‘ಕಾಂಟ್ರವರ್ಸಿ ಪ್ರಚಾರ ನಮಗೆ ಬೇಕಿಲ್ಲ’; ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆಗೆ ಸನಿಹ ಬರ್ತಿದ್ದಂತೆ ನಿರ್ದೇಶಕ ನಾಗಶೇಖರ್ ಮಾತು
ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಶತಾಯಗತಾಯ ಜೂನ್‌ನಲ್ಲಿ ಸಿನಿಮಾ ತೆರೆಗೆ ತರಲೇಬೇಕು ಎಂದು ಶ್ರಮಿಸುತ್ತಿದ್ದಾರೆ ನಿರ್ದೇಶಕ ನಾಗಶೇಖರ್. ಅದರಂತೆ, ಚಿತ್ರೀಕರಣದ ಜತೆಗೆ ಡಬ್ಬಿಂಗ್ ಕೆಲಸಕ್ಕೂ ಚಾಲನೆ ನೀಡಿದ್ದಾರೆ.
Sanju weds Geetha 2: ನಿರ್ದೇಶಕ ನಾಗಶೇಖರ್ ಪ್ರೇಮಕಥೆಯುಳ್ಳ ಹಿಟ್ ಸಿನಿಮಾಗಳನ್ನು ಚಂದನವನಕ್ಕೆ ನೀಡಿದ್ದಾರೆ. ಸಂಜು ವೆಡ್ಸ್ ಗೀತಾ ಇಂದಿಗೂ ಟಾಪ್ ಮ್ಯೂಸಿಕಲ್ ಲವ್ ಸ್ಟೋರಿ. ಹಾಡುಗಳಿಂದಲೇ ಹೆಚ್ಚು ಹೆಸರು ಮಾಡಿದ್ದ ಆ ಸಿನಿಮಾ, ದಶಕಗಳ ಬಳಿಕ ಅದೇ ಕಥೆಯನ್ನು ಸೀಕ್ವೆಲ್ ರೂಪದಲ್ಲಿ ಕಟ್ಟಿಕೊಡಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸಂಜು ವೆಡ್ಸ್ ಗೀತಾ ಪಾರ್ಟ್ 2 ಸಿನಿಮಾ ಘೋಷಣೆ ಮಾಡಿ, ಶೂಟಿಂಗ್ ಕೆಲಸವನ್ನೂ ಮುಗಿಸಿದ್ದಾರೆ. ರಮ್ಯಾ ಬದಲಿಗೆ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜತೆಯಾಗಿದ್ದಾರೆ.
ಕಳೆದ ವರ್ಷವೇ ಸೆಟ್ಟೇರಿದ್ದ ಈ ಸಿನಿಮಾ ಈಗಾಗಲೇ ಒಟ್ಟು 3 ಹಂತಗಳಲ್ಲಿ ಚಿತ್ರೀಕರಣವನ್ನೂ ಮುಗಿಸಿಕೊಂಡಿದೆ. ಇದೀಗ ಶೂಟಿಂಗ್‌ನ ಗ್ಯಾಪ್‌ನಲ್ಲಿಯೇ ಯುಗಾದಿ ಹಬ್ಬದ ದಿನದಂದೇ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಟಾಕಿ ಪೋರ್ಷನ್ ಡಬ್ಬಿಂಗ್ ಕೆಲಸಕ್ಕೆ ಚಿತ್ರತಂಡ ಚಾಲನೆ ನೀಡಿದೆ. ಈ ವೇಳೆ ಚಿತ್ರದ ಅಪ್‌ಡೇಟ್ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ನಾಗಶೇಖರ್, ನಮ್ಮ ಈ ಸಿನಿಮಾ ಇಷ್ಟೊಂದು ರಿಚ್ ಆಗಿ ಮೂಡಿಬರಲು ಚಿತ್ರದ ನಿರ್ಮಾಪಕರೇ ಕಾರಣ ಎಂದರು.
ಇದು ರೇಷ್ಮೆ ನೂಲಿನ ಕಥೆ
"ಬೆಂಗಳೂರಿನಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್‌ಗಳಲ್ಲಿ ಶೂಟ್ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ. ಶಿಡ್ಲಘಟ್ಟ ರೇಷ್ಮೆಗೆ ದೊಡ್ಡ ಮಾರ್ಕೆಟ್ ಇದೆ. ನಮ್ಮ ರೇಷ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರದ ಕಥೆಯನ್ನು ಬಿಟ್ಟುಕೊಟ್ಟರು ನಿರ್ದೇಶಕರು.
ಕಾಂಟ್ರವರ್ಸಿ ಪ್ರಚಾರ ಬೇಡ..
ಆರ್ಟಿಫೀಷಿಯಲ್ ಪ್ರೇಮಕಥೆ ಮಾಡೋದಕ್ಕಿಂತ ನಮ್ಮ ಮಣ್ಣಿನ ಹೋರಾಟದ ಕಥೆ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇನೆ. ಎಂದಿನಂತೆ ನನ್ನ ಸಿನಿಮಾಗಳಿಲ್ಲಿ ಹಾಡಿಗೆ ದೊಡ್ಡ ಸ್ಥಾನ. ಇಲ್ಲಿಯೂ ಅದು ಮುಂದುವರಿಯಲಿದೆ. ಈಗಾಗಲೇ ಹಾಡು ಕೇಳಿದವರಿಂದ ಮೆಚ್ಚುಗೆ ಸಿಕ್ಕಿದೆ. ಆನಂದ್ ಆಡಿಯೋದವ್ರು ಹಾಡುಗಳ ಹಕ್ಕು ಖರೀದಿಸಿದ್ದಾರೆ. ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ ಮೇ ಎಂಡ್ ಫಸ್ಟ್ ಕಾಪಿ ಬರುತ್ತದೆ ಎಂದರು ನಾಗಶೇಖರ್.
ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ
ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ, ಚಿತ್ರದಲ್ಲಿ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡುತ್ತಿದ್ದೇವೆ. ಚಿತ್ರದಲ್ಲಿ ತುಂಬಾ ಮೆಲೋಡಿಯಸ್ ಹಾಡುಗಳಿವೆ. ಮತ್ತೊಂದು ಅದ್ಭುತ ಪ್ರೇಮಕಾವ್ಯ ಇದಾಗಲಿದೆ ಎಂದರು. ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ, 40 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲೂ ಸಹ ತೊಂದರೆಯಾಗದೆ, ಸರಾಗವಾಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು.
ನಿರ್ದೇಶನದ ಜತೆಗೆ ತಮ್ಮ ನಾಗಶೇಖರ್ ಮೂವೀಸ್ ಬ್ಯಾನರ್ ಮತ್ತು ಪವಿತರ ಇಂಟರ್ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದಲ್ಲಿ ಮಹಾನಂದಿ ಕ್ರಿಯೇಶನ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ ೫ ಸುಂದರ ಟ್ಯೂನ್ ಕಂಪೋಜ್ ಮಾಡಿದ್ದು ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ.