90ರ ಕಾಲಘಟ್ಟದ ಪ್ರೇಮಕಥೆಯನ್ನು ಹೇಳಲು ಬರುತ್ತಿದೆ ‘1990s’ ಶೀರ್ಷಿಕೆಯ ಸಿನಿಮಾ; ಐದು ಭಾಷೆಗಳ ಟೀಸರ್ ಬಿಡುಗಡೆ
ಈ ಸಿನಿಮಾ ಶೀರ್ಷಿಕೆಯೇ 1990s. ಇದೀಗ ಇದೇ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಚಿತ್ರದ ಟೈಟಲ್ ಹೇಳುವಂತೆಯೇ ಇದು 90ರ ಕಾಲಘಟ್ಟದ ಕಥೆಯಾಗಿದೆ.
1990s Kannada Movie Teaser: 90ರ ಕಾಲಘಟ್ಟದವರ ಪ್ರೇಮಕಥೆಯನ್ನು "1990s" ಚಿತ್ರದ ಮೂಲಕ ಹೇಳಲು ಬರುತ್ತಿದೆ ಹೊಸಬರ ತಂಡ. ಅದೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಎಂಬುದು ವಿಶೇಷ. ಇದೀಗ ಈ "1990s" ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಮನಸ್ಸು ಮಲ್ಲಿಗೆ ಕಂಬೈನ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ನಂದಕುಮಾರ್ ನಿರ್ದೇಶಿಸಿರುವ ಹಾಗೂ ಅರುಣ್- ರಾಣಿ ವರದ್ ಅಭಿನಯದ 1990s ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಲಹರಿ ವೇಲು ಸೇರಿದಂತೆ ಅನೇಕ ಗಣ್ಯರು ನಾಲ್ಕು ಭಾಷೆಗಳ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು. ಹಿಂದಿ ಟೀಸರ್ ತಾಂತ್ರಿಕ ಕಾರಣದಿಂದ ಬಿಡುಗಡೆಯಾಗಲಿಲ್ಲ. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
"ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಿರ್ದೇಶಕನಾಗಿ ಇದು ಚೊಚ್ಚಲ ಚಿತ್ರ. ಈ ಚಿತ್ರ ಆಗಲು ಪ್ರಮುಖ ಕಾರಣ ಚಿತ್ರದ ಛಾಯಾಗ್ರಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲನಕಾರ ಕೃಷ್ಣ ಹಾಗೂ ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಹಾಗೂ ಚಿತ್ರದ ನಾಯಕ ಅರುಣ್. ಇವರೆಲ್ಲರೂ ನನ್ನ ಜೊತೆಗೆ ಕೈಜೋಡಿಸಿದ್ದು ನಾನು ಈ ಚಿತ್ರ ನಿರ್ದೇಶನ ಮಾಡಲು ಕಾರಣವಾಯಿತು. ಇವರೆಲ್ಲರಿಗೂ ಹಾಗೂ ನಿರ್ಮಾಣ ಸಂಸ್ಥೆ ಮನಸ್ಸು ಮಲ್ಲಿಗೆ ಕಂಬೈನ್ಸ್ ಗೆ ನಾನು ಆಬಾರಿ ಎಂದರು ನಿರ್ದೇಶಕ ನಂದಕಿಶೋರ್.
ಇನ್ನು ಇದು 1990s ತೊಂಭತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್ ಹಾಗೂ ರಾಣಿ ವರದ್ ನಾಯಕ - ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು 1990 ಎಂದು ಇಡಲಾಗಿದೆ ಎಂದರು ನಿರ್ದೇಶಕ ನಂದಕಿಶೋರ್.
ರಂಗಭೂಮಿ ಕಲಾವಿದನಾಗಿ ಹತ್ತುವರ್ಷಗಳ ಅನುಭವವಿರುವ ನನಗೆ ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನಂದಕಿಶೋರ್ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ. ಈ ಚಿತ್ರದಲ್ಲಿ ನನ್ನದು ಮುಗ್ದ ಪ್ರೇಮಿಯ ಪಾತ್ರ ಎಂದು ತಿಳಿಸಿದ ನಾಯಕ ಅರುಣ್, ನಾನು ಹಿರಿಯ ಛಾಯಾಗ್ರಾಹಕ ಜನಾರ್ದನ್ ಅವರ ಪುತ್ರ ಎಂದರು. ಛಾಯಾಗ್ರಾಹಕ ಹಾಲೇಶ್, ಸಂಗೀತ ನಿರ್ದೇಶಕ ಮಹಾರಾಜ, ಸಂಕಲಕಾರ ಕೃಷ್ಣ, ನೃತ್ಯ ನಿರ್ದೇಶಕ ಸಾದಿಕ್ ಸರ್ದಾರ್ ಮುಂತಾದ ತಂತ್ರಜ್ಞರು ಹಾಗೂ ಕಲಾವಿದರು "1990s" ಕುರಿತು ಮಾತನಾಡಿದರು.