ಮಹಾಶಿವರಾತ್ರಿಗೂ ರಕ್ತೇಶ್ವರಿಗೂ ಅದ್ಯಾವ ನಂಟು; ದಿಂಸೋಲ್‌ ಮೂಲಕ ಬರ್ತಿದೆ ಕರಾವಳಿಯ ಮತ್ತೊಂದು ಸಿನಿಮಾ ತಂಡ
ಕನ್ನಡ ಸುದ್ದಿ  /  ಮನರಂಜನೆ  /  ಮಹಾಶಿವರಾತ್ರಿಗೂ ರಕ್ತೇಶ್ವರಿಗೂ ಅದ್ಯಾವ ನಂಟು; ದಿಂಸೋಲ್‌ ಮೂಲಕ ಬರ್ತಿದೆ ಕರಾವಳಿಯ ಮತ್ತೊಂದು ಸಿನಿಮಾ ತಂಡ

ಮಹಾಶಿವರಾತ್ರಿಗೂ ರಕ್ತೇಶ್ವರಿಗೂ ಅದ್ಯಾವ ನಂಟು; ದಿಂಸೋಲ್‌ ಮೂಲಕ ಬರ್ತಿದೆ ಕರಾವಳಿಯ ಮತ್ತೊಂದು ಸಿನಿಮಾ ತಂಡ

Dimsole Kannada Movie: ಹೊಸಬರ ಉತ್ಸಾಹಿ ತಂಡವೊಂದು ಇದೀಗ ಅತ್ಯಾಕರ್ಷಕ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಮೂಲಕ ಆಗಮಿಸಿದೆ. ಕರಾವಳಿ ಭಾಗದವರೇ ಸೇರಿ ಮಾಡಿರುವ ಈ ಚಿತ್ರಕ್ಕೆ ದಿಂಸೋಲ್‌ ಎಂದು ಟೈಟಲ್‌ ಇಟ್ಟಿದೆ. ಇಲ್ಲಿದೆ ಈ ಸಿನಿಮಾದ ಹೆಚ್ಚಿನ ಮಾಹಿತಿ.

ದಿಂಸೋಲ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ
ದಿಂಸೋಲ್‌ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ

Dimsole Movie First Look: ಹೊಸಬರ ಸಿನಿಮಾತಂಡಗಳು, ತಮ್ಮ ಹೊಸ ಕನಸುಗಳ ಜತೆಗೆ ಚಂದನವನಕ್ಕೆ ಆಗಮಿಸುತ್ತಲೇ ಇವೆ. ಅದರಂತೆ ಇದೀಗ ಕರಾವಳಿ ಭಾಗದ ಮತ್ತೊಂದು ತಂಡ, ಆಕರ್ಷಕ ಶೀರ್ಷಿಕೆಯ ಜತೆಗೆ ಆಗಮಿಸಿದೆ. ಆ ಚಿತ್ರಕ್ಕೆ ದಿಂಸೋಲ್ ಎಂಬ ಟೈಟಲ್‌ ಇಡಲಾಗಿದೆ. ಇತ್ತೀಚೆಗಷ್ಟೇ ಆ ಚಿತ್ರದ ಫಸ್ಟ್‌ ಲುಕ್‌ ಸಹ ಬಿಡುಗಡೆ ಆಗಿದೆ.

ಕಿರಿಕ್ ಪಾರ್ಟಿ ಸಿನಿಮಾಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ಅಭಿರಾಮಚಂದ್ರ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದರು. ಮೊದಲ ಚಿತ್ರದಲ್ಲಿ ಬಾಲ್ಯ, ಸ್ನೇಹದ ಜೊತೆಗೆ ತ್ರಿಕೋನ ಪ್ರೇಮಕಥೆ ಹೇಳಿದ್ದ ಅವರಿಗ ಕರಾವಳಿ ಸಂಸ್ಕೃತಿಯ ಸೊಗಡನ್ನು ದಿಂಸೋಲ್ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ.

ಕರಾವಳಿ ಭಾಗದ ಕಲಾವಿದರ ದಂಡು

ಅಭಿರಾಮಚಂದ್ರ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ರಥಕಿರಣ್ ಹಾಗೂ ಶಿವಾನಿ ರೈ ದಿಂಸೋಲ್ ಚಿತ್ರದಲ್ಲಿಯೂ ನಾಯಕ- ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಮಾನಸಿ ಸುಧೀರ್, ದೇವದಾಸ್ ಕಾಪಿಕಾಡ್, ರಘು ಪಾಂಡೇಶ್ವರ್, ದೀಪಕ್ ರೈ ಪಣಾಜಿ, ಮೈಮ್ ರಾಮ್ ದಾಸ್, ಗಣೇಶ್ ಕಾರಂತ್, ಸೂರಜ್ ಹಾಗೂ ಸುರಭಿ ಹಾಗೂ ಕರಾವಳಿ ಭಾಗದ ಸಾಕಷ್ಟು ರಂಗಭೂಮಿ ಕಲಾವಿದರು ತಾರಾಬಳಗದಲ್ಲಿದ್ದಾರೆ.

ತಾಂತ್ರಿಕ ಬಳಗ ಹೇಗಿದೆ..

ದಿಂಸೋಲ್ ಸಿನಿಮಾಗೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಪ್ರತೀಕ್ ಶೆಟ್ಟಿ ಸಂಕಲನ, ನಾಗೇಂದ್ರ ಗಾಣಿಗ ಸಾಹಿತ್ಯ, ಸಂಭಾಷಣೆ ಬರೆಯುತ್ತಿದ್ದು, ಕೆಜಿಎಫ್ ಮ್ಯೂಸಿಕ್ ಮಾಂತ್ರಿಕ ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕೆ ಇರಲಿದೆ. ಸಂಹಿತಾ ಪ್ರೊಡಕ್ಷನ್ ನಡಿ ದಿಂಸೋಲ್ ಚಿತ್ರ ಮೂಡಿಬರಲಿದೆ.

ಏನಿದು ದಿಂಸೋಲ್‌?

ಕರಾವಳಿ ಭಾಗದಲ್ಲಿ ಶಿವರಾತ್ರಿ ಸಂದರ್ಭದಲ್ಲಿ ನಡೆಯುವ ಆಚರಣೆಯೇ ದಿಂಸೋಲ್. ದಿಂಸೋಲ್ ಹಾಗೂ ಕರಾವಳಿ ಎಲ್ಲ ಸಂಸ್ಕೃತಿಯನ್ನು ಈ ಚಿತ್ರದ ಮೂಲಕ ನಾಗೇಂದ್ರ ದೃಶ್ಯರೂಪಕ್ಕೆ ಇಳಿಸುತ್ತಿದ್ದಾರೆ. ಫಸ್ಟ್ ಲುಕ್ ಸಂಪೂರ್ಣ ಕೆಂಪು ಬಣ್ಣದಿಂದ ಕೂಡಿದೆ. ಆದಿದೇವಿಯು ರಕ್ತೇಶ್ವರಿ ಉಗ್ರ ಅವತಾರ ತಾಳಿದ್ದು, ಪೋಸ್ಟರ್ ನಾನಾ ಕಥೆ ಹೇಳುತ್ತಿದೆ. ನವೆಂಬರ್‌ 6ರಂದು ಚಿತ್ರತಂಡ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದ್ದು, ಡಿಸೆಂಬರ್ ತಿಂಗಳಲ್ಲಿ ಇಡೀ ಕರಾವಳಿ ಭಾಗದಲ್ಲಿ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Whats_app_banner