ಮೈಸೂರಿಗೂ 'ಕೋಟಿ'ಗೂ ಉಂಟು ನಂಟು; ಅರಮನೆ ನಗರಿಯಲ್ಲಿ ಧನಂಜಯ್ ನಟನೆಯ ಕೋಟಿ ಚಿತ್ರ ವೀಕ್ಷಿಸಲಿರುವ ಪ್ರತಾಪ್ ಸಿಂಹ
ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ, ಡಾಲಿ ಧನಂಜಯ್ ನಟನೆಯ ಕೋಟಿ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಅರಮನೆ ನಗರಿಯಲ್ಲಿಯೇ ಇದಕ್ಕಾಗಿ ವಿಶೇಷ ಶೋ ಏರ್ಪಡಿಸಲಾಗಿದೆ.

Daali Dhananjay Kotee: ಕಳೆದ ಶುಕ್ರವಾರ ಬಿಡುಗಡೆಯಾದ ಡಾಲಿ ಧನಂಜಯ ನಟನೆಯ 'ಕೋಟಿ' ಸಿನಿಮಾ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಹೊರಹೊಮ್ಮಿದ್ದು ದೊಡ್ಡಪರದೆಯಲ್ಲಿ ಪೇಕ್ಷಕರ ಮನ ಗೆಲ್ಲುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಥಿಯೇಟರ್ ಕಡೆ ಹೆಚ್ಚೆಚ್ಚು ಬರುತ್ತಿದ್ದಾರೆ. ಮೆಚ್ಚುಗೆ ಸಿಗುತ್ತಿದೆ. ಧನಂಜಯ್, ರಮೇಶ್ ಇಂದಿರಾ, ತಾರಾ ನಟನೆ, ರೋಚಕ ಕ್ಲೈಮ್ಯಾಕ್ಸ್ ಮತ್ತು ದುನಿಯಾ ವಿಜಯ್ ಅವರ ಕ್ಯಾಮಿಯೋಗೆ ಭರ್ಜರಿ ಚಪ್ಪಾಳೆ ಸಿಕ್ಕಿದೆ.
'ಕೋಟಿ' ಯಶಸ್ವಿಯಾಗಿ ಎರಡನೇ ವಾರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಚಿತ್ರತಂಡ ಮೈಸೂರಿನಲ್ಲಿ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಿದ್ದು ರಾಜಕಾರಣಿ ಪ್ರತಾಪ್ ಸಿಂಹ ಕೋಟಿ ತಂಡದ ಜತೆ ಸಿನಿಮಾ ವೀಕ್ಷಿಸಲಿದ್ದಾರೆ. ಮೈಸೂರಿನ ವಿಶೇಷ ಪ್ರದರ್ಶನ ಗುರುವಾರ ಸಂಜೆ 6:45ಕೆ ಡಿಆರ್‌ಸಿ ಸಿನಿಮಾದಲ್ಲಿ ನಡೆಯಲಿದೆ.
ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ
'ಕೋಟಿ' ಚಿತ್ರಕ್ಕೆ ಮೈಸೂರಿನಲ್ಲಿ ಅದ್ಭುತ ರೆಸ್ಪಾನ್ಸ್ ಬರುತ್ತಿದ್ದು ಫ್ಯಾಮಿಲಿ ಆಡಿಯನ್ಸ್ ಚಿತ್ರವನ್ನು ಮೆಚ್ಚುತ್ತಿದ್ದಾರೆ. ಮೈಸೂರಿನಲ್ಲಿ 'ಕೋಟಿ'ಯ ಶೋಗಳು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು ಮೈಸೂರು ಸೇರಿದಂತೆ ರಾಜ್ಯಾದ್ಯಂತ 'ಕೋಟಿ' ಸದ್ದು ಮಾಡುತ್ತಿದೆ.
ಕೋಟಿ ಮತ್ತು ಮೈಸೂರಿನ ನಂಟು
ಈ ಸಿನಿಮಾದಲ್ಲಿ ಧನಂಜಯ್ 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ 'ಕೋಟಿ' ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚು ಚಿತ್ರೀಕರಣ ಮೈಸೂರಿನಲ್ಲಿ ನಡೆದಿದೆ. ಸ್ಟೆರ್ಲಿಂಗ್ ಚಿತ್ರಮಂದಿರ, ವಿವಿ ಮೊಹಲ್ಲಾ, ಮಾರ್ಕೆಟ್, ದೇವೇಗೌಡ ಸರ್ಕಲ್ ಇನ್ನೂ ಹಲವು ಕಡೆ ಚಿತ್ರೀಕರಣ ನಡೆದಿದೆ.
ಕೋಟಿ ಮೆಚ್ಚಿದ್ದಕ್ಕೆ ನಿರ್ದೇಶಕ ಖುಷ್
"ನಮ್ಮ ಚಿತ್ರವನ್ನು ಮೈಸೂರಿನಲ್ಲಿ ಶೂಟ್ ಮಾಡಿದ್ದು ತುಂಬಾ ಖುಷಿ ನೀಡಿತ್ತು. ಈಗ ಅದೇ ಮೈಸೂರಿನ ಪ್ರೇಕ್ಷಕರು ಕೋಟಿಯನ್ನು ಮೆಚ್ಚಿಕೊಳ್ಳುತ್ತಿರುವುದು ನೂರುಪಟ್ಟು ಖುಷಿ ನೀಡಿದೆ" ಎಂದು ಕೋಟಿಯ ಬರಹಗಾರ ಮತ್ತು ನಿರ್ದೇಶಕ ಪರಮ್ ಹರ್ಷ ವ್ಯಕ್ತಪಡಿಸಿದರು. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್. ಈ ಸಿನೆಮಾವನ್ನು ಜಿಯೋ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದು, ಕಲರ್ಸ್ ಕನ್ನಡವನ್ನು ದಶಕಗಳ ಕಾಲ ಮುನ್ನಡೆಸಿದ್ದ ಪರಮ್ ಅವರು ಬರೆದು ನಿರ್ದೇಶಿಸಿದ್ದಾರೆ. ʼಕೋಟಿʼ ರಾಜಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
