ಗಾಂಧಿ ಸಿನಿಮಾದ ಬಳಿಕ ಮಹಾತ್ಮ ಗಾಂಧೀಜಿ ಫೇಮಸ್ ಆದ್ರು; ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಮೆಚ್ಚಿದ ನಟ ಚೇತನ್ ಅಹಿಂಸಾ
ಗಾಂಧಿ ಸಿನಿಮಾದ ಮೂಲಕ ಮಹಾತ್ಮ ಗಾಂಧೀಜಿ ಕುರಿತು ಜಗತ್ತಿಗೆ ಇವರ ಬಗ್ಗೆ ತಿಳಿಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕುರಿತು ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡ ನಟ ಚೇತನ್ ಅಹಿಂಸಾ ಮೋದಿ ಹೇಳಿಕೆಯನ್ನು ಒಪ್ಪಿದ್ದಾರೆ. ಇದು ಮೋದಿಯವರ ಒನ್ಸ್ ಇನ್ ಎ ಬ್ಲೂ ಮೂನ್ ಸಂವೇದನಾಶೀಲ ಹೇಳಿಕೆ ಎಂದು ಹೇಳಿದ್ದಾರೆ.
ಬೆಂಗಳೂರು: ಗಾಂಧಿ ಸಿನಿಮಾ ಬರುವ ಮೊದಲು ಜಗತ್ತಿಗೆ ಮಹಾತ್ಮ ಗಾಂಧಿ ಬಗ್ಗೆ ಹೆಚ್ಚು ತಿಳಿದಿರಲಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಪರವಿರೋಧ ಚರ್ಚೆಯಾಗುತ್ತಿದೆ. "ಮಹಾತ್ಮ ಗಾಂಧಿ ಒಬ್ಬ ಶ್ರೇಷ್ಠ ಭಾರತೀಯ. ಆದರೆ, ಜಗತ್ತಿಗೆ ಅವರ ಕುರಿತು ಹೆಚ್ಚು ತಿಳಿದಿರಲಿಲ್ಲ. ಗಾಂಧಿ ಸಿನಿಮಾದ ಮೂಲಕ ಜಗತ್ತಿಗೆ ಇವರ ಬಗ್ಗೆ ತಿಳಿಯಿತು" ಎಂದು ಮೋದಿ ಹೇಳಿಕೆ ನೀಡಿದ್ದರು. ಇದೇ ಸಂದರ್ಭದಲ್ಲಿ ಕನ್ನಡ ನಟ ಚೇತನ್ ಅಹಿಂಸಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ನಿಜ, ಇದು ಮೋದಿಯವರ ಒನ್ಸ್ ಇನ್ ಎ ಬ್ಲೂ ಮೂನ್ ಸಂವೇದನಾಶೀಲ ಹೇಳಿಕೆ" ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.
ಚೇತನ್ ಅಹಿಂಸಾ ಪ್ರತಿಕ್ರಿಯೆ
‘ಗಾಂಧಿ' ಚಿತ್ರ ಬಿಡುಗಡೆಯಾದ ನಂತರ ಮೋಹನ್ ದಾಸ್ ಗಾಂಧಿ ದೊಡ್ಡ ಜಾಗತಿಕ ವ್ಯಕ್ತಿತ್ವವಾಗಿ ಮಾರ್ಪಟ್ಟರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಿಜ — ಮೋದಿಯವರ ಒನ್ಸ್ ಇನ್ ಎ ಬ್ಲೂ ಮೂನ್ ಸಂವೇದನಾಶೀಲ ಹೇಳಿಕೆ. ರಿಚರ್ಡ್ ಅಟೆನ್ಬರೋ ಅವರ 30 ವರ್ಷಗಳ 'ಗಾಂಧಿ' ಭಾರತದ ಕಾಂಗ್ರೆಸ್ ಪಕ್ಷದಿಂದ ಧನಸಹಾಯ ಪಡೆದ ಪ್ರಚಾರ (ಪ್ರೊಪಗಾಂಡಾ) ಚಿತ್ರವಾಗಿತ್ತು. ಸರಾಸರಿ ರಾಷ್ಟ್ರ ನಿರ್ಮಾಪಕರಾಗಿದ್ದ ಗಾಂಧಿಯನ್ನು ಅಸಾಧಾರಣ ಎಂದು ತಪ್ಪಾಗಿ ಚಿತ್ರಿಸಲಾಗಿತ್ತು" ಎಂದು ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ಚೇತನ್ ಪ್ರತಿಕ್ರಿಯೆ ಕುರಿತು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ಪ್ರಧಾನಿ ಅವರ ಹೇಳಿಕೆ ವಿಚಿತ್ರವಾಗಿದೆ ನಿಜ. ಆದರೆ ಅದಕ್ಕಿಂತ ವಿಚಿತ್ರವಾದುದು ಈ ಅರೆಬರೆ ಚೇತನ್ ಪೋಸ್ಟ್ ಆಗಿದೆ. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಗೊತ್ತಿಲ್ಲದೆಯೇ ವಿಶ್ವಸಂಸ್ಥೆ 1948 ಜನವರಿ 30 ರಂದು ಗಾಂಧೀಜಿ ಹತ್ಯೆಯಾದಾಗ ತನ್ನ ಧ್ವಜವೂ ಸೇರಿದಂತೆ ತನ್ನೆಲ್ಲ ಸದಸ್ಯ ರಾಷ್ಟ್ರಗಳ ಧ್ವಜಗಳನ್ನು ಅರ್ಧ ಮಟ್ಟಕ್ಕೆ ಇಳಿಸಿ ಗೌರವ ಸೂಚಿಸಿತಾ ಹೇಗೆ ?. 1930ರಲ್ಲಿಯೇ ಟೈಮ್ಸ್ ಮ್ಯಾಗಜಿನ್ ಮುಖ ಪುಟ ಅಲಂಕರಿಸಿದ ಏಕೈಕ ಭಾರತೀಯ ಗಾಂಧೀಜಿಯವರಾಗಿದ್ದರು.
