ಕಾನ್ಸ್ ಚಿತ್ರೋತ್ಸವದಲ್ಲಿ ಮೈಸೂರು ನಿರ್ದೇಶಕನ ಕಿರುಚಿತ್ರ ಪ್ರದರ್ಶನ; ಗೆಲುವಿನ ನಿರೀಕ್ಷೆಯಲ್ಲಿ ಅಜ್ಜಿ ಹುಂಜ ಕದ್ದ ಜನಪದ ಕಥೆ
ಕಾನ್ಸ್ ಚಿತ್ರೋತ್ಸವದಲ್ಲಿ ಮೈಸೂರಿನ ಚಿದಾನಂದ ಎಸ್ ನಾಯ್ಕ್ ನಿರ್ದೇಶನದ 16 ನಿಮಿಷಗಳ ಅವಧಿಯ ಕಿರುಚಿತ್ರ "Sunflowers Were the First Ones to Know" ಪ್ರದರ್ಶನಗೊಂಡಿದೆ. ಬಂಜಾರ ಸಮುದಾಯದ ಜನಪದ ಕಥೆಯನ್ನು ಈ ಕಿರುಚಿತ್ರ ಹೊಂದಿದೆ.
ಬೆಂಗಳೂರು: ಫ್ರಾನ್ಸ್‌ನ ಕಾನ್ಸ್‌ನಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ಮೈಸೂರಿನ ಚಿದಾನಂದ್ ಎಸ್ ನಾಯ್ಕ್ ನಿರ್ದೇಶಿಸಿದ ಕಿರುಚಿತ್ರ ಪ್ರದರ್ಶನಗೊಂಡಿದೆ. ಚಿತ್ರತಂಡವು ಸ್ವಂತ ಖರ್ಚಿನಲ್ಲಿಯೇ ಫ್ರಾನ್ಸ್‌ಗೆ ಪ್ರಯಾಣ ಬೆಳೆಸಿ "Sunflowers Were the First Ones to Know" ಎಂಬ ಕಿರುಚಿತ್ರವನ್ನು ಪ್ರದರ್ಶಿಸಿದ್ದಾರೆ. ಅಜ್ಜಿಯೊಬ್ಬಳು ಹಳ್ಳಿಯೊಂದರ ಹುಂಜವನ್ನು ಕದ್ದ ಬಳಿಕ ಆ ಹಳ್ಳಿಯಲ್ಲಿ ಸೂರ್ಯ ಮೂಡದೆ ಕತ್ತಲಾಯಿತು ಎಂಬ ಜನಪದ ಕಥೆಯನ್ನು ಹೊಂದಿರುವ ಈ ಕಿರುಚಿತ್ರವು ಕಾನ್ಸ್‌ನಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಇದೇ ಗುರುವಾರ ಪ್ರಶಸ್ತಿ ಘೋಷಣೆಯಾಗಲಿದೆ.
ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಚಿದಾನಂದ ಎಸ್ ನಾಯಕ್ ಅವರ 16 ನಿಮಿಷಗಳ ಕಿರುಚಿತ್ರ "ಸನ್ ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ" ಎಂಬ ಕಿರುಚಿತ್ರ ಮಂಗಳವಾರ 77 ನೇ ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿದೆ. "ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು" ಕನ್ನಡ ಕಿರುಚಿತ್ರವು ಸನ್‌ಫ್ಲವರ್ ಹೆಸರಿನಲ್ಲಿ ಪ್ರದರ್ಶನಗೊಂಡಿದೆ.
