ಮೂರನೇ ಕೃಷ್ಫಪ್ಪ ವಿಮರ್ಶೆ: ಆನೇಕಲ್ ಕನ್ನಡದ ಸೊಗಡಿನಲ್ಲಿ ರಂಜಿಸಿದ ರಂಗಾಯಣ ರಘು; ಕಾಮಿಡಿ ಜತೆಗೆ ಹೃದಯತಟ್ಟುವ ಸಿನಿಮಾ
Moorane Krishnappa Kannada Movie Review: ಮೂರನೇ ಕೃಷ್ಣಪ್ಪ ಕನ್ನಡ ಸಿನಿಮಾ ವಿಮರ್ಶೆ: ನವೀನ್ ನಾರಾಯಣಘಟ್ಟ ನಿರ್ದೇಶನದ ಮೂರನೇ ಕೃಷ್ಣಪ್ಪ ಸಿನಿಮಾವು ನಾರಾಯಣಪುರ ಎಂಬ ಊರಿನಲ್ಲಿ ನಡೆಯುವ ಸರಳ ಕಥೆ. ಈ ಸಿನಿಮಾದಲ್ಲಿ ಹಾಸ್ಯದೊಂದಿಗೆ ಹೃದಯಸ್ಪರ್ಶಿ ವಿಷಯಗಳೂ ಸಾಕಷ್ಟಿವೆ.
Moorane Krishnappa Kannada Movie Review: ರಂಗಾಯಣ ರಘು ನಟನೆಯ ಸಿನಿಮಾವೆಂದರೆ ಅಲ್ಲಿ ಹಾಸ್ಯಕ್ಕೆ ಬರವಿರುವುದಿಲ್ಲ. ಮೂರನೇ ಕೃಷ್ಣಪ್ಪ ಸಿನಿಮಾದಲ್ಲಿ ರಂಗಾಯಣ ರಘು ಆನೇಕಲ್ ಕನ್ನಡ ಭಾಷೆಯ ಸೊಗಡಿನೊಂದಿಗೆ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸರಳ ಕಥೆಯ ಈ ಸಿನಿಮಾವು ಕೊನೆಯವರೆಗೆ ಆಸಕ್ತಿಯಿಂದ ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ. ನಮ್ಮ ಸುತ್ತಮುತ್ತ ನಡೆಯುವ ಸಾಮಾಜಿಕ ರಾಜಕೀಯ ವಿಷಯಗಳನ್ನು ಆಸಕ್ತಿದಾಯಕವಾಗಿ ಪ್ರೇಕ್ಷಕರಿಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನವೀನ್ ರೆಡ್ಡಿ(ನವೀನ್ ನಾರಾಯಣಘಟ್ಟ). ರಂಗಾಯಣ ರಘು ಜತೆಗೆ ಸಂಪತ್ ಮೈತ್ರೇಯ ನಟನೆಯೂ ಗಮನ ಸಳೆಯುತ್ತದೆ.
ಈ ಸಿನಿಮಾದ ನಿರ್ದೇಶಕರ ಹೆಸರು ನವೀನ್ ನಾರಾಯಣಘಟ್ಟ. ಈ ಸಿನಿಮಾದ ಕಥೆ ನಡೆಯುವ ಪುಟ್ಟ ಪಟ್ಟಣದ ಹೆಸರು ಕೂಡ ನಾರಾಯಣಘಟ್ಟ. ಆ ಪುಟ್ಟ ಪಟ್ಟಣದಲ್ಲಿ ಹೊಸ ಗಣಪತಿ ದೇವಾಲಯವೊಂದು ಸಿದ್ಧವಾಗಿದೆ. ಈ ದೇಗುಲ ಉದ್ಘಾಟಿಸಲು ಪ್ರಮುಖ ವ್ಯಕ್ತಿಯೊಬ್ಬರನ್ನು ಆಹ್ವಾನಿಸಲು ಗ್ರಾಮ ಪಂಚಾಯತ್ ಅಧ್ಯಕ್ಷ ವೀರಣ್ಣ ಬಯಸುತ್ತಾರೆ. ಅವರ ಮನಸ್ಸಲ್ಲಿ ಮುಂದಿನ ಚುನಾವಣೆಯಲ್ಲಿ ತಾನು ಗೆಲುವು ಪಡೆಯಬೇಕು ಎಂಬ ಲೆಕ್ಕಾಚಾರವೂ ಇದೆ. ಈ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸುತ್ತಾರೆ? ಈ ಸಂದರ್ಭದಲ್ಲಿ ಏನೆಲ್ಲ ಆಗುತ್ತದೆ ಎಂದು ತಿಳಿಯಲು ಮೂರನೇ ಕೃಷ್ಣಪ್ಪ ಸಿನಿಮಾ ನೋಡಬಹುದು.
ಮೂರನೇ ಕೃಷ್ಣಪ್ಪ ಸಿನಿಮಾ ಒಂದು ಸ್ಥಳಕ್ಕೆ ಸೀಮಿತವಾಗಿದ್ದರೂ ಸಾಕಷ್ಟು ಖುಷಿ ನೀಡುತ್ತದೆ. ಸುಮಾರು 2 ಗಂಟೆ 20 ನಿಮಿಷಗಳ ಕಾಲ ಭರಪೂರ ಮನರಂಜನೆಯನ್ನು ನೀಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಆ ಊರಿನ ಜನರ ಸಹಜ ಪಾತ್ರಗಳು ಇಷ್ಟವಾಗುತ್ತವೆ. ಈ ಸಿನಿಮಾದಲ್ಲಿರುವ ಬಹುತೇಕ ಪಾತ್ರಗಳು ಆಶಾವಾದದ ಸಾಕಾರಮೂರ್ತಿಗಳು. ರಂಗಾಯಣ ರಘು ವೀರಣ್ಣ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಲೋಕಿಯನ್ನು ಸೋಲಿಸಿ ತಾನು ಗೆಲ್ಲಬಹುದು ಎಂಬ ಆಶಾವಾದದಲ್ಲಿರುತ್ತಾನೆ. ಇವರ ಸಹಾಯಕ ಶಂಕರನಿಗೆ ಈ ಗೆಲುವಿನ ಶ್ರೇಯಸ್ಸು ಕೊಂಚ ತನಗೂ ಸಿಗಲಿ ಎಂಬ ಬಯಕೆ.
ಈ ಸಿನಿಮಾದಲ್ಲಿ ನಿರ್ದೇಶಕರು ಗಟ್ಟಿಯಾದ ಕಥೆಯನ್ನು ಅವಲಂಬಿಸಿಲ್ಲ. ಚಲನಚಿತ್ರವು ಆ ಕ್ಷಣದ ಖುಷಿಗಳನ್ನು, ಸಂಭ್ರಮಗಳನ್ನು ವೀಕ್ಷಕರಿಗೆ ದಾಟಿಸುವ ಪ್ರಯತ್ನದಂತೆ ಕಾಣಿಸುತ್ತದೆ. ಸಿನಿಮಾ ಮುಂದೇನಾಗಬಹುದು ಎಂದು ವೀಕ್ಷಕರು ಊಹಿಸಬಹುದಾಗಿದ್ದರೂ ಆ ಪಾತ್ರಗಳು ಕೊನೆಯವರೆಗೂ ಖುಷಿಯಿಂದ ನೋಡುವಂತೆ ಮಾಡುತ್ತವೆ. ಚಿತ್ರದ ಪೂರ್ತಿ ಆನೇಕಲ್‌ನ ಕನ್ನಡ ಭಾಷೆಯ ಸೊಗಡಿದೆ. ಹಳ್ಳಿ ಬದುಕು, ಜೀವನಶೈಲಿಯಲ್ಲಿ ವೀಕ್ಷಕರು ಬೆರತುಬಿಡುತ್ತಾರೆ.
ಈ ಸಿನಿಮಾದ ಖುಷಿ ಹೆಚ್ಚಿಸುವಲ್ಲಿ ಹಿನ್ನಲೆ ಸಂಗೀತ ಸಂಯೋಜಕರಾದ ಆನಂದ್ ರಾಜವಿಕ್ರಮ್ ಮತ್ತು ಸುಪ್ರೀತ್ ಶರ್ಮಾ ಅವರ ಪಾತ್ರ ಸಾಕಷ್ಟಿದೆ. ಪಟ್ಟಣದ ಸಹಜ ಚಿತ್ರವನ್ನು ನೋಡುಗರ ಮುಂದಿಡುವಲ್ಲಿ ಕ್ಯಾಮೆರಾಮನ್ ಯೋಗಿ ಯಶಸ್ವಿಯಾಗಿದ್ದಾರೆ. ತುಕಾಲಿ ಸಂತೋಷ್, ಶ್ರೀಪ್ರಿಯ ಮುಂತಾದವರ ನಟನೆಯೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈ ಚಿತ್ರವು ಮನರಂಜನೆಯ ಜತೆಗೆ ಜೀವನದ ಕುರಿತು ಅವಲೋಕನ ಮಾಡುವಂತೆಯೂ ಮಾಡುತ್ತದೆ.
ಸಿನಿಮಾದಲ್ಲಿ ಪಂಚ್ ಡೈಲಾಗ್‌ಗಳು ಶಿಳ್ಳೆ ಗಿಟ್ಟಿಸಿಕೊಳ್ಳುತ್ತವೆ. ಹಳ್ಳಿಗಳಲ್ಲಿ ನಾವು ದಿನನಿತ್ಯ ನೋಡುವ ಜನರಂತೆಯೇ ಈ ಸಿನಿಮಾದ ಪಾತ್ರದಾರಿಗಳು ಕಾಣಿಸಿಕೊಂಡಿದ್ದಾರೆ. ಫಸ್ಟ್ ಆಫ್ ಕಾಮಿಡಿ, ಸೆಕೆಂಡ್ ಆಫ್ ಹೃದಯಸ್ಪರ್ಶಿಯಾಗಿದೆ. ರಂಗಾಯಣ ರಘು, ಸಂಪತ್ ಮೈತ್ರೇಯ ಇಡೀ ಸಿನಿಮಾವನ್ನು ತಮ್ಮ ಹೆಗಲಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಈ ವೀಕೆಂಡ್‌ನಲ್ಲಿ ನಿಮ್ಮ ಮುಖದಲ್ಲಿ ನಗು ಮೂಡಿಸಬಹುದಾದ ಸಿನಿಮಾವಿದು.
ಮೂರನೇ ಕೃಷ್ಣಪ್ಪ ಕನ್ನಡ ಸಿನಿಮಾ
ಚಿತ್ರದ ಹೆಸರು: ಮೂರನೇ ಕೃಷ್ಣಪ್ಪ
ಭಾಷೆ: ಕನ್ನಡ
ಅವಧಿ: 141 ನಿಮಿಷ
ನಿರ್ದೇಶನ: ನವೀನ್ ನಾರಾಯಣಘಟ್ಟ (ನವೀನ್ ರೆಡ್ಡಿ)
ತಾರಾಗಣ: ರಂಗಾಯಣ ರಘು, ಸಂಪತ್ ಮೈತ್ರೇಯ, ಶ್ರೀಪ್ರಿಯಾ, ತುಕಾಲಿ ಸಂತೋಷ್, ಉಗ್ರಂ ಮಂಜು ಮುಂತಾದವರು.