ಕಿಡಿ ತಾಕಿಸಿ ಹೊರಟಿತು ಹೆಣ್ಣು, ಬೇರಾವುದೋ ಕರೆಗೆ ತಣ್ಣಗೆ ಓಗೊಟ್ಟ ಮೇರೆಯಲ್ಲಿ; ಅಪರ್ಣಾ ನಿಧನಕ್ಕೆ ಪತಿ ನಾಗರಾಜ್ ವಸ್ತಾರೆ ಭಾವುಕ ಕವನ
Anchor Aparna Death: ಕನ್ನಡಮ್ಮನ ಕೂಸು, ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಪತ್ನಿಯ ಅಗಲಿಕೆ ನೋವಲ್ಲಿ ಪತಿ ನಾಗರಾಜ್ ವಸ್ತಾರೆ ಭಾವುಕ ಕವನದ ಮೂಲಕ ಅಪರ್ಣೆಯನ್ನು ಬೀಳ್ಕೊಟ್ಟಿದ್ದಾರೆ.

Aparna vastarey passed away: ಸಿನಿಮಾ, ನಿರೂಪಣೆ, ಕಿರುತೆರೆ ಹೀಗೆ ಎಲ್ಲ ರಂಗಗಳಲ್ಲಿಯೂ ತಮ್ಮದೇ ಆದ ಅಚ್ಚ ಕನ್ನಡದ ಮಾತಿನ ಮೂಲಕವೇ ಮನಸೂರೆಗೊಳಿಸಿದ್ದ ಅಪರ್ಣಾ ವಸ್ತಾರೆ, ಶ್ವಾಸಕೋಶದ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆಯೇ ಈ ಗಂಭೀರ ಕಾಯಿಲೆಗೆ ತುತ್ತಾಗಿದ್ದ ಅಪರ್ಣಾ, ತಮ್ಮಗಿದ್ದ ಕಾಯಿಲೆಯ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ, ವಿಧಿಯ ಆಟವೇ ಮೇಲುಗೈ ಸಾಧಿಸಿದೆ. ಕ್ಯಾನ್ಸರ್ ವಿರುದ್ಧ ಟೊಂಕ ಕಟ್ಟಿ ನಿಂತರೂ, ಪತಿ ನಾಗರಾಜ್ ವಸ್ತಾರೆ ಸಹ ಪತ್ನಿ ಹೋರಾಟದಲ್ಲಿ ಭಾಗಿಯಾದರೂ, ಅಪರ್ಣಾ ಮಾತ್ರ ಬದುಕುಳಿಯಲಿಲ್ಲ!
ಇದೀಗ ಹೀಗೆ ಅಗಲಿದ ಪತ್ನಿ ಅಪರ್ಣಾ ವಸ್ತಾರೆ ಬಗ್ಗೆ ಭಾವುಕ ಗೀತೆಯೊಂದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ನಾಗರಾಜ್ ವಸ್ತಾರೆ, ಬೆಳಗಿಕೊಂಡಿರೆಂದು ಕಿಡಿ ತಾಕಿಸಿ ಹೊರಟಿತು ಹೆಣ್ಣು.. ಎಂಬ ಸಾಲುಗಳ ಮೂಲಕ ಬೀಳ್ಕೊಟ್ಟಿದ್ದಾರೆ. ಹೀಗಿದೆ ನಾಗರಾಜ್ ವಸ್ತಾರೆ, ಪತ್ನಿ ಅಪರ್ಣೆಯನ್ನು ನೆನಪಿಸಿಕೊಂಡು ಬರೆದ ಕವನ.
ನಾಗರಾಜ್ ವಸ್ತಾರೆ ಬರೆದ ಕವನ
ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆ
ಯಲ್ಲಿ
ಒಂದೇ ಒಂದು
ನಿಮಿಷ
ಬಂದೇನೆಂದು ಕಡೆಗಳಿಗೆ
ಯ ಸೆರಗಿನ ಬೆನ್ನಿನಲ್ಲಿ
ಅಂದು.
ಕಾದಿದ್ದೇನೆ
ಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ.
ಪತಿಯ ವಿಶೇಷ ಕೋರಿಕೆ..
ಪತ್ನಿ ಅಪರ್ಣಾ ನಿಧನದ ಬಳಿಕ ಅಂತಿಮ ದರ್ಶನಕ್ಕೆ ಏನನ್ನೂ ತರಬೇಡಿ ಎಂದು ಪತಿ ನಾಗರಾಜ್ ವಸ್ತಾರೆ, ವಿಶೇಷ ಮನವಿ ಮಾಡಿದ್ದಾರೆ. ಆ ಮನವಿ ಹೀಗಿದೆ. “ನಮಸ್ಕಾರ. ನನ್ನ ವೈಯಕ್ತಿಕ ಬದುಕಿನ ಈ ದುರ್ದೈವದ ಹೊತ್ತಿನಲ್ಲಿ ಅಪರ್ಣೆಯನ್ನು ಸ್ಮರಿಸಿರುವ ಎಲ್ಲರಿಗೂ ಋಣಿ. ಅವಳನ್ನು ಕೊನೆಯ ಸಲ ನೋಡಬಯಸುವವರು ಬೆಳಿಗ್ಗೆ ಏಳರಿಂದ ಹನ್ನೆರಡು ಗಂಟೆಯವರೆಗೆ ಬನಶಂಕರಿ ಎರಡನೇ ಹಂತದ ಸುಚಿತ್ರಾ ಫಿಲ್ಮ್ ಸೊಸೈಟಿಯ ಬಳಿಯಿರುವ ಅವಳಿದ್ದ ಮನೆಗೆ ಬರಬಹುದು. ದಯಮಾಡಿ ಬರಿಗೈಯಲ್ಲಿ ಬಂದರೆ ಹೆಚ್ಚು ಚೆನ್ನ. ಎರಡು ಮೂರು ತಾಸಿರುವ ಹೂವು-ಹಾರ ಬಾಡಿದಲ್ಲಿ ಇಷ್ಟು ಕಾಲ ಅವಳು ಕಾಪಿಟ್ಟ ನನ್ನ ಮನೆಮನಸ್ಸುಗಳ ಸುತ್ತಲಿನ ಕಸ ಹೆಚ್ಚೀತು. ಊರಿನ ಅಂದಗೆಟ್ಟೀತು. ಪ್ಲಾಸ್ಟಿಕ್ ಪಾಲಿಥೀನುಗಳಂತೂ ಸುತಾರಾಂ ಬೇಡ. ಈ ನಿಟ್ಟಿನಲ್ಲಿ ಕಳಕಳಿಯ ಕೋರಿಕೆ” ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಂತಾಪ
“ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.” ಎಂದಿದ್ದಾರೆ ಸಿದ್ದರಾಮಯ್ಯ.
ವಿಭಾಗ