Soundarya Jagadeesh Death: ಅಗಲಿದ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತಿಮ ದರ್ಶನ ಪಡೆದ ಗಣ್ಯರು; ನಾಳೆ ಹಿರಸಾವೆಯಲ್ಲಿ ಅಂತ್ಯಕ್ರಿಯೆ
Soundarya Jagadeesh Death: ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಸ್ಯಾಂಡಲ್‌ವುಡ್ ಆಘಾತ ವ್ಯಕ್ತಪಡಿಸಿದೆ. ದರ್ಶನ್, ಉಪೇಂದ್ರ ದಂಪತಿ, ನಟಿ ಅಮೂಲ್ಯ, ಶ್ರೀನಗರ ಕಿಟ್ಟಿ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಅಗಲಿದ ನಿರ್ಮಾಪಕನ ಅಂತಿಮ ದರ್ಶನ ಮಾಡಿದ್ದಾರೆ.
ಬೆಂಗಳೂರು: ಸ್ಯಾಂಡಲ್‌ವುಡ್‌ನ ನಿರ್ಮಾಪಕ ಸೌಂದರ್ಯ ಜಗದೀಶ್ ಅನಿರೀಕ್ಷಿತ ಅಗಲಿಕೆಗೆ ಸ್ಯಾಂಡಲ್‌ವುಡ್ ಆಘಾತವ್ಯಕ್ತಪಡಿಸಿದೆ. ನಟ ದರ್ಶನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಅಂತಿಮ ದರ್ಶನ ಮಾಡಿದ್ದಾರೆ. ನಾಳೆ ಬೆಳಗ್ಗೆ ಚೆನ್ನರಾಯಪಟ್ಟಣ ತಾಲೂಕಿನ ಹಿರಸಾವೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆಯವರೆಗೆ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ.
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಆಪ್ತ ಸ್ನೇಹಿತ ಸೌಂದರ್ಯ ಜಗದೀಶ್‌ರ ಅಂತಿಮ ದರ್ಶನ ಮಾಡಿದ್ದಾರೆ. ದರ್ಶನ್ ಜತೆ ನಟ ಧನ್ವೀರ್ ಗೌಡ ಮತ್ತು ಯಶಸ್ ಸೂರ್ಯ ಕೂಡ ಇದ್ದರು. ಉಪೇಂದ್ರ ದಂಪತಿ, ನಟಿ ಅಮೂಲ್ಯ, ಶ್ರೀನಗರ ಕಿಟ್ಟಿಯೂ ಸೌಂದರ್ಯ ಜಗದೀಶ್ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ವಿನೋದ್ ಪ್ರಭಾಕರ್, ಪ್ರೇಮ್, ಗುರುಕಿರಣ್ ದಂಪತಿ, ಗುರುನಂದನ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಸೆಲೆಬ್ರಿಟಿಗಳು ಅಗಲಿದ ನಿರ್ಮಾಪಕನ ಅಂತಿಮ ದರ್ಶನ ಪಡೆದರು.
ಕನ್ನಡದಲ್ಲಿ ಹತ್ತು ಹಲವು ಸಿನಿಮಾ ನಿರ್ಮಾಣ ಮಾಡಿದ್ದ ಸೌಂದರ್ಯ ಜಗದೀಶ್ ನಿರ್ಮಾಪಕ, ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದರು. ಇವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇವರ ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಮೃತರಿಗೆ ಪತ್ನಿ ರೇಖಾ, ಪುತ್ರ ಸ್ನೇಹಿತ್ ಮತ್ತು ಓರ್ವ ಮಗಳಿದ್ದಾಳೆ. ಸೌಂದರ್ಯ ಜಗದೀಶ್ ಅವರ ಮಕ್ಕಳು ಮೃತದೇಹದ ಮುಂದೆ "ಅಪ್ಪ ಎದ್ದೇಳು" ಎಂದು ಅಳುತ್ತಿರುವ ದೃಶ್ಯ ನೋಡಿ ನೆರೆದವರ ಕಣ್ಣಾಲಿಗಳು ತುಂಬಿ ಬಂದಿವೆ.
ಸ್ಯಾಂಡಲ್‌ವುಡ್‌ಗೆ ಮಸ್ತ್ ಮಜಾ ಮಾಡಿ ಸಿನಿಮಾ ಮೂಲಕ ಇವರು ನಿರ್ಮಾಪಕರಾಗಿ ಎಂಟ್ರಿ ನೀಡಿದ್ದರು. ತನ್ನ ಮಗನಿಗಾಗಿ ಅಪ್ಪು ಪಪ್ಪು ಸಿನಿಮಾ ನಿರ್ಮಿಸಿದ್ದರು. ಸ್ನೇಹಿತರು, ರಾಮ್ ಲೀಲಾ ಸೇರಿ ಹಲವು ಸಿನಿಮಾಗಳಿಗೆ ನಿರ್ಮಾಕರಾಗಿದ್ದರು. ಇತ್ತೀಚೆಗೆ ಕಾಟೇರ ಸಿನಿಮಾದ ಪಾರ್ಟಿಯ ಸಂದರ್ಭದಲ್ಲಿ ಇವರ ಮಾಲೀಕತ್ವದ ಜೆಟ್‌ಲಾಗ್ ಪಬ್ ಸುದ್ದಿಯಲ್ಲಿತ್ತು. ಕಳೆದ ತಿಂಗಳಷ್ಟೇ ಬೆಂಗಳೂರಿನ ಆರ್‌ಆರ್ ನಗರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ಮಗಳ ಮದುವೆ ನೆರವೇರಿಸಿದ್ದ ಸೌಂದರ್ಯ ಜಗದೀಶ್ ಅವರ ಮರಣ ಎಲ್ಲರಿಗೂ ಆಘಾತ ತಂದಿದೆ.
ಸೌಂದರ್ಯ ಜಗದೀಶ್ ಆತ್ಮಹತ್ಯೆ ಕುರಿತು ಉತ್ತರ ವಿಭಾಗದ ಡಿಸಿಪಿ ಸೈಯದ್ ವುಲ್ಲಾ ಅದಾವತ್ ಮಾಹಿತಿ ನೀಡಿದ್ದಾರೆ. "ಇಂದು ಬೆಳಗ್ಗೆ 9.45ಕ್ಕೆ ಈ ಘಟನೆ ಬಗ್ಗೆ ನಮಗೆ ಮಾಹಿತಿ ದೊರಕಿದೆ. ಸೌಂದರ್ಯ ಜಗದೀಶ್ ಪತ್ನಿ ಈಗಾಗಲೇ ದೂರು ಕೊಟ್ಟಿದ್ದಾರೆ. ಪತ್ನಿ ಕೂಡ ಇದು ಸೂಸೈಡ್ ಎಂದು ಕ್ಲೀಯರ್ ಕಟ್ ಆಗಿ ಹೇಳಿದ್ದಾರೆ" ಎಂದು ಅವರು ಹೇಳಿದ್ದಾರೆ.
ಯಾವುದೇ ಸಮಸ್ಯೆಗೂ ಆತ್ಮಹತ್ಯೆ ಪರಿಹಾರ ಅಲ್ಲ…
ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.