ರಾಜ್ಯದಲ್ಲಿ ಏಕಪರದೆ ಚಿತ್ರಮಂದಿರಗಳ ಬಂದ್ ಇಲ್ಲ, ಕರ್ನಾಟಕಕ್ಕೂ ಬೇಕು ಕೇರಳದಂತಹ ಸರಕಾರಿ ಒಟಿಟಿ; ಫಿಲಂ ಚೇಂಬರ್ ಸಭೆಯ ಚರ್ಚೆಯ ಪ್ರಮುಖಾಂಶಗಳು
ಕರ್ನಾಟಕದಲ್ಲಿ ನಿರ್ದಿಷ್ಟ ಕಾಲದವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡದೆ ಇರುವ ತೀರ್ಮಾನಕ್ಕೆ ಫಿಲಂ ಚೇಂಬರ್ ಬಂದಿದೆ. ಇದೇ ಸಮಯದಲ್ಲಿ ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕರ್ನಾಟಕದಲ್ಲೂ ಕೇರಳ ಸರಕಾರ ಹೊರತಂದಿರುವಂತಹ ಒಟಿಟಿಯ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಕೇಳಿಬಂದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಏಕಪರದೆಯ ಚಿತ್ರಮಂದಿರಗಳನ್ನು ನಿರ್ದಿಷ್ಟ ಕಾಲದವರೆಗೆ ಬಂದ್ ಮಾಡುವ ಕುರಿತು ಫಿಲಂ ಚೇಂಬರ್ ಇಂದು ತನ್ನ ನಿರ್ಧಾರ ಪ್ರಕಟಿಸಿದೆ. ಫಿಲಂ ಚೇಂಬರ್ ಕರೆದಿದ್ದ ಸಭೆಯಲ್ಲಿ ಚಿತ್ರರಂಗದ ಪ್ರಮುಖರು ಭಾಗವಹಿಸಿ ಚರ್ಚಿಸಿದ್ದಾರೆ. ಐಪಿಎಲ್, ಚುನಾವಣೆಯ ಕಾರಣಗಳು ಇದ್ದರೂ, ಪ್ರಮುಖ ನಟರ ಸಿನಿಮಾಗಳು ಬಿಡುಗಡೆ ಇಲ್ಲದೆ ಇದ್ದರೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡದೆ ಇರಲು ನಿರ್ಧರಿಸಲಾಗಿದೆ. ಇದೇ ಸಮಯದಲ್ಲಿ ಕೇರಳ ಸರಕಾರ ಆರಂಭಿಸಿರುವಂತಹ ಸರಕಾರಿ ಒಟಿಟಿ ಕರ್ನಾಟಕಕ್ಕೂ ಬೇಕು ಎಂಬ ಅಭಿಪ್ರಾಯವ್ಯಕ್ತವಾಗಿದೆ.
ಸದ್ಯ ಜನರು ಚಿತ್ರಮಂದಿರಗಳಿಗೆ ಹೋಗಿ ಚಿತ್ರನೋಡುವುದು ಕಡಿಮೆಯಾಗಿದೆ. ಲೋಕಸಭೆ ಚುನಾವಣೆ, ದರ್ಶನ್, ಸುದೀಪ್‌ರಂತಹ ಸ್ಟಾರ್ ನಟರ ಸಿನಿಮಾಗಳ ಬಿಡುಗಡೆ ಇಲ್ಲದೆ ಇರುವುದು, ಐಪಿಎಲ್ ಕ್ರಿಕೆಟ್ ಇತ್ಯಾದಿ ಕಾರಣಗಳಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಜನರು ಬರುವುದು ಕಡಿಮೆಯಾಗಿದೆ. ಇದರಿಂದ ಏಕಪರದೆ ಚಿತ್ರಮಂದಿರಗಳ ನಿರ್ವಹಣೆ ಕಷ್ಟವಾಗಿದೆ. ಇದೇ ರೀತಿ ಕಷ್ಟ ಅನುಭವಿಸುತ್ತಿರುವ ನೆರೆಯ ರಾಜ್ಯ ತೆಲಂಗಾಣದಲ್ಲಿ ಕೆಲವು ಸಮಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿತ್ತು.
ಕರ್ನಾಟಕದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇರುವುದರಿಂದ ಏಕಪರದೆ ಚಿತ್ರಮಂದಿರಗಳನ್ನು ಬಂದ್ ಮಾಡಲು ಯೋಜಿಸಲಾಗಿದೆ ಎಂಬ ಸುದ್ದಿ ಹರಡಿತ್ತು. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇಂದು ಈ ಕುರಿತು ಚರ್ಚಿಸಲು ಸ್ಯಾಂಡಲ್‌ವುಡ್‌ನ ಪ್ರಮುಖರ ಸಭೆ ನಡೆಸಲಾಗಿದೆ. ಫಿಲಂ ಚೇಂಬರ್ ಕರೆದ ಈ ಸಭೆಯಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಿರ್ಮಾಪಕರು, ಹಿರಿಯ ನಿರ್ಮಾಪಕರನ್ನು ಕರೆಯಲಾಗಿತ್ತು. ಹಲವು ವಿತರಕರು, ನಿರ್ದೇಶಕರುಗಳು ಭಾಗಿಯಾಗಿದ್ದರು.
ವಿತರಕ ಜಯಣ್ಣ, ನಿರ್ದೇಶಕ, ನಿರ್ಮಾಪಕ ಆರ್ ಚಂದ್ರು, ಕೆ ಮಂಜು, ಹೊಂಬಾಳೆ ಫಿಲ್ಮ್ಸ್ ಪ್ರತಿನಿಧಿ ಚಿದಾನಂದ್, ನಿರ್ಮಾಪಕ ತರುಣ್ ಶಿವಪ್ಪ, ಕೆಪಿ ಶ್ರೀಕಾಂತ್, ಲಹರಿ ವೇಲು ಮುಂತಾದವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಸಾಕಷ್ಟು ವಿಷಯಗಳನ್ನು ಚರ್ಚಿಸಲಾಗಿದೆ. ಅಂತಿಮವಾಗಿ ನಿರ್ದಿಷ್ಟ ಸಮಯದವರೆಗೆ ಏಕಪರದೆ ಚಿತ್ರಮಂದಿರಗಳನ್ನು ಬಂದ್ ಮಾಡದೆ ಇರುವ ನಿರ್ಧಾರವನ್ನು ಫಿಲಂ ಚೇಂಬರ್ ಅಧ್ಯಕ್ಷರಾದ ಎನ್‌ಎಂ ಸುರೇಶ್ ಪ್ರಕಟಿಸಿದ್ದಾರೆ.
"ಇಂದಿನ ಸಭೆಯಲ್ಲಿ ಸ್ಯಾಂಡಲ್‌ವುಡ್ ಚಿತ್ರರಂದ ಕುರಿತು ಮತ್ತು ಥಿಯೇಟರ್‌ಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ನಾವು ಥಿಯೇಟರ್ ಬಂದ್ ಮಾಡುತ್ತೇವೆ ಎಂದು ಎಲ್ಲೂ ಹೇಳಿರಲಿಲ್ಲ. ಇಂದಿನ ಮೀಟಿಂಗ್‌ನಲ್ಲಿ ಚಿತ್ರರಂಗದ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ಈ ವಿಷಯದ ಕುರಿತು ಸರಕಾರದ ಜತೆಯೂ ಚರ್ಚಿಸಲಾಗುವುದು. ಪೋಸ್ಟ್ ಪ್ರೊಡಕ್ಷನ್ ಇತ್ಯಾದಿ ಕೆಲಸಗಳ ವಿಳಂಬದಿಂದ ಸ್ಟಾರ್ ನಟರ ಸಿನಿಮಾ ಬಿಡುಗಡೆ ತಡವಾಗುತ್ತದೆ. ಕೇರಳ ಸರಕಾರ ಅವರದ್ದೇ ಸ್ವಂತ ಒಟಿಟಿ ಮಾಡಿದೆ. ಇದೇ ಮಾದರಿಯ ಒಟಿಟಿ ಕರ್ನಾಟಕಕ್ಕೂ ಬೇಕು. ಈ ಕುರಿತು ಸರಕಾರದ ಗಮನ ಸೆಳೆಯಲಿದ್ದೇವೆ" ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ಹೇಳಿದ್ದಾರೆ.