ಪ್ರಪಂಚಕ್ಕೆ ಗೊತ್ತಾಗದೆ ಇದು ನಡೆಯಿತ ಹೇಗೆ? ಇಂತಹ ಇತಿಹಾಸವನ್ನು ಅರೆಬರೆಗಳಿಗೆ ಹೇಳಿ ಕೊಡುವ ಅಗತ್ಯ ಇವತ್ತು ಅತೀ ತುರ್ತಾಗಿದೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳು, ಸೌಮ್ಯವಾದಿಗಳು ಇಬ್ಬರೂ ಹೋರಾಡಿದ್ದಾರೆ. ಗಾಂಧಿಯವರ ನೇತೃತ್ವದಲ್ಲಿ ಜನರ ಪಾಲ್ಗೊಳ್ಳುವ ಮೂಲಕ ಅಹಿಂಸೆಯ ತತ್ವಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ .ಎರಡು ತಂಡಗಳಲ್ಲಿ ಸಮರ್ಥರನ್ನ ಕಾಣಬಹುದು. ಅಂತಿಮವಾಗಿ ಗಾಂಧಿಯ ನೇತೃತ್ವ ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿ ಆಯಿತು" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
"ವಸಾಹತುಶಾಹಿ ನಂತರದ ಭಾರತದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬಗ್ಗೆ ಸಿನಿಮಾ ಮಾಡುವವರೆಗೂ ಯಾರಿಗೂ ಅವರ ಬಗ್ಗೆ ಗೊತ್ತಿರಲಿಲ್ಲ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಬ್ರಿಟಿಷ್ ನಿರ್ದೇಶಕ ರಿಚರ್ಡ್ ಅಟೆನ್ಬರೋ ಅವರ ಅಕಾಡೆಮಿ ಪ್ರಶಸ್ತಿ ವಿಜೇತ 1982 ರ ಶ್ರೇಷ್ಠ ಕೃತಿ ‘ಗಾಂಧಿ’ ಕುರಿತು ಮಾತನಾಡುವ ಸಂದರ್ಭದಲ್ಲಿ ಈ ಅಭಿಪ್ರಾಯವ್ಯಕ್ತಪಡಿಸಿದ್ದರು.
ಮಹಾತ್ಮಾ ಗಾಂಧಿ ಶ್ರೇಷ್ಠ ಭಾರತೀಯ
ಲೋಕಸಭೆ ಚುನಾವಣೆ 2024ರ ಪೂರ್ವಭಾವಿ ಸಂದರ್ಶನದಲ್ಲಿ ಸುದ್ದಿ ವಾಹಿನಿಯೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ನೀಡುವಾಗ ಈ ಹೇಳಿಕೆ ನೀಡಿದ್ದರು. " ಮಹಾತ್ಮ ಗಾಂಧಿ ಒಬ್ಬ ಶ್ರೇಷ್ಠ ಭಾರತೀಯ. ಆದರೆ, ಜಗತ್ತಿಗೆ ಅವರ ಕುರಿತು ಹೆಚ್ಚು ತಿಳಿದಿರಲಿಲ್ಲ. ಈ ಸಿನಿಮಾದ ಮೂಲಕ ಜಗತ್ತಿಗೆ ಇವರ ಬಗ್ಗೆ ತಿಳಿಯಿತು. ಸ್ವಾತಂತ್ರ್ಯದ ನಂತರದ 75 ವರ್ಷಗಳಲ್ಲಿ ಜಗತ್ತು ಮಹಾನ್ ನಾಯಕನ ಬಗ್ಗೆ ಜಾಗೃತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಭಾರತೀಯ ರಾಜಕೀಯ ನಾಯಕರ ಜವಾಬ್ದಾರಿ" ಎಂದು ನರೇಂದ್ರ ಮೋದಿ ಹೇಳಿದ್ದರು. ಈ ಸಂದರ್ಶನದ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ತತ್ತ್ವಗಳ ಸಿನಿಮೀಯ ಚಿತ್ರಣದಿಂದ ಜಾಗತಿಕ ಮನ್ನಣೆ ಪ್ರಭಾವಿತವಾಗಿದೆ. ಮಹಾತ್ಮ ಗಾಂಧೀಜಿಯವರ ಸಿನಿಮಾ ಮಾಡಿದಾಗ ಜಗತ್ತು ಗಾಂಧಿ ಕುರಿತು ಹೆಚ್ಚು ಕುತೂಹಲದಿಂದ ನೋಡಿತ್ತು ಎಂದು ಮೋದಿ ಹೇಳಿದ್ದರು.
ವಿಭಾಗ