Sandalwood News: ಮೆಜೆಸ್ಟಿಕ್, ಶಿವಾಜಿನಗರ ಆಯ್ತು ಇದೀಗ ಎಲೆಕ್ಟ್ರಾನಿಕ್ ಸಿಟಿ ಹೆಸರಲ್ಲಿ ರೆಡಿಯಾಯ್ತು ಕನ್ನಡ ಸಿನಿಮಾ
Electronic city: ಸ್ಯಾಂಡಲ್‌ವುಡ್‌ನಲ್ಲಿ ಮೆಜೆಸ್ಟ್ರಿಕ್, ಶಿವಾಜಿನಗರ ಸೇರಿದಂತೆ ವಿವಿಧ ಹೆಸರುಳ್ಳ ಕನ್ನಡ ಚಿತ್ರಗಳು ಬಂದಿವೆ. ಬೆಂಗಳೂರಿನ ಐಟಿ, ಕೈಗಾರಿಕಾ ಸಿಟಿಯಾಗಿರುವ ಎಲೆಕ್ಟ್ರಾನಿಕ್ ಸಿಟಿ ಹೆಸರಲ್ಲೂ ಚಿತ್ರವೊಂದು ನಿರ್ಮಾಣಗೊಂಡಿದೆ.
ಬೆಂಗಳೂರು: ಉದ್ಯಾನನಗರಿಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಸಾಕಷ್ಟು ಜನರಿಗೆ ಚಿರಪರಿಚಿತ ಹೆಸರು. ಸಾಕಷ್ಟು ಜನರು "ಬೆಂಗಳೂರಲ್ಲಿ ಎಲ್ಲಿ ಇರೋದು?" ಎಂಬ ಪ್ರಶ್ನೆಗೆ ಎಲೆಕ್ಟ್ರಾನಿಕ್ ಸಿಟಿ ಎಂದು ಹೇಳುತ್ತಾರೆ. ಮೆಜೆಸ್ಟಿಕ್, ಪೀಣ್ಯ, ಶಿವಾಜಿನಗರ, ಜಯನಗರಗಳಂತೆ ಎಲೆಕ್ಟ್ರಾನಿಕ್ ಸಿಟಿಯೂ ಜನಪ್ರಿಯ ಹೆಸರು. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮೆಜೆಸ್ಟಿಕ್ ಸಿನಿಮಾ ಬಂದಿದೆ. ಇದೇ ರೀತಿ ದುನಿಯಾ ವಿಜಯ್ ಅವರ ಶಿವಾಜಿನಗರವನ್ನೂ ಬಹುತೇಕರು ನೋಡಿರುತ್ತೀರಿ. ಇನ್ಮುಂದೆ ಎಲೆಕ್ಟ್ರಾನಿಕ್ ಸಿಟಿ ಹೆಸರಿನ ಚಿತ್ರವೊಂದನ್ನೂ ನೋಡಬಹುದು.
ಎಲೆಕ್ಟ್ರಾನಿಕ್ ಸಿಟಿ ಕನ್ನಡ ಸಿನಿಮಾ
ಅಂದಹಾಗೆ ಎಲೆಕ್ಟ್ರಾನಿಕ್ ಸಿಟಿ ಹೆಸರಿನ ಚಿತ್ರವು ಸ್ಟಾರ್ ನಟರ ಚಿತ್ರವಲ್ಲ. ಇದು ಐಟಿ ಉದ್ಯೋಗಿ ಆರ್ ಚಿಕ್ಕಣ್ಣ ನಿರ್ಮಾಣದ ಚಿತ್ರವಾಗಿದೆ. ವಿವಿಧ ಉದ್ಯೋಗಗಳಲ್ಲಿ, ವಿಶೇಷವಾಗಿ ಐಟಿ ಉದ್ಯೋಗಗಳಲ್ಲಿ ಯುವ ಜನತೆ ಪಡುವ ಕಷ್ಟವನ್ನು ಮನಗಂಡು ಅವರ ಜೀವನದ ಕುರಿತು ಎಲೆಕ್ಟ್ರಾನಿಕ್ ಸಿಟಿ ಚಿತ್ರ ಮಾಡಲಾಗಿದೆ. ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯೂ ಇದೆ ಎಂದು ಚಿತ್ರತಂಡ ತಿಳಿಸಿದೆ. ಎಲೆಕ್ಟ್ರಾನಿಕ್ ಸಿಟಿ ಚಿತ್ರ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಿದೆ.
ಹಲವು ಪ್ರಶಸ್ತಿ ಪಡೆದ ಎಲೆಕ್ಟ್ರಾನಿಕ್ ಸಿಟಿ
ಸ್ಯಾಂಡಲ್‌ವುಡ್‌ನ ನೂತನ ಚಿತ್ರ ಎಲೆಕ್ಟ್ರಾನಿಕ್ ಸಿಟಿ ಈಗಾಗಲೇ ಹಲವು ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಹಲವು ಪ್ರಶಸ್ತಿ ಪಡೆದಿದೆ. ಈ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಮುಂದಿನ ದಿನಗಳಲ್ಲಿ ನೋಡಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾವಾಗ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಈ ಚಿತ್ರವನ್ನು ಎಲೆಕ್ಟ್ರಾನಿಕ್ ಸಿಟಿಯವರು ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ವರ್ಕ್ ಲೈಪ್ ಬ್ಯಾಲೆನ್ಸ್‌ಗಾಗಿ ಪರದಾಡುವ ಎಲ್ಲರೂ ನೋಡಬಹುದು.
ಎಲೆಕ್ಟ್ರಾನಿಕ್ ಸಿಟಿ ಚಿತ್ರದ ತಾರಾಗಣ
ಎಲೆಕ್ಟ್ರಾನಿಕ ಸಿಟಿ ಚಿತ್ರದಲ್ಲಿ ಆರ್ಯುನ್ ಹರ್ಷ ನಾಯಕ. ದಿಯಾ ಆಶ್ಲೇಶ, ರಕ್ಷಿತ ಕೆರೆಮನೆ ನಾಯಕಿಯರು. ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿನು ಮನಸು ಸಂಗೀತ, ಚಂದ್ರಶೇಖರ್ ಶ್ರೀವಾಸ್ತವ್ ಗೀತರಚನೆ ಮಾಡಿದ್ದಾರೆ. ರಾಜ ಶಿವಶಂಕರ್ ಅವರ ಛಾಯಾಗ್ರಹಣ, ಸೌಂದರ್ ರಾಜ್ ಅವರ ಸಂಕಲನ, ಹಂಪಿ ಸುಂದರ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಐಟಿ ಉದ್ಯೋಗಿ ಆರ್ ಚಿಕ್ಕಣ್ಣ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವವೂ ಇವರಿಗಿದೆ.
ಪ್ರಮುಖ ಕಂಪನಿಗಳ ಕ್ಯಾಂಪಸ್ ಇರುವ ಎಲೆಕ್ಟ್ರಾನಿಕ್ ಸಿಟಿ
ಬೆಂಗಳೂರಿನ ಜನಪ್ರಿಯ ಪ್ರದೇಶವಿದು. ವಿಶೇಷವಾಗಿ ಅತ್ಯಧಿಕ ಐಟಿ ಕಂಪನಿಗಳಿರುವ ಪ್ರಮುಖ ಸ್ಥಳ. ಇದು ಆನೇಕಲ್ ತಾಲೂಕಿನಲ್ಲಿದೆ. ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೋಗೂರು ಬಳಿ 800 ಎಕರೆಯಷ್ಟು ಪ್ರದೇಶದಲ್ಲಿ ಎಲೆಕ್ಟ್ರಾನಿಕ್ ಸಿಟಿ ವ್ಯಾಪಿಸಿಕೊಂಡಿದೆ. ಎಲೆಕ್ಟ್ರಾನಿಕ್ ಮತ್ತು ಐಟಿ ಕೈಗಾರಿಕಾ ಪಾರ್ಕ್‌ಗಳು ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿವೆ. ಲಕ್ಷಾಂತರ ಜನರು ಇಲ್ಲಿ ಉದ್ಯೋಗ ಮಾಡುತ್ತಿದಾರೆ. ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಈ ಎಲೆಕ್ಟ್ರಾನಿಕ್ ಸಿಟಿಯನ್ನು ಆರಂಭಿಸಿದೆ. ಇನ್ಪೋಸಿಸ್, ವಿಪ್ರೋ, ಟಿಸಿಎಸ್, ಎಚ್‌ಸಿಎಲ್, ಟೆಕ್ ಮಹೀಂದ್ರ, ಬಯೋಕಾನ್‌ನ ಕ್ಯಾಂಪಸ್‌ಗಳು ಇದೇ ಎಲೆಕ್ಟ್ರಾನಿಕ್ ಸಿಟಿಯಲ್ಲಿವೆ. ಇನ್ನೂರುಕ್ಕೂ ಹೆಚ್ಚು ಐಟಿ ಮತ್ತು ಐಟಿಯೇತರ ಕಂಪನಿಗಳು ಇಲ್ಲಿವೆ.