Nandita Swetha: ಫೈಬ್ರೊಮ್ಯಾಲ್ಗಿಯಾ ಎಂಬ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ; ನಂದ ಲವ್ಸ್ ನಂದಿತ ಸಿನಿಮಾ ಖ್ಯಾತಿಯ ನಟಿ ನಂದಿತಾ ಶ್ವೇತಾ
ಈ ಸಮಸ್ಯೆಯಿಂದ ಬಳಲುವವರಿಗೆ ಕೀಲು ನೋವು ಪ್ರಮುಖವಾಗಿ ಕಾಣಿಸಿಕೊಳ್ಳುವುದರಿಂದ ಬಹಳ ಬೇಗ ಆಯಾಸವಾಗುತ್ತದೆ. ನೆನಪಿನ ಶಕ್ತಿಯನ್ನೂ ಕುಂದಿಸುತ್ತದೆ ಎಂದು ಶ್ವೇತಾ ಹೇಳಿಕೊಂಡಿದ್ದಾರೆ.
ಜಿಂಕೆ ಮರೀನಾ ನೀ ಜಿಂಕೆ ಮರೀನಾ...'ನಂದ ಲವ್ಸ್ ನಂದಿತ' ಸಿನಿಮಾದ ಈ ಹಾಡು ಈಗಲೂ ಹುಡುಗರ ಮೋಸ್ಟ್ ಫೇವರೆಟ್. ನಾಯಕಿ ಶ್ವೇತಾ ಈ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯವಾದರು. ಸಿನಿಮಾ ನಂತರ ಅವರು ನಂದಿತ ಶ್ವೇತಾ ಎಂದೇ ಹೆಸರು ಬದಲಿಸಿಕೊಂಡರು. ಸದ್ಯಕ್ಕೆ ಈ ಬ್ಯೂಟಿ ತಮಿಳು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ.
ತಮಿಳಿನಲ್ಲಿ ಬ್ಯುಸಿ ಇರುವ ಶ್ವೇತಾ
2008 ರಲ್ಲಿ ತೆರೆ ಕಂಡ 'ನಂದ ಲವ್ಸ್ ನಂದಿತ' ಸಿನಿಮಾ ನಂತರ ಶ್ವೇತಾಗೆ ನಂತರ ತಮಿಳು ಸಿನಿಮಾದಲ್ಲಿ ಅವಕಾಶ ದೊರೆಯಿತು. 2012ರಲ್ಲಿ ಅಡ್ಡಗತ್ತಿ ಸಿನಿಮಾ ಮೂಲಕ ಕಾಲಿವುಡ್ ಪ್ರವೇಶಿಸಿದ ಈ ಚೆಲುವೆ ಈಗ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದಾರೆ. ತಮಿಳು ಮಾತ್ರವಲ್ಲ, ತೆಲುಗಿನಲ್ಲಿ ಕೂಡಾ ಶ್ವೇತಾ ನಟಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್ ಇರುವ ಶ್ವೇತಾ ತಾವು ವಿಚಿತ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಫೈಬ್ರೊಮ್ಯಾಲ್ಗಿಯಾ ಸಮಸ್ಯೆಯಿಂದ ಬಳಲುತ್ತಿರುವ ನಟಿ
ಶ್ವೇತಾ ಸದ್ಯಕ್ಕೆ 'ಹಿಡಿಂಬ' ಎಂಬ ಚಿತ್ರದ ಪ್ರಮೋಷನ್ನಲ್ಲಿದ್ದಾರೆ. ಈ ವೇಳೆ ಅವರು ತಮಗಿರುವ ವಿಚಿತ್ರ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾರೆ. ''ತನಗೆ ಫೈಬ್ರೊಮ್ಯಾಲ್ಗಿಯಾ ಎಂಬ ಸ್ನಾಯು ಅಸ್ವಸ್ಥತೆ ಇದೆ. ಇದರಿಂದ ಸ್ವಲ್ಪ ಹೆಚ್ಚಿಗೆ ಕೆಲಸ ಮಾಡಿದರೂ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ. ಭಾರವಾದ ವಸ್ತುಗಳನ್ನು ಎತ್ತುವುದಾಗಲೀ, ಅತ್ಯಂತ ಶ್ರಮ ಪಟ್ಟು ಕೆಲಸ ಮಾಡುವುದಾಗಲೀ ಆಗುತ್ತಿಲ್ಲ. ಈ ಸಮಸ್ಯೆಯಿಂದ ಬಳಲುವವರಿಗೆ ಕೀಲು ನೋವು ಪ್ರಮುಖವಾಗಿ ಕಾಣಿಸಿಕೊಳ್ಳುವುದರಿಂದ ಬಹಳ ಬೇಗ ಆಯಾಸವಾಗುತ್ತದೆ. ನೆನಪಿನ ಶಕ್ತಿಯನ್ನೂ ಕುಂದಿಸುತ್ತದೆ. ಇಷ್ಟಾದರೂ ಹಿಡಿಂಬ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟು ವರ್ಕೌಟ್ ಮಾಡಿ ತೂಕ ಇಳಿಸಿಕೊಂಡಿದ್ದೇನೆ'' ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಕೇಳಿದವರು ಆದಷ್ಟು ಬೇಗ ಈ ಸಮಸ್ಯೆಯಿಂದ ಹೊರ ಬನ್ನಿ ಎಂದು ಹಾರೈಸುತ್ತಿದ್ದಾರೆ.
ಜುಲೈ 20 ರಂದು ಹಿಡಿಂಬ ತೆರೆಗೆ
'ಹಿಡಿಂಬ' ಚಿತ್ರದಲ್ಲಿ ನಂದಿತಾ ಶ್ವೇತಾ ಇನ್ವೆಷ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಆಗಿತ್ತು. ಶ್ವೇತಾ ಬೋಲ್ಡ್ ದೃಶ್ಯಗಳಲ್ಲಿ ಕೂಡಾ ನಟಿಸಿದ್ದಾರೆ. ಜುಲೈ 20 ರಂದು ತೆರೆ ಕಾಣುತ್ತಿರುವ 'ಹಿಡಿಂಬ' ಸಿನಿಮಾವನ್ನು ಎಸ್ವಿಕೆ ಸಿನಿಮಾಸ್ ಬ್ಯಾನರ್ ಅಡಿ ಶ್ರೀಧರ್ ಗಂಗಪಟ್ನಂ ನಿರ್ಮಿಸಿದ್ದಾರೆ. ಅನಿಲ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದಾರೆ.