್ಕ್ ವರ್ಕೌಟ್ ಆಗಿದೆ. ಇವೆಲ್ಲವುಗಳ ಹದವಾದ ಮಿಶ್ರಣ ತತ್ಸಮ ತದ್ಭವ ರೂಪದಲ್ಲಿ ಆಚೆ ಬಂದಿದೆ. ಕನ್ನಡದಲ್ಲಿ ಹೊಸದೊಂದು ಸೀಟ್ ಎಡ್ಜ್ ಥ್ರಿಲ್ಲರ್ ಸಿನಿಮಾ ನೋಡಬೇಕು ಎಂದು ಬಯಸಿದರೆ, ಈ ವೀಕೇಂಡ್ ನೀವು ತತ್ಸಮ ತದ್ಭವ ಆಯ್ಕೆ ಮಾಡಿಕೊಳ್ಳಬಹುದು.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