ಹಳ್ಳಿಯೊಂದರಲ್ಲಿ ಪ್ರತಿದಿನ ಸೂರ್ಯೋದಯಕ್ಕೆ ಹುಂಜವೊಂದು ಕಾರಣವೆಂದು ಹಳ್ಳಿಗರು ತಿಳಿದಿದ್ದರು. ಆ ಹುಂಜದ ಜತೆ ಅಜ್ಜಿ ಓಡಿ ಹೋಗಿದ್ದರು. ಇದಾದ ಬಳಿಕ ಏನಾಯಿತು? ಆ ಹಳ್ಳಿಯಲ್ಲಿ ಬೆಳಕಾಯಿತೇ? ಈ ಜನಪದ ಕಥೆಯನ್ನು ಆಧರಿಸಿ ಚಿದಾನಂದ ನಾಯ್ಕ್ ಕಿರುಚಿತ್ರ ನಿರ್ಮಿಸಿದ್ದರು. ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ (ಎಫ್‌ಟಿಐಐ) ವಿದ್ಯಾರ್ಥಿಯು ನಿರ್ಮಿಸಿದ ಈ ಕಿರುಚಿತ್ರವು ಕಾನ್ಸ್ ಚಿತ್ರೋತ್ಸವದ ಲಾ ಸಿನೆಫ್ ವಿಭಾಗಕ್ಕೆ ಆಯ್ಕೆಗೊಂಡಿತ್ತು. ಒಟ್ಟು 2,263 ಕಿರುಚಿತ್ರಗಳು ಈ ವಿಭಾಗದಲ್ಲಿ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದವು. ಇವುಗಳಲ್ಲಿ ಹದಿನೆಂಟು ಕಿರುಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಅಜ್ಜಿ ಹುಂಜ ಕದ್ದ ಕಥೆಯ ಈ ಕಿರುಚಿತ್ರವೂ ಆಯ್ಕೆಯಾಗಿತ್ತು. ವಿಶೇಷವೆಂದರೆ, ಭಾರತದಿಂದ ಆಯ್ಕೆಯಾದ ಒಂದೇ ಒಂದು ಕಿರುಚಿತ್ರ ಇದಾಗಿದೆ.
ಛಾಯಾಗ್ರಹಣ ನಿರ್ದೇಶಕ ಸೂರಜ್ ಠಾಕೂರ್, ಸೌಂಡ್ ಡಿಸೈನರ್ ಅಭಿಷೇಕ್ ಕದಮ್ ಮತ್ತು ಪ್ರೊಡಕ್ಷನ್ ಡಿಸೈನರ್ ಪ್ರಣವ್ ಖೋಟ್ ಅವರೊಂದಿಗೆ ಶಿವಮೊಗ್ಗ ಮೂಲದ ಚಿದಾನಂದ್ ಎಸ್ ನಾಯ್ಕ್ ಕಾನ್ಸ್ ಚಿತ್ರೋತ್ಸವದಲ್ಲಿದ್ದಾರೆ. ಚಿತ್ರದ ಸಂಕಲನಕಾರ ಮನೋಜ್ ವಿ ಅವರಿಗೆ ಕಾನ್ಸ್‌ಗೆ ಬರಲು ಸಾಧ್ಯವಾಗಿಲ್ಲ. ಇವರೆಲ್ಲರೂ ತಮ್ಮ ಸ್ವಂತ ಖರ್ಚಿನಲ್ಲಿ ಕಾನ್ಸ್‌ಗೆ ಪ್ರಯಾಣ ಬೆಳೆಸಿಸದದರು.
ಚಿದಾನಂದ್ ಎಸ್ ನಾಯ್ಕ್ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಒಂದಿಷ್ಟು ಸಮಯ ವೈದ್ಯಕೀಯ ವೃತಿ ಮಾಡಿದ ಬಳಿಕ ಇವರು ಸಿನಿಮಾ ನಿರ್ಮಾಣದ ಕಡೆಗೆ ಆಕರ್ಷಿತರಾದರು. "ನಾನು ಈ ಆಯ್ಕೆಯನ್ನು ಮಾಡಿದಾಗ ನನ್ನ ಮನೆಯವರು ತುಂಬಾ ಅಸಮಧಾನಗೊಂಡಿದ್ದರು. ಐದು ವರ್ಷಗಳ ಬಳಿಕ ಅವರ ಬೆಂಬಲದದೊಂದಿಗೆ ಇಲ್ಲಿದ್ದೇನೆ" ಎಂದು ಚಿದಾನಂದ್ ನಾಯ್ಕ್ ಹೇಳದಿದಾರೆ.
ಈ ಚಿತ್ರದಲ್ಲಿ ರಾತ್ರಿ ಒಂದು ಪಾತ್ರವಾಗಿದೆ ಎಂದು ನಾಯ್ಕೆ ಹೇಳಿದ್ದಾರೆ. "ನಮ್ಮ ಬಳಿ ಇದ್ದ ಸೀಮಿತ ಸಂಪನ್ಮೂಲಗಳನ್ನು ಪರಿಗಣಿಸಿದರೆ ಈ ಚಿತ್ರ ನಿರ್ಮಾಣ ದೊಡ್ಡ ಸವಾಲಾಗಿತ್ತು. ಈ ಚಿತ್ರದ ಕಥೆ ಕರ್ನಾಟಕದ ಬಹುತೇಕರಿಗೆ ತಿಳಿದಿದೆ. ಕರ್ನಾಟಕದ ಹೊರಗಿನವರಿಗೆ ಈ ಜಾನಪದ ಕಥೆ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ.
ಬರಹಗಾರ ದಿವಂಗತ ಯು.ಆರ್.ಅನಂತಮೂರ್ತಿ ಅವರ ಜತೆ ಮಾತುಕತೆ ನಡೆಸಿದ ಬಳಿಕ ಇವರಿಗೆ ಬಂಜಾರ ಸಮುದಾಯದ ಕಥೆಗಳು ಮತ್ತು ಹಾಡುಗಳ ಹುಡುಕಾಟದ ಕುರಿತು ಆಸಕ್ತಿ ಮೂಡಿತ್ತು. "ಬಂಜಾರ ಭಾಷೆಯು ಮಾನ್ಯತೆ ಪಡೆದ ಭಾಷೆಯಲ್ಲ. ಆದರೆ, ಆ ಭಾಷೆಯ ಸಾಹಿತ್ಯದ ಮಹತ್ವವನ್ನು ನನಗೆ ಅನಂತಮೂರ್ತಿ ಮನದಟ್ಟು ಮಾಡಿದರು" ಎಂದು ನಾಯ್ಕ್ ಹೇಳಿದ್ದಾರೆ.
ಬಂಜಾರ ಸಾಹಿತ್ಯದ ಸಂಶೋಧನೆಯ ಆಧಾರದಲ್ಲಿ ಇವರು "ಭುಲೆ ಚುಕೆ ತುಲೆಸ್" ಎಂಬ 12 ನಿಮಿಷಗಳ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ಈ ಚಿತ್ರವು ಕಳೆದ ವರ್ಷ ಕೇರಳದ ಅಂತರರಾಷ್ಟ್ರೀಯ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು. "ಬಂಜಾರರು ಶ್ರೀಮಂತ ಮೌಖಿಕ ಸಂಸ್ಕೃತಿಯನ್ನು ಹೊಂದಿದ್ದಾರೆ. ಆದರೆ ಈ ಸಮುದಾಯವನ್ನು ಕನ್ನಡ ಮಾತನಾಡುವ ಜನರಿಂದ ಬೇರ್ಪಡಿಸುವ ಮಸುಕಾದ ಗೆರೆಗಳು ಇವೆ" ಎಂದು ಅವರು ಹೇಳಿದ್ದಾರೆ.
ಗಿರೀಶ್ ಕಾಸರವಳ್ಳಿ ಸೇರಿದಂತೆ ಮುಖ್ಯವಾಹಿನಿಯಲ್ಲಿ ಇಲ್ಲದ ಚಲನಚಿತ್ರ ನಿರ್ಮಾಪಕರ ಬಗ್ಗೆ ನನಗೆ ಬಹಳ ತಡವಾಗಿ ತಿಳಿಯಿತು. ಸಿನಿಮಾ ಕಲಿಯಲು ಎಫ್‌ಟಿಐಐನ ದೂರದರ್ಶನ ವಿಭಾಗದಲ್ಲಿ ಒಂದು ವರ್ಷದ ಕೋರ್ಸ್ ಕಲಿತರು. ಹುಂಜ ಕದ್ದ ಅಜ್ಜಿಯ ಕಥೆ ಮತ್ತು ಚಿದಾನಂದ್ ಎಸ್ ನಾಯ್ಕ್ ಅವರ ಸಿನಿ ಪ್ರಯಾಣದ ಕುರಿತು ತಿಳಿಯಲು “ಕಾನ್ ಚಿತ್ರೋತ್ಸವಕ್ಕೆ ಅಜ್ಜಿ ಕದ್ದ ಹುಂಜದ ಕಥೆ ಕನ್ನಡ ಕಿರುಚಿತ್ರ ಆಯ್ಕೆ; ಬಂಜಾರ ಸಮುದಾಯಕ್ಕೆ ಹೆಮ್ಮೆ ತಂದ ಚಿದಾನಂದ” ಓದಿ.